ಜೈಲುಗಳಲ್ಲಿ ಕೈದಿಗಳ ಭೇಟಿಗೆ ಹೊಸ ರೂಲ್ಸ್‌: ರಾಜಾತಿಥ್ಯಕ್ಕೆ ಬೀಳಲಿದೆ ಬ್ರೇಕ್!

Untitled design 2026 03 09T194524.477

ಬೆಂಗಳೂರು: ರಾಜ್ಯದ ಕಾರಾಗೃಹಗಳಲ್ಲಿ ಕೈದಿಗಳಿಗೆ ಸಿಗುತ್ತಿರುವ ಅಕ್ರಮ ಸೌಲಭ್ಯಗಳು ಮತ್ತು ರಾಜಾತಿಥ್ಯದ ವರದಿಗಳು ಸದ್ದು ಮಾಡುತ್ತಿರುವ ಬೆನ್ನಲ್ಲೇ, ಕಾರಾಗೃಹ ಮತ್ತು ಸುಧಾರಣಾ ಸೇವಾ ಇಲಾಖೆಯ ಡಿಜಿಪಿ ಅಲೋಕ್ ಕುಮಾರ್ ಅವರು ಆಪರೇಷನ್ ಕ್ಲೀನ್-ಅಪ್ ಆರಂಭಿಸಿದ್ದಾರೆ. ಜೈಲುಗಳ ಒಳಗಿನ ಭ್ರಷ್ಟಾಚಾರ ಮತ್ತು ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಸಿಬ್ಬಂದಿಗಳ ವರ್ಗಾವಣೆ ಮಾತ್ರವಲ್ಲದೆ, ಕೈದಿಗಳ ವಿಶೇಷ ಸಂದರ್ಶನಕ್ಕೂ ಕಟ್ಟುನಿಟ್ಟಿನ ಹೊಸ ಮಾರ್ಗಸೂಚಿಗಳನ್ನು ಇಂದು (ಮಾರ್ಚ್ 09) ಬಿಡುಗಡೆ ಮಾಡಿದ್ದಾರೆ.

ವಿಶೇಷ ಸಂದರ್ಶನಕ್ಕೆ ಯಾರಿಗೆ ಅವಕಾಶ?

ಇನ್ಮುಂದೆ ಜೈಲಿನಲ್ಲಿರುವ ಕೈದಿಗಳನ್ನು ಭೇಟಿ ಮಾಡುವುದು ಅಷ್ಟು ಸುಲಭವಲ್ಲ. ಕೇವಲ ಮಾನವೀಯ ಮತ್ತು ತುರ್ತು ಕಾರಣಗಳಿದ್ದಾಗ ಮಾತ್ರ ವಿಶೇಷ ಸಂದರ್ಶನಕ್ಕೆ ಅವಕಾಶ ನೀಡಲಾಗುತ್ತದೆ:

ಪಾಲಿಸಬೇಕಾದ ಕಟ್ಟುನಿಟ್ಟಿನ ನಿಯಮಗಳು

ಕೈದಿಗಳನ್ನು ಭೇಟಿ ಮಾಡುವ ಮುನ್ನ ಸಂದರ್ಶಕರು ಈ ಕೆಳಗಿನ ನಿಯಮಗಳನ್ನು ಪಾಲಿಸುವುದು ಕಡ್ಡಾಯ:

  1. ಲಿಖಿತ ಅನುಮತಿ: ಆಯಾ ಜೈಲು ಮುಖ್ಯಸ್ಥರಿಂದ ಲಿಖಿತ ರೂಪದ ಪೂರ್ವಾನುಮತಿ ಪಡೆಯಬೇಕು.

  2. ಅರ್ಜಿ ಸಲ್ಲಿಕೆ: ಸಂದರ್ಶನಕ್ಕೆ ಕನಿಷ್ಠ 2 ಕೆಲಸದ ದಿನಗಳ ಮುಂಚಿತವಾಗಿ ಅರ್ಜಿ ಸಲ್ಲಿಸಬೇಕು.

  3. ಸಮಯ ಮಿತಿ: ಸಂದರ್ಶನಕ್ಕೆ ಕೇವಲ 30 ನಿಮಿಷಗಳ ಕಾಲಾವಕಾಶ ಮಾತ್ರ ಇರುತ್ತದೆ.

  4. ಸಂಖ್ಯೆ ಮಿತಿ: ಒಂದೇ ಬಾರಿಗೆ 5 ಮಂದಿಗಿಂತ ಹೆಚ್ಚು ಜನರಿಗೆ ಭೇಟಿಗೆ ಅವಕಾಶ ಇರುವುದಿಲ್ಲ.

  5. ನಿಗಾ: ಪ್ರತಿಯೊಂದು ಸಂದರ್ಶನವೂ ಜೈಲು ಅಧಿಕಾರಿಯ ನೇರ ಮೇಲ್ವಿಚಾರಣೆಯಲ್ಲಿ ನಡೆಯುತ್ತದೆ. ಭದ್ರತಾ ತಪಾಸಣೆಗೆ ಸಂದರ್ಶಕರು ಕಡ್ಡಾಯವಾಗಿ ಸಹಕರಿಸಬೇಕು.

ಸಿಬ್ಬಂದಿಗಳಿಗೂ ವರ್ಗಾವಣೆ ಭೀತಿ

ಕೇವಲ ಕೈದಿಗಳಲ್ಲದೆ, ಜೈಲು ಸಿಬ್ಬಂದಿಗಳ ಮೇಲೂ ಅಲೋಕ್ ಕುಮಾರ್ ಕಣ್ಣಿಟ್ಟಿದ್ದಾರೆ. ವರ್ಷಾನುಗಟ್ಟಲೆ ಒಂದೇ ಜೈಲಿನಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಯನ್ನು ವರ್ಗಾವಣೆ ಮಾಡಲು ಪ್ಲಾನ್ ಮಾಡಲಾಗಿದೆ. ಒಂದೇ ಕಡೆ ದೀರ್ಘಕಾಲ ಇದ್ದರೆ ಸಿಬ್ಬಂದಿಗಳು ಕೈದಿಗಳೊಂದಿಗೆ ಅಕ್ರಮ ನಂಟು ಬೆಳೆಸಿಕೊಂಡು ಹಣಕ್ಕಾಗಿ ಸೌಲಭ್ಯಗಳನ್ನು ಒದಗಿಸುತ್ತಾರೆ ಎಂಬ ದೂರುಗಳ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗುತ್ತಿದೆ. ಈ ಹೊಸ ಬದಲಾವಣೆಗಳು ರಾಜ್ಯದ ಕಾರಾಗೃಹ ವ್ಯವಸ್ಥೆಯಲ್ಲಿ ದೊಡ್ಡ ಸುಧಾರಣೆ ತರುವ ನಿರೀಕ್ಷೆಯಿದೆ.

Exit mobile version