ಬೆಂಗಳೂರು ಆ. 16: ಬೆಂಗಳೂರು ನಗರದ ಪ್ರತಿಷ್ಠಿತ ಹೋಟೆಲ್‌ಗಳ ಅಡುಗೆ ಮನೆಗಳ ಮೇಲೆ ನಡೆದ ದಿಢೀರ್ ದಾಳಿ ನಡೆಸಿ. ತೀವ್ರ ತಪಾಸಣೆ ನಡೆಸಿ, ಅವಧಿ ಮೀರಿದ ತಿಂಡಿ ತಿನಿಸು, ಇತರ ಪದಾರ್ಥಗಳನ್ನು ಮಾರಾಟ ಮಾಡುತ್ತಿದ್ದ ಹೋಟೇಲ್‌ಗಳಿಗೆ ನೋಟಿಸ್ ನೀಡಿ, ದಂಡ ವಿದಿಸಿದೆ. ಇದರ ಬೆನ್ನಲ್ಲೇ ಇದೀಗ ಪೇಯಿಂಗ್ ಗೆಸ್ಟ್ (PG) ಮತ್ತು ಹಾಸ್ಟೆಲ್‌ಗಳ ಮೇಲೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಹಾಗೂ ಬೆಂಗಳೂರು ಪೂರ್ವ ನಗರ ಪಾಲಿಕೆ ಜಂಟಿ ಕಾರ್ಯಾಚರಣೆ ಆರಂಭಿಸಿವೆ. ಲಕ್ಷಾಂತರ ವಿದ್ಯಾರ್ಥಿಗಳು ಮತ್ತು ಐಟಿ ಉದ್ಯೋಗಿಗಳು ವಾಸಿಸುವ ಪಿಜಿಗಳಲ್ಲಿ ಆರೋಗ್ಯ, ನೈರ್ಮಲ್ಯ ಹಾಗೂ ಸುರಕ್ಷತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪರಿಶೀಲಿಸಲಾಗುತ್ತಿದೆ.
ಪ್ರಮುಖ ಅಂಶಗಳು
-
ಬೆಂಗಳೂರಿನ ಪಿಜಿ ಮತ್ತು ಹಾಸ್ಟೆಲ್‌ಗಳ ಮೇಲೆ ದಿಢೀರ್ ತಪಾಸಣೆ
-
ಹೈಕೋರ್ಟ್ ನಿರ್ದೇಶನದ ಬಳಿಕ ಜಂಟಿ ಕಾರ್ಯಾಚರಣೆ
-
ಗೇರ್ ಸ್ಕೂಲ್ ರಸ್ತೆ, ನ್ಯೂ ಹಾರಿಜಾನ್, ತೂಬರಹಳ್ಳಿ ಮೊದಲ ಹಂತದಲ್ಲಿ ಪರಿಶೀಲನೆ
-
ಆಹಾರ, ನೀರು, ಅಗ್ನಿ ಸುರಕ್ಷತೆ ಸೇರಿದಂತೆ 6 ಅಂಶಗಳ ತಪಾಸಣೆ
-
ನಿಯಮ ಉಲ್ಲಂಘಿಸಿದ ಪಿಜಿಗಳಿಗೆ ಪರವಾನಗಿ ರದ್ದು ಸಾಧ್ಯ
ಕರ್ನಾಟಕ ಹೈಕೋರ್ಟ್ ನಿರ್ದೇಶನ ಹಾಗೂ ಸಾರ್ವಜನಿಕರಿಂದ ಬಂದ ದೂರುಗಳ ಆಧಾರದಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಗೇರ್ ಸ್ಕೂಲ್ ರಸ್ತೆ, ನ್ಯೂ ಹಾರಿಜಾನ್ ಕಾಲೇಜು ಸುತ್ತಮುತ್ತ ಹಾಗೂ ತೂಬರಹಳ್ಳಿ ಪ್ರದೇಶಗಳಲ್ಲಿರುವ ಪಿಜಿಗಳನ್ನು ಮೊದಲ ಹಂತದಲ್ಲಿ ತಪಾಸಣೆ ಮಾಡಲಾಗುತ್ತಿದೆ ಎಂದು ತಿಳಿದು ಬಂದಿದೆ.
ನಗರ ಯೋಜನಾ ಉಪ ನಿರ್ದೇಶಕರು, ಕಾರ್ಯಪಾಲಕ ಎಂಜಿನಿಯರ್, ಆರೋಗ್ಯ ವೈದ್ಯಾಧಿಕಾರಿ ಹಾಗೂ ಘನತ್ಯಾಜ್ಯ ನಿರ್ವಹಣಾ ಅಧಿಕಾರಿಗಳನ್ನೊಳಗೊಂಡ ಜಂಟಿ ತಂಡವನ್ನು ಈ ಕಾರ್ಯಾಚರಣೆಗೆ ನಿಯೋಜಿಸಲಾಗಿದೆ. ಸಾರ್ವಜನಿಕರ ಆರೋಗ್ಯ ಮತ್ತು ಸುರಕ್ಷತೆಯನ್ನು ಕಾಪಾಡುವ ಉದ್ದೇಶದಿಂದ ಬೆಂಗಳೂರು ಪೂರ್ವ ನಗರ ಪಾಲಿಕೆ ಆಯುಕ್ತ ಡಿ.ಎಸ್. ರಮೇಶ್ ಅಧಿಕಾರಿಗಳಿಗೆ ವಿಶೇಷ ಸೂಚನೆ ನೀಡಿದ್ದಾರೆ.
ಪಿಜಿಗಳಲ್ಲಿ ಏನೆಲ್ಲ ಪರಿಶೀಲನೆ?
-
ಆಹಾರ ತಯಾರಿಸುವ ಅಡುಗೆ ಮನೆಯ ಶುಚಿತ್ವ
-
ಕುಡಿಯುವ ನೀರಿನ ಗುಣಮಟ್ಟ ಹಾಗೂ ಒಳಚರಂಡಿ ವ್ಯವಸ್ಥೆ
-
ಕಟ್ಟಡ ಸುರಕ್ಷತೆ ಮತ್ತು ಅಗ್ನಿಶಾಮಕ ನಿಯಮಗಳ ಪಾಲನೆ
-
ವ್ಯಾಪಾರ ಪರವಾನಗಿ ಮತ್ತು ಅಗತ್ಯ ಅನುಮತಿಗಳು
-
ಘನತ್ಯಾಜ್ಯ ನಿರ್ವಹಣೆ
-
ಪಾರ್ಕಿಂಗ್ ಹಾಗೂ ಸಾರ್ವಜನಿಕ ರಸ್ತೆ ಒತ್ತುವರಿ
ಪೇಯಿಂಗ್ ಗೆಸ್ಟ್ (PG) ಮತ್ತು ಹಾಸ್ಟೆಲ್ ಕಾನೂನು ನಿಯಮ ಉಲ್ಲಂಘನೆ, ಅಶುಚಿ ಪರಿಸರ ಅಥವಾ ಅವಧಿ ಮೀರಿದ ಆಹಾರ ಬಳಕೆ ಪತ್ತೆಯಾದರೆ ಪರವಾನಗಿ ರದ್ದು, ದಂಡ ಹಾಗೂ ಕಾನೂನು ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
