ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಅಸಹಜ ಸಾವುಗಳು ಮತ್ತು ಶವಗಳನ್ನು ಗೌಪ್ಯವಾಗಿ ಹೂತಿರುವ ಆರೋಪದ ಪ್ರಕರಣವು ರಾಜ್ಯದಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿದೆ. ಈ ಪ್ರಕರಣದ ಬಗ್ಗೆ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ವಿಧಾನಸಭೆಯಲ್ಲಿ ಸ್ಪಷ್ಟನೆ ನೀಡಿದ್ದು, ತನಿಖೆಯು ಸಂಪೂರ್ಣವಾಗಿ ನಿಷ್ಪಕ್ಷಪಾತವಾಗಿ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.
ಅನಾಮಿಕ ದೂರುದಾರನ ಹೇಳಿಕೆಯ ಆಧಾರದ ಮೇಲೆ ಎಸ್‌ಐಟಿ ತಂಡವು ತನಿಖೆಯನ್ನು ಆರಂಭಿಸಿತು. ದೂರುದಾರನ 161 ಮತ್ತು 164 ಹೇಳಿಕೆಗಳನ್ನು ದಾಖಲಿಸಲಾಗಿದ್ದು, ಆತ ತಾನು ಶವಗಳನ್ನು ಹೂತಿರುವ ಸ್ಥಳಗಳನ್ನು ತೋರಿಸಿದ್ದಾನೆ. ಈ ಸ್ಥಳಗಳನ್ನು ಎಸ್‌ಐಟಿ ಮ್ಯಾಪ್ ಮಾಡಿದ್ದು, ಎರಡು ಕಡೆಗಳಲ್ಲಿ ಅಸ್ಥಿಪಂಜರ ಮತ್ತು ಮೂಳೆ ತುಣುಕುಗಳು ಪತ್ತೆಯಾಗಿವೆ. ಈ ಸಾಕ್ಷ್ಯಗಳನ್ನು ಫಾರೆನ್ಸಿಕ್ ಸೈನ್ಸ್ ಲ್ಯಾಬೋರೇಟರಿ (ಎಫ್‌ಎಸ್‌ಎಲ್)ಗೆ ಕಳುಹಿಸಲಾಗಿದ್ದು, ವರದಿ ಬರುವವರೆಗೂ ಎಸ್‌ಐಟಿಯಿಂದ ತನಿಖೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದರು.
ಅನಾಮಿಕ ವ್ಯಕ್ತಿಯೊಬ್ಬ ಜುಲೈ 3, 2025 ರಂದು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದಾಖಲಿಸಿದ ದೂರಿನ ಮೂಲಕ ತಿಳಿಸಿದ್ದು, ಇದು ರಾಜ್ಯ ಸರ್ಕಾರವನ್ನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿತ್ತು. ಈ ಪ್ರಕರಣದ ಗಂಭೀರತೆಯನ್ನು ಗಮನದಲ್ಲಿಟ್ಟುಕೊಂಡು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜುಲೈ 20ರಂದು ಐಪಿಎಸ್ ಅಧಿಕಾರಿ ಪ್ರಣವ್ ಮೊಹಂತಿ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿದರು. ಈ ತಂಡದಲ್ಲಿ ಎಂ.ಎನ್. ಅನುಚೇತ್, ಸೌಮ್ಯಲತಾ, ಮತ್ತು ಜಿತೇಂದ್ರ ಕುಮಾರ್ ಸದಸ್ಯರಾಗಿದ್ದರು, ಆದರೆ ಸೌಮ್ಯಲತಾ ಅವರ ಮನವಿಯ ಮೇರೆಗೆ ಅವರನ್ನು ತಂಡದಿಂದ ಕೈಬಿಡಲಾಯಿತು ಎಂದು ತಿಳಿಸಿದರು.
ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ಅವರು ಜುಲೈ 14, 2025 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು, ಕಳೆದ 20 ವರ್ಷಗಳಲ್ಲಿ ಧರ್ಮಸ್ಥಳದಲ್ಲಿ ನಾಪತ್ತೆಯಾದ ಮಹಿಳೆಯರು, ವಿದ್ಯಾರ್ಥಿನಿಯರ ಅಸಹಜ ಸಾವುಗಳು, ಕೊಲೆ, ಮತ್ತು ಅತ್ಯಾಚಾರ ಪ್ರಕರಣಗಳ ಬಗ್ಗೆ ಸಮಗ್ರ ತನಿಖೆಗೆ ಎಸ್‌ಐಟಿ ರಚನೆಗೆ ಮನವಿ ಮಾಡಿದ್ದರು. ಈ ಮನವಿಯನ್ನು ಪುರಸ್ಕರಿಸಿ ಸರ್ಕಾರವು ಎಸ್‌ಐಟಿ ರಚನೆಗೆ ಕ್ರಮ ಕೈಗೊಂಡಿತ್ತು.
ಎಸ್‌ಐಟಿ ತಂಡವು ದೂರುದಾರನಿಂದ ಸ್ಥಳಗಳನ್ನು ಗುರುತಿಸಿ, ಭೂಮಿ ಉತ್ಖನನ ಕಾರ್ಯವನ್ನು ನಡೆಸಿತ್ತು. ಎರಡು ಸ್ಥಳಗಳಲ್ಲಿ ಸಿಕ್ಕ ಅಸ್ಥಿಪಂಜರ ಮತ್ತು ಮೂಳೆ ತುಣುಕುಗಳನ್ನು ಎಫ್‌ಎಸ್‌ಎಲ್‌ಗೆ ಕಳುಹಿಸಲಾಗಿದೆ. ಈ ವರದಿಯ ಫಲಿತಾಂಶವು ತನಿಖೆಯ ಮುಂದಿನ ಹಾದಿಯನ್ನು ನಿರ್ಧರಿಸಲಿದೆ. ಎಫ್‌ಎಸ್‌ಎಲ್ ವರದಿ ಬರುವವರೆಗೆ ಉತ್ಖನನ ಕಾರ್ಯವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ದೂರುದಾರನ ಗುರುತನ್ನು ಗೌಪ್ಯವಾಗಿರಿಸಲಾಗಿದ್ದು, ವಿಟ್‌ನೆಸ್ ಪ್ರೊಟೆಕ್ಷನ್ ಆಕ್ಟ್ ಅಡಿಯಲ್ಲಿ ಆತನಿಗೆ ರಕ್ಷಣೆ ನೀಡಲಾಗಿದೆ ಎಂದು ಹೇಳಿದರು.
ಈ ಪ್ರಕರಣವು ರಾಜಕೀಯ ತಿರುವನ್ನು ಪಡೆದಿದ್ದು, ಪ್ರತಿಪಕ್ಷ ಬಿಜೆಪಿಯು ಇದನ್ನು ಧರ್ಮಸ್ಥಳದ ಧಾರ್ಮಿಕ ಕ್ಷೇತ್ರದ ವಿರುದ್ಧ ಷಡ್ಯಂತ್ರ ಎಂದು ಆರೋಪಿಸಿದೆ. ಬಿಜೆಪಿ ಸದಸ್ಯರು ಸದನದಲ್ಲಿ ಈ ವಿಷಯವನ್ನು ತೀವ್ರವಾಗಿ ಚರ್ಚಿಸಿದ್ದು, ದೂರುದಾರನ ಹಿನ್ನೆಲೆಯನ್ನು ಬಹಿರಂಗಪಡಿಸಬೇಕೆಂದು ಒತ್ತಾಯಿಸಿದ್ದಾರೆ. ಆದರೆ, ಗೃಹ ಸಚಿವರು ಈ ಆರೋಪಗಳನ್ನು ತಳ್ಳಿಹಾಕಿದ್ದು, ತನಿಖೆಯು ರಾಜಕೀಯ ಒತ್ತಡದಿಂದ ಮುಕ್ತವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.