ಧರ್ಮಸ್ಥಳ ಬುರುಡೆ ಕೇಸ್: SIT ತನಿಖೆ ರದ್ದು ಮಾಡಿ CIDಗೆ ವಹಿಸಲು ಸರ್ಕಾರ ಚಿಂತನೆ

Untitled design 2025 08 27t091523.796

ಧರ್ಮಸ್ಥಳದ ಬುರುಡೆ ಪ್ರಕರಣವು ಕರ್ನಾಟಕದಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿದೆ. ಕಳೆದ 20 ವರ್ಷಗಳಲ್ಲಿ ನಡೆದಿದೆ ಎನ್ನಲಾದ ನಾಪತ್ತೆ ಮತ್ತು ಹತ್ಯೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಚಿನ್ನಯ್ಯ ಎಂಬಾತನ ಆರೋಪದಿಂದ ಈ ಕೇಸ್ ರಾಜ್ಯದ ಗಮನ ಸೆಳೆಯಿತು. ಆತನ ಹೇಳಿಕೆಯ ಆಧಾರದ ಮೇಲೆ ರಾಜ್ಯ ಸರ್ಕಾರವು ವಿಶೇಷ ತನಿಖಾ ತಂಡ (SIT) ರಚಿಸಿತ್ತು. ಆದರೆ, ಈಗ ಈ ಆರೋಪಗಳು ಸುಳ್ಳು ಎಂದು ಕಂಡುಬಂದಿದ್ದರಿಂದ ತನಿಖೆಯ ದಿಕ್ಕು ಬದಲಾಗುವ ಸಾಧ್ಯತೆ ಇದೆ. SIT ರದ್ದಾಗಿ CIDಗೆ ತನಿಖೆಯ ಜವಾಬ್ದಾರಿ ವರ್ಗಾವಣೆಯಾಗುವ ಸಂಭವವಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಚಿನ್ನಯ್ಯನ ಆರೋಪಗಳು

ಚಿನ್ನಯ್ಯ ಎಂಬಾತ ಧರ್ಮಸ್ಥಳದಲ್ಲಿ ಸ್ವಚ್ಛತಾ ಕಾರ್ಮಿಕನಾಗಿ ಕೆಲಸ ಮಾಡಿದ್ದಾಗ ನೂರಾರು ಶವಗಳನ್ನು ಹೂತಿಟ್ಟಿದ್ದೇನೆ ಎಂದು ಬೆಳ್ತಂಗಡಿ ನ್ಯಾಯಾಲಯದಲ್ಲಿ ಹೇಳಿಕೆ ನೀಡಿದ್ದ. ಈ ಆರೋಪಗಳು ರಾಜ್ಯಾದ್ಯಂತ ಆತಂಕವನ್ನುಂಟು ಮಾಡಿದ್ದವು. ಆತನ ಹೇಳಿಕೆಯ ಆಧಾರದ ಮೇಲೆ SIT ರಚನೆಯಾಗಿ, ಪ್ರಣವ್ ಮೊಹಾಂತಿ ನೇತೃತ್ವದಲ್ಲಿ ತನಿಖೆ ಆರಂಭವಾಯಿತು. ಆದರೆ, ಚಿನ್ನಯ್ಯ ಗುರುತಿಸಿದ 17 ಸ್ಥಳಗಳಲ್ಲಿ ಕೇವಲ ಎರಡು ಜಾಗದಲ್ಲಿ ಮಾತ್ರ ಅಸ್ಥಿಪಂಜರದ ಅವಶೇಷಗಳು ಪತ್ತೆಯಾಗಿವೆ. ಇದಾದ ಬಳಿಕ ಆತನ ಹೇಳಿಕೆಯ ಬಗ್ಗೆ ಪ್ರಶ್ನೆಗಳು ಎದ್ದಿವೆ. SIT ತಂಡವು ಆತನನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ, ಆತನ ಹೇಳಿಕೆ ಸುಳ್ಳು ಎಂದು ಕಂಡುಬಂದಿವೆ. ಇದರಿಂದಾಗಿ ಆಗಸ್ಟ್ 23ರಂದು ಚಿನ್ನಯ್ಯನನ್ನು ಬಂಧಿಸಲಾಯಿತು.

SIT ತನಿಖೆ ರದ್ದು CIDಗೆ ವರ್ಗಾವಣೆ?

ಚಿನ್ನಯ್ಯನ ಆರೋಪಗಳು ಸುಳ್ಳು ಎಂದು ಕಂಡುಬಂದಿರುವ ಹಿನ್ನೆಲೆಯಲ್ಲಿ, SIT ತನಿಖೆಯನ್ನು ರದ್ದುಗೊಳಿಸಿ CIDಗೆ ವರ್ಗಾಯಿಸುವ ಬಗ್ಗೆ ರಾಜ್ಯ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ತಿಳಿದುಬಂದಿದೆ. ಈ ಕೇಸ್‌ನ ತನಿಖೆಗೆ SITಗೆ ಪೊಲೀಸ್ ಠಾಣೆಯ ಅಧಿಕಾರವನ್ನು ಮೊದಲ ಬಾರಿಗೆ ನೀಡಲಾಗಿತ್ತು. ಆದರೆ, ತನಿಖೆಯಲ್ಲಿ ಯಾವುದೇ ಗಣನೀಯ ಪುರಾವೆಗಳು ಸಿಗದಿರುವುದರಿಂದ ಸರ್ಕಾರ ಈಗ CIDಗೆ ಈ ಜವಾಬ್ದಾರಿಯನ್ನು ವಹಿಸುವ ಸಾಧ್ಯತೆ ಇದೆ. ಗೃಹ ಸಚಿವ ಜಿ. ಪರಮೇಶ್ವರ್ ಮತ್ತು ಡಿಜಿ-ಐಜಿಪಿ ಸಲೀಂ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಜೊತೆ ಈ ಬಗ್ಗೆ ಸಮಾಲೋಚನೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಧರ್ಮಸ್ಥಳದಲ್ಲಿ ಕಳೆದ ಎರಡು ದಶಕಗಳಲ್ಲಿ ನಡೆದಿರುವ ನಾಪತ್ತೆ ಮತ್ತು ಅನುಮಾನಾಸ್ಪದ ಸಾವಿನ ಪ್ರಕರಣಗಳ ಬಗ್ಗೆ ಸಮಗ್ರ ತನಿಖೆಗೆ ಒತ್ತಡ ಹೆಚ್ಚಾಗಿದೆ. ಕರ್ನಾಟಕ ರಾಜ್ಯ ಮಹಿಳಾ ಆಯೋಗವು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ವಿಶೇಷ ತನಿಖಾ ತಂಡ ರಚಿಸುವಂತೆ ಮುಖ್ಯಮಂತ್ರಿಗೆ ಪತ್ರ ಬರೆದಿದೆ. ಆದರೆ, ಚಿನ್ನಯ್ಯನ ಆರೋಪಗಳು ಸುಳ್ಳಾಗಿರುವುದರಿಂದ, ಹಳೇ ಪ್ರಕರಣಗಳ ತನಿಖೆಯನ್ನು SITಗೆ ಬದಲಿಗೆ, ಈ ಕೇಸ್‌ಗಳನ್ನು CIDಗೆ ವರ್ಗಾಯಿಸಿ, ತನಿಖೆಯನ್ನು ಶೀಘ್ರವಾಗಿ ಮುಗಿಸುವಂತೆ ಸೂಚನೆ ನೀಡುವ ಸಾಧ್ಯತೆ ಇದೆ.

Exit mobile version