ಧರ್ಮಸ್ಥಳ, ಸೆಪ್ಟೆಂಬರ್ 26: ರಾಜ್ಯದಲ್ಲಿ ಅಷ್ಟೇ ಅಲ್ಲ, ಇಡೀ ದೇಶದಲ್ಲೇ ಸಂಚಲನ ಮೂಡಿಸಿದ ಧರ್ಮಸ್ಥಳದ ಬುರುಡೆ ಕೇಸ್ ಬಗ್ಗೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರು ಮಾತನಾಡಿದ್ದಾರೆ. ನನ್ನ ವಿರುದ್ಧ ಯಾಕಿಷ್ಟು ಹಗೆತನ? ಯಾಕಿಷ್ಟು ದಬ್ಬಾಳಿಕೆ? ಅನ್ನೋದು ಗೊತ್ತಿಲ್ಲ, ನಾವು ಸತ್ಯದಿಂದ ಇದ್ದೇವೆ, ಮುಂದೇಯೂ ಹಾಗೇ ಇರ್ತೀವಿ ಎಂದು ಅವರು ಹೇಳಿದ್ದಾರೆ.
ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು. “ನನ್ನ ಮೇಲೆ ಯಾಕಿಷ್ಟು ಹಗೆತನ? ಯಾಕಿಷ್ಟು ದಬ್ಬಾಳಿಕೆ?” ಎಂದು ಅವರು ನೋವು ವ್ಯಕ್ತಪಡಿಸಿದರು. “ನಾವು ಸತ್ಯದಿಂದ ಇದ್ದೇವೆ, ಮುಂದೇಯೂ ಹಾಗೇ ಇರ್ತೀವಿ” ಎಂದು ಹೇಳಿದ ಅವರು, SITಯಿಂದ ಸತ್ಯ ಹೊರಬರುತ್ತಿದೆ ಎಂದು ಸರ್ಕಾರಕ್ಕೆ ಕೃತಜ್ಞತೆ ತಿಳಿಸಿದರು. “ಎಷ್ಟು ನಿಷ್ಠುರವಾಗಿ ದಬ್ಬಾಳಿಕೆ ನಡೆದಿದೆ ಅನ್ನೋದನ್ನು ನೋಡಿದ್ದೀರಿ. ನನ್ನ ವಿರುದ್ಧ ಯಾಕಿಷ್ಟು ಹಗೆತನ ಅನ್ನೋದು ಗೊತ್ತಿಲ್ಲ” ಎಂದು ಅವರು ಹೇಳಿದರು.
SIT ವರದಿಯ ಅರ್ಧ ಭಾಗ ಬಂದ ಕಾರಣ ಧೈರ್ಯವಾಗಿ ಮಾತಾಡುತ್ತಿದ್ದೇನೆ ಎಂದು ಹೆಗ್ಗಡೆ ಅವರು ಹೇಳಿದರು. “ನಮ್ಮ ಹೊಳಪು ಹಾಗೆ ಉಳಿದಿದೆ” ಎಂದು ಧರ್ಮಸ್ಥಳದ ಧಾರ್ಮಿಕ ಮತ್ತು ಸಾಮಾಜಿಕ ಕೊಡುಗೆಯನ್ನು ಸ್ಮರಿಸಿದರು. ಶ್ರೀ ಮಂಜುನಾಥ ಸ್ವಾಮಿ, ಅಣ್ಣಪ್ಪ ಸ್ವಾಮಿ ಎಲ್ಲವನ್ನೂ ನೋಡಿಕೊಳ್ತಾರೆ ಎಂದು ದೈವ ನಂಬಿಕೆಯನ್ನು ವ್ಯಕ್ತಪಡಿಸಿದರು. “ಸತ್ಯದಿಂದ ಇದ್ದೇವೆ, ಮುಂದೆಯೂ ಇರ್ತೀವಿ” ಎಂದು ಪುನಃ ಹೇಳಿದ ಅವರು, ಧರ್ಮಸ್ಥಳ ಕ್ಷೇತ್ರ ಬೇರೆಯಲ್ಲ, ಧರ್ಮಸ್ಥ ಊರಿನವರು ಬೇರೆಯಲ್ಲ ಎಂದು ಸ್ಪಷ್ಟಪಡಿಸಿದರು. ನಾವು ಯಾರನ್ನೂ ದ್ವೇಷಿಸಿಲ್ಲ, ಯಾರನ್ನೂ ಹೀಯಾಳಿಸಿಲ್ಲ ಎಂದು ಹೇಳಿ, “ಈ ಶತ್ರುತ್ವ, ದ್ವೇಷ ಯಾಕೆಂದು ನನಗೂ ಗೊತ್ತಾಗಬೇಕು” ಎಂದು ನೋವಿನಿಂದ ಹೆಗ್ಗಡೆ ಅವರು ಕೇಳಿದರು.
ಹೆಗ್ಗಡೆ ಅವರು, ಈ ಪ್ರಕರಣದಲ್ಲಿ “ಒಂದೊಂದೇ ಸತ್ಯಗಳು ಹೊರಗೆ ಬರುತ್ತಿದೆ, ಎಲ್ಲರಿಗೂ ಒಳ್ಳೆಯದಾಗಲಿ” ಎಂದು ಹೇಳಿದ್ದಾರೆ. ಈ ತನಿಖೆಯು ಸತ್ಯವನ್ನು ತೆಗೆದುಹಾಕುತ್ತದೆ ಎಂಬ ನಂಬಿಕೆಯಿದೆ ಎಂದು ಹೆಗ್ಗಡೆ ಅವರು ತಿಳಿಸಿದರು.