ಬೆಂಗಳೂರು: ಚಿನ್ನ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಶಾಸಕ ಹಾಗೂ ಮಾಜಿ ಸಚಿವ ವಿನಯ್ ಕುಲಕರ್ಣಿಯವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ED) ಅಧಿಕಾರಿಗಳು ದಾಳಿ ನಡೆಸಿ, ನಿರಂತರವಾಗಿ 24 ಗಂಟೆಗಳ ಕಾಲ ಪರಿಶೀಲನೆ ನಡೆಸಿದ್ದಾರೆ. ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿರುವ ಅವರ ನಿವಾಸದಲ್ಲಿ ಈ ದಾಳಿ ನಡೆದಿದ್ದು, ಶನಿವಾರ ಸಂಜೆ ಆರಂಭವಾಗಿ ಭಾನುವಾರದವರೆಗೆ ಮುಂದುವರೆದಿದೆ.
ಚಿನ್ನ ಹಾಗೂ ಹಣಕಾಸು ವ್ಯವಹಾರಗಳೊಂದಿಗೆ ಸಂಬಂಧ ಹೊಂದಿರುವ ಐಶ್ವರ್ಯಾ ಗೌಡ ಹಾಗೂ ಶಿಲ್ಪಾ ಗೌಡ ಎಂಬುವವರು ದೊಡ್ಡ ಪ್ರಮಾಣದ ವಂಚನೆ ಮಾಡಿದ್ದಾರೆ ಎಂಬ ಮಾಹಿತಿ ಹೊರಬಿದ್ದಿತ್ತು. ತನಿಖೆಯ ವೇಳೆ ಕೋಟ್ಯಂತರ ರೂಪಾಯಿಗಳಷ್ಟು ಅಕ್ರಮ ಹಣ ವರ್ಗಾವಣೆ ಹಾಗೂ ಬೀನಾಮಿ ವ್ಯವಹಾರಗಳ ಅಂಶಗಳು ಬೆಳಕಿಗೆ ಬಂದಿದ್ದು, ಈ ಹಿಂದೆ ಪೊಲೀಸರು ಈ ಕುರಿತು ಇಡಿಗೆ ಮಾಹಿತಿ ನೀಡಿದ್ದಾರೆ.
ಈ ಮಾಹಿತಿ ಆಧರಿಸಿ ಇಡಿ ಪ್ರಕರಣವನ್ನು ಇಸಿಐಆರ್ ಅಡಿಯಲ್ಲಿ ದಾಖಲಿಸಿ, ವಿನಯ್ ಕುಲಕರ್ಣಿ ಸೇರಿದಂತೆ ಇತರರಿಗೆ ಸಂಬಂಧಿಸಿದವರ ಮನೆಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿತು. ವಿನಯ್ ಕುಲಕರ್ಣಿಯವರ ನಿವಾಸಕ್ಕೆ ನಾಲ್ಕು ಕಾರುಗಳಲ್ಲಿ ಬಂದ 16 ಜನ ಅಧಿಕಾರಿಗಳ ತಂಡ, ಮನೆ ಒಳಗೂ ಹೊರಗೂ ಪರಿಶೀಲನೆ ನಡೆಸಿ ಪ್ರಮುಖ ದಾಖಲೆಗಳನ್ನು ವಶಪಡಿಸಿಕೊಂಡಿದೆ.
ವಿಚಾರಣೆಯ ವೇಳೆ ಚಿನ್ನ ವಂಚನೆ ಪ್ರಕರಣದಲ್ಲಿ ಪ್ರಮುಖ ಪಾತ್ರವಹಿಸಿದ್ದ ಎನ್ನಲಾದ ಐಶ್ವರ್ಯಾ ಗೌಡರ ಕಾರು, ಶಾಸಕ ವಿನಯ್ ಕುಲಕರ್ಣಿಯವರ ಮನೆಯ ಗ್ಯಾರೇಜ್‌ನಲ್ಲಿ ಪತ್ತೆಯಾಗಿದೆ. ಇದರಿಂದಾಗಿ ಇಬ್ಬರ ನಡುವೆ ಹಣಕಾಸು ವ್ಯವಹಾರ ನಡೆದಿರುವ ಶಂಕೆ ಗಂಭೀರ ರೂಪ ಪಡೆದುಕೊಂಡಿದೆ.
ಇಡಿಗೆ ಲಭ್ಯವಾಗಿರುವ ಮಾಹಿತಿ ಪ್ರಕಾರ, ಈ ವ್ಯವಹಾರದಲ್ಲಿ ಹಲವು ಕೋಟಿ ರೂಪಾಯಿ ಬೀನಾಮಿ ವ್ಯವಹಾರ ನಡೆದಿದ್ದು, ಅದರೊಂದಿಗೆ ಬ್ಯಾಂಕ್ ಖಾತೆಗಳ ಮೂಲಕ ಹಣ ವರ್ಗಾವಣೆ ಆಗಿರುವುದೂ ಸೂಚನೆ ಸಿಕ್ಕಿದೆ. ಇಡಿಯ ಅಧಿಕಾರಿಗಳು ವಿನಯ್ ಕುಲಕರ್ಣಿಯವರ ಬ್ಯಾಂಕ್ ಖಾತೆಗಳ ದಾಖಲಾತಿಗಳನ್ನು ಪರಿಶೀಲಿಸುತ್ತಿದ್ದು, ಹಣದ ಮೂಲ, ಮತ್ತು ಬಳಕೆಯ ಬಗ್ಗೆ ಸುಳಿವು ಪಡೆಯಲು ಪ್ರಯತ್ನಿಸುತ್ತಿದ್ದಾರೆ.
ದಾಳಿಯ ಸಮಯದಲ್ಲಿ ಶಾಸಕರು ತಮ್ಮ ಮನೆಯಲ್ಲಿ ಇದ್ದರು. ಇಡಿ ಅಧಿಕಾರಿಗಳು ಅವರನ್ನು ಪ್ರಶ್ನಿಸಿ, ಹಲವಾರು ದಾಖಲೆಗಳನ್ನು ತೋರಿಸಿದ್ದಾರೆ.