ಮಾಜಿ MLC ದಯಾನಂದ್ ರೆಡ್ಡಿ ಅಪಹರಣ ಪ್ರಕರಣ: ನಾಲ್ವರು ಆರೋಪಿಗಳು ಅರೆಸ್ಟ್

Untitled design 2026 06 04T154825.294

ಬೆಂಗಳೂರು: ಬೆಂಗಳೂರಿನಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯ (MLC) ದಯಾನಂದ್ ರೆಡ್ಡಿ ಅವರನ್ನು ಅಪಹರಿಸಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದ ಪ್ರಕರಣದಲ್ಲಿ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಘಟನೆ ಬೆಂಗಳೂರಿನ ಗ್ರಾಮಾಂತರ ಜಿಲ್ಲೆಯ ಆನೇಕಲ್ ತಾಲೂಕಿನ ಹುಸ್ಕೂರು ಬಳಿ ನಡೆದಿದೆ. ದಯಾನಂದ್ ರೆಡ್ಡಿ ಅವರು “ಗೋಲ್ಡ್ ಕಾಯಿನ್ ಕ್ಲಬ್”ನಿಂದ ಹೊರಬರುತ್ತಿದ್ದ ಸಂದರ್ಭದಲ್ಲಿ ದುಷ್ಕರ್ಮಿಗಳು ಅವರನ್ನು ಕಿಡ್ನ್ಯಾಪ್‌ ಮಾಡಿದ್ದಾರೆ.

ಘಟನೆಯ ವಿವರ

ಆರೋಪಿಗಳು ಮೊದಲು ಗಿಫ್ಟ್ ನೀಡುವ ನೆಪದಲ್ಲಿ ದಯಾನಂದ್ ರೆಡ್ಡಿ ಅವರ ಕಾರಿನ ಬಳಿ ಬಂದಿದ್ದಾರೆ. ನಂತರ ಕೆಲವೇ ಕ್ಷಣಗಳಲ್ಲಿ ಗನ್ ತೋರಿಸಿ ಬೆದರಿಕೆ ಹಾಕಿ ಅವರನ್ನು ಬಲವಂತವಾಗಿ ಕಾರಿನಲ್ಲಿ ಕೂರಿಸಿದ್ದಾರೆ.

ಅಪಹರಣದ ನಂತರ ಆರೋಪಿಗಳು ದಯಾನಂದ್ ರೆಡ್ಡಿ ಅವರಿಂದ ಭಾರಿ ಹಣದ ಬೇಡಿಕೆ ಇಟ್ಟಿದ್ದಾರೆ. ಆರಂಭದಲ್ಲಿ 3 ಕೋಟಿ ರೂಪಾಯಿಗಳನ್ನು ನೀಡಬೇಕೆಂದು ಒತ್ತಾಯಿಸಿದ್ದಾರೆ. “ನಿನ್ನನ್ನು ಕೊಲ್ಲಲು 10 ಕೋಟಿ ಸುಪಾರಿ ನೀಡಿದ್ದಾರೆ” ಎಂದು ಹೇಳಿ ಗಂಭೀರ ಬೆದರಿಕೆ ಹಾಕಿದರೆಂಬ ಮಾಹಿತಿ ತನಿಖೆಯಲ್ಲಿ ಹೊರಬಂದಿದೆ. ಬಳಿಕ ಮಾತುಕತೆಯ ಮೂಲಕ ಬೇಡಿಕೆಯನ್ನು 2 ಕೋಟಿಗೆ ಇಳಿಸಲಾಗಿದೆ ಎಂದು ತಿಳಿದುಬಂದಿದೆ.

ಅಪಹರಣದ ವೇಳೆ ದಯಾನಂದ್ ರೆಡ್ಡಿ ಅವರನ್ನು ಗನ್ ತೋರಿಸಿ ನಿರಂತರವಾಗಿ ಒತ್ತಡಕ್ಕೆ ಒಳಪಡಿಸಲಾಗಿದೆ. ಆದರೆ ಅವರು ಹಣವನ್ನು ಬೆಳಿಗ್ಗೆ ಬ್ಯಾಂಕ್‌ನಿಂದ ತೆಗೆದುಕೊಂಡು ನೀಡುವುದಾಗಿ ಭರವಸೆ ನೀಡಿದ ನಂತರ ಆರೋಪಿಗಳು ಅವರನ್ನು ಮುಂಜಾನೆ ಸುಮಾರು 4 ಗಂಟೆ ವೇಳೆಗೆ ಬಿಡುಗಡೆ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಘಟನೆ ನಂತರ ದಯಾನಂದ್ ರೆಡ್ಡಿ ಅವರು ಅತ್ತಿಬೆಲೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತಕ್ಷಣವೇ ತನಿಖೆ ಆರಂಭಿಸಿದ್ದಾರೆ. ಸಿಸಿಟಿವಿ ದೃಶ್ಯಗಳು, ಮೊಬೈಲ್ ಲೊಕೇಶನ್ ಟ್ರ್ಯಾಕಿಂಗ್ ಹಾಗೂ ಸ್ಥಳೀಯ ಮಾಹಿತಿಗಳ ಆಧಾರದ ಮೇಲೆ ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ಆರಂಭಿಸಲಾಯಿತು.

ತೀವ್ರ ಶೋಧ ಕಾರ್ಯಾಚರಣೆಯ ಬಳಿಕ ಪೊಲೀಸರು ಕೇರಳ ಮೂಲದ ರೋಮಿಯೋ, ಪ್ರವೀಣ್, ಆಶಿಕ್ ಸೇರಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರನ್ನು ತೀವ್ರವಾಗಿ ವಿಚಾರಣೆಗೊಳಪಡಿಸಲಾಗುತ್ತಿದ್ದು, ಈ ಅಪಹರಣದ ಹಿಂದೆ ಇನ್ನೂ ಯಾರಾದರೂ ಭಾಗಿಯಾಗಿದ್ದಾರೆಯೇ ಎಂಬ ಬಗ್ಗೆ ತನಿಖೆ ಮುಂದುವರಿದಿದೆ.

Exit mobile version