ಒಂದು ಚಮಚ ಕೆಮ್ಮಿನ ಸಿರಪ್‌ನಿಂದ 11 ಮುಗ್ಧ ಮಕ್ಕಳ ಜೀವ ಬಲಿಯಾಗಿದೆ. ತಮಿಳುನಾಡಿನ ಖಾಸಗಿ ಔಷಧಿ ಕಂಪನಿಯಿಂದ ತಯಾರಾದ ಕೋಲ್ಡ್ರೀಫ್ ಸಿರಪ್‌ನಲ್ಲಿ ವಿಷಕಾರಕ ಡಯಥಿಲೀನ್ ಗ್ಲೈಕಾಲ್ (DEG) ಸೇರಿರುವುದು ದೃಢಪಟ್ಟಿದ್ದು, ದೇಶಾದ್ಯಂತ ಆತಂಕವನ್ನುಂಟು ಮಾಡಿದೆ. ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ 11 ಮಕ್ಕಳು ಈ ಸಿರಪ್‌ನಿಂದ ಮರಣಹೊಂದಿದ್ದು, ರಾಜ್ಯ ಆರೋಗ್ಯ ಇಲಾಖೆ ಮತ್ತು ಡ್ರಗ್ ಕಂಟ್ರೋಲ್ ಬೋರ್ಡ್ ಎಲ್ಲ ಕೆಮ್ಮು ಸಿರಪ್‌ಗಳ ಮೇಲೆ ನಿಗಾ ವಹಿಸಿದೆ.
ಮಧ್ಯಪ್ರದೇಶದ ಚಿಂದ್ವಾರ ಜಿಲ್ಲೆಯಲ್ಲಿ 9 ಮಕ್ಕಳು ಮತ್ತು ರಾಜಸ್ಥಾನದಲ್ಲಿ 2 ಮಕ್ಕಳು ಕೋಲ್ಡ್ರೀಫ್ ಸಿರಪ್ ಸೇವನೆಯಿಂದ ಕಿಡ್ನಿ ಮತ್ತು ಲಿವರ್ ಫೇಲ್ಯೂರ್‌ನಿಂದ ಮರಣಹೊಂದಿದ್ದಾರೆ. ಲ್ಯಾಬ್ ತಪಾಸಣೆಯ ಸಿರಪ್‌ನಲ್ಲಿ 48.6% DEG ಇರುವುದು ಕಂಡುಬಂದಿದೆ. ಇದು ತೀವ್ರ ವಿಷಕಾರಕ ರಾಸಾಯನಿಕವಾಗಿದ್ದು, ದೇಹದ ಒಳಾಂಗಗಳಿಗೆ ಗಂಭೀರ ಹಾನಿಯನ್ನುಂಟುಮಾಡುತ್ತದೆ. ಈ ಘಟನೆಯಿಂದ ದೇಶಾದ್ಯಂತ ಜನರು ಕೆಮ್ಮಿನ ಸಿರಪ್‌ಗೆ ಬೆದರಿದ್ದಾರೆ.
ಅದೃಷ್ಟವಶಾತ್, ಕರ್ನಾಟಕದಲ್ಲಿ ಕೋಲ್ಡ್ರೀಫ್ ಸಿರಪ್ ಸರಬರಾಜು ಆಗಿಲ್ಲ. ಆದರೆ, ಮುಂಜಾಗ್ರತೆಯಾಗಿ ರಾಜ್ಯ ಆರೋಗ್ಯ ಇಲಾಖೆ ಎಲ್ಲ ಕೆಮ್ಮು ಮತ್ತು ಶೀತ ಸಿರಪ್‌ಗಳನ್ನು ಪರೀಕ್ಷೆಗೆ ಒಳಪಡಿಸಿದೆ. ಡ್ರಗ್ ಕಂಟ್ರೋಲ್ ಬೋರ್ಡ್ ಸಹ ಈ ಕಾರ್ಯದಲ್ಲಿ ಸಹಕರಿಸುತ್ತಿದೆ. ಪಕ್ಕದ ರಾಜ್ಯ ತಮಿಳುನಾಡಿನಲ್ಲಿ ಕೋಲ್ಡ್ರೀಫ್ ಸಿರಪ್ ಸರಬರಾಜು ಆಗಿರುವುದರಿಂದ, ಕರ್ನಾಟಕದಲ್ಲಿ ಹೆಚ್ಚಿನ ಎಚ್ಚರಿಕೆ ವಹಿಸಲಾಗಿದೆ.
ಕರ್ನಾಟಕ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು, ಎಲ್ಲ ರಾಜ್ಯಗಳಂತೆ ಕರ್ನಾಟಕದಲ್ಲೂ ಕೋಲ್ಡ್ರೀಫ್ ಸಿರಪ್ ಬಳಸದಂತೆ ಸೂಚನೆ ನೀಡಿದ್ದಾರೆ. ಪೋಷಕರಿಗೆ ಮೆಡಿಕಲ್ ಶಾಪ್‌ಗಳಲ್ಲಿ ಸಿಗುವ ಕೆಮ್ಮಿನ ಸಿರಪ್‌ಗಳನ್ನು ಖರೀದಿಸದಂತೆ ಎಚ್ಚರಿಕೆ ನೀಡಲಾಗಿದೆ. ಮಕ್ಕಳಿಗೆ ಔಷಧಿ ನೀಡುವ ಮುನ್ನ ಸೂಕ್ತ ವೈದ್ಯರ ಸಲಹೆ ಪಡೆಯುವಂತೆ ಸಲಹೆ ನೀಡಿದ್ದಾರೆ. ಕೇಂದ್ರ ಸರ್ಕಾರವೂ ಎಲ್ಲ ರಾಜ್ಯಗಳಿಗೆ ಸಿರಪ್‌ಗಳ ರಾಶನಲ್ ಬಳಕೆಗೆ ಸೂಚನೆ ನೀಡಿದೆ.
ಹಣದ ಆಸೆಗೆ ಜನರ ಜೀವನದೊಂದಿಗೆ ಚೆಲ್ಲಾಟವಾಡುತ್ತಿರುವ ಖಾಸಗಿ ಔಷಧ ಕಂಪನಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆರೋಗ್ಯ ಇಲಾಖೆ ಒತ್ತಾಯಿಸಿದೆ. ಮಧ್ಯಪ್ರದೇಶ ಸಿಎಂ ಮೋಹನ್ ಯಾದವ್ ಈಗಾಗಲೇ ಕೋಲ್ಡ್ರೀಫ್ ತಯಾರಕ ಕಂಪನಿಯ ಎಲ್ಲ ಉತ್ಪನ್ನಗಳ ಮೇಲೆ ನಿಷೇಧ ಘೋಷಿಸಿದ್ದಾರೆ. ಇಂತಹ ಘಟನೆಗಳು ಮರುಕಳಿಸದಂತೆ ಕಾನೂನು ಕ್ರಮಕ್ಕೆ ಒತ್ತು ನೀಡಲಾಗಿದೆ.
