ಕೊಡಗು: ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಕಾರಿನಲ್ಲಿ ಹರಿಯಾಣ ಮೂಲದ ಮಹಿಳೆಯ ಶವ ಪತ್ತೆಯಾಗಿರುವ ಘಟನೆ ಕೊಡಗು ಜಿಲ್ಲೆಯ ವಿರಾಜಪೇಟೆಯಲ್ಲಿ ನಡೆದಿದೆ.
ಘಟನೆ ಶುಕ್ರವಾರ ಮಧ್ಯರಾತ್ರಿ 2 ಗಂಟೆ ಸುಮಾರಿಗೆ ನಡೆದಿದೆ. ವಿರಾಜಪೇಟೆ ಸಮೀಪದ ಲಿಂಗದಪುರ ಅರಣ್ಯ ಪ್ರದೇಶದ ಚೆಕ್‌ಪೋಸ್ಟ್ ಬಳಿ ಬರುತ್ತಿದ್ದ ಕಾರಿನ ಚಲನವಲನ ನೋಡಿದ ಪೊಲೀಸ್ ಸಿಬ್ಬಂದಿ, ಅನುಮಾನಗೊಂಡು ತಪಾಸಣೆಗಾಗಿ ಕಾರನ್ನು ನಿಲ್ಲಿಸಲು ಸೂಚಿಸಿದರು. ಸೂಚನೆ ನೀಡುತ್ತಿದ್ದಂತೆ ಚಾಲಕ ಕಾರನ್ನು ಬೇರೆ ದಾರಿಗೆ ತಿರುಗಿಸಲು ಯತ್ನಿಸಿದ್ದ.. ತಕ್ಷಣ ಕಾರನ್ನು ತಡೆದು ಪರಿಶೀಲನೆ ನಡೆಸಿದಾಗ ಹಿಂಬದಿ ಸೀಟಿನಲ್ಲಿ ಮಲಗಿಸಿದಂತೆ ಇಟ್ಟಿದ್ದ ಮಹಿಳೆಯ ಶವ ಪತ್ತೆಯಾಗಿದೆ.
ಈ ಘಟನೆಯಿಂದ ಬೆಚ್ಚಿಬಿದ್ದ ಸಿಬ್ಬಂದಿ ತಕ್ಷಣವೆ ಸಿದ್ದಾಪುರ ಪೊಲೀಸ್ ಠಾಣೆಗೆ ಮಾಹಿತಿಯನ್ನು ನೀಡಿದರು. ಕೆಲವೇ ನಿಮಿಷಗಳಲ್ಲಿ ಸ್ಥಳಕ್ಕೆ ಚಕ್ರಪಾಣಿ ಪೊಲೀಸ್ ತಂಡ ಆಗಮಿಸಿ ಕಾರಿನಲ್ಲಿದ್ದ ಮೂವರು ವ್ಯಕ್ತಿಗಳನ್ನು ವಶಕ್ಕೆ ಪಡೆದು ವಿಚಾರಣೆ ಆರಂಭಿಸಿದರು. ಪೊಲೀಸ್ ವಶದಲ್ಲಿದ್ದವರು ಎಲ್ಲರೂ ಹರಿಯಾಣ ಮೂಲದವರಾಗಿದ್ದು, ಮೈಸೂರಿನ ಮೇಟಗಲ್ಲಿ ಪ್ರದೇಶದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು ಎಂದು ತಿಳಿದುಬಂದಿದೆ.
ಪೊಲೀಸರ ಪ್ರಾಥಮಿಕ ವಿಚಾರಣೆಯಲ್ಲಿ ಮೃತ ಮಹಿಳೆಯ ಹೆಸರು ನಾನ್ನಿ ದೇವಿ ಎಂದು ಗುರುತಿಸಲಾಗಿದೆ. ಆಕೆಯ ಪತಿ ರಾಕೇಶ್ ಕುಮಾರ್, ಹಾಗೂ ಆತನಿಬ್ಬರು ಸ್ನೇಹಿತರು ವಿಕಾಸ್ ಮತ್ತು ಸತ್‌ವೀರ್ ಕಾರಿನಲ್ಲಿ ಇದ್ದರು. ನಾನ್ನಿ ದೇವಿ ಮೂರ್ಛೆ (ಎಪಿಲೆಪ್ಸಿ) ಸಮಸ್ಯೆಯಿಂದ ಬಳಲುತ್ತಿದ್ದು, ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎಂದು ರಾಕೇಶ್ ಹೇಳಿದ್ದಾನೆ.
ಆರೋಪಿಗಳು ಮೈಸೂರಿನ ಮೇಟಗಳ್ಳಿಯಲ್ಲಿ ವಾಸವಾಗಿದ್ದ ಹರಿಯಾಣ ಮೂಲದ ರಾಕೇಶ್ ಕುಮಾರ್ ಮತ್ತು ಅವರ ಇಬ್ಬರು ಸ್ನೇಹಿತರು ವಿಕಾಸ್ ಮತ್ತು ಸತ್‌ವೀರ್. ರಾಕೇಶ್ ಕುಮಾರ್ ತನ್ನ ಪತ್ನಿ ನಾನ್ನಿ ದೇವಿಯವರೊಂದಿಗೆ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ.
ರಾಕೇಶ್ ವಿಚಾರಣೆ ವೇಳೆ ಒಂದಿಷ್ಟು ಮಾಹಿತಿ ನೀಡಿದ್ದು, ಶುಕ್ರವಾರ ರಾತ್ರಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ನಾನ್ನಿ ದೇವಿ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಕೆಲಸದಿಂದ ಮನೆಗೆ ವಾಪಸ್ಸಾದ ಆತ ಪತ್ನಿಯ ಶವವನ್ನು ನೋಡಿ ಬೆಚ್ಚಿಬಿದ್ದಿದ್ದಾನೆ. ಗಾಬರಿಯಲ್ಲಿ ಸ್ನೇಹಿತರಾದ ವಿಕಾಸ್ ಮತ್ತು ಸತ್‌ವೀರ್ ಅವರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾನೆ. ಬಳಿಕ, ಮೂವರು ಸೇರಿ ಶವವನ್ನು ಮೈಸೂರಿನಲ್ಲೇ ಬಿಟ್ಟುಹೋಗುವುದು ಅಥವಾ ಪೋಲೀಸರಿಗೆ ಮಾಹಿತಿ ನೀಡುವುದರ ಬಗ್ಗೆ ಚರ್ಚಿಸಿದ್ದರು. ಆದರೆ ಆತಂಕದಿಂದ ಪತ್ನಿಯ ಶವವನ್ನು ಕಾರಿನಲ್ಲಿ ಇಟ್ಟು ಸಾಗಿಸಲು ನಿರ್ಧರಿಸಿದ್ದರು ಎನ್ನಲಾಗಿದೆ.
ಹೀಗೆ ಶವವನ್ನು ಸಾಗಿಸುತ್ತಿರುವಾಗ, ಲಿಂಗದಪುರ ಅರಣ್ಯ ಚೆಕ್‌ಪೋಸ್ಟ್‌ನಲ್ಲಿ ರಾತ್ರಿ 2ಗಂಟೆ ಸುಮಾರಿಗೆ ಅವರು ಸಿಕ್ಕಿ ಬಿದ್ದಿದ್ದಾರೆ. ಪೊಲೀಸರು ಈಗ ಮೈಸೂರಿನಲ್ಲಿರುವ ಘಟನಾ ಸ್ಥಳದ ಮೇಲ್ವಿಚಾರಣೆ ನಡೆಸುತ್ತಿದ್ದಾರೆ.
