ಕೊಲ್ಲೂರು ಮೂಕಾಂಬಿಕೆ ದೇವಿ ದರ್ಶನ ಪಡೆದ ವಿಜಯ್: ದೇವಿಗೆ ಬೆಳ್ಳಿ ಖಡ್ಗ ಅರ್ಪಿಸಿದ ತಮಿಳುನಾಡು ಸಿಎಂ

Untitled design 2026 06 12T162943.799

ಉಡುಪಿ: ತಮಿಳುನಾಡಿನ ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರು ಇಂದು ಉಡುಪಿ ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಕೊಲ್ಲೂರು ಶ್ರೀ ಮೂಕಾಂಬಿಕೆ ದೇವಸ್ಥಾನಕ್ಕೆ ಭೇಟಿ ನೀಡಿ, ವಿಶೇಷ ಪೂಜೆ ಮತ್ತು ಸಂಕಲ್ಪ ನೆರವೇರಿಸಿದರು. ದೇವಸ್ಥಾನದ ಸಾಂಪ್ರದಾಯಿಕ ವಸ್ತ್ರಸಂಹಿತೆಯನ್ನು ಪಾಲಿಸಿದ ವಿಜಯ್, ಶರ್ಟ್ ಕಳಚಿ ಕೆಂಪು ಶಲ್ಯ ಮತ್ತು ಪಂಚೆ ಧರಿಸಿ ಭಕ್ತಿಯಿಂದ ದೇವಿಯ ದರ್ಶನ ಪಡೆದರು. ದೇವಿಗೆ ಬೆಳ್ಳಿ ಖಡ್ಗ ಸಮರ್ಪಣೆ ಮಾಡಿದ್ದಾರೆ. 

ದೇವಸ್ಥಾನದಲ್ಲಿ ಭವ್ಯ ಸ್ವಾಗತ

ವಿಜಯ್ ಅವರು ಮಂಗಳೂರು ವಿಮಾನ ನಿಲ್ದಾಣದಿಂದ ರಸ್ತೆ ಮಾರ್ಗದ ಮೂಲಕ ಕೊಲ್ಲೂರಿಗೆ ಆಗಮಿಸಿದರು. ದೇವಸ್ಥಾನದ ಆಡಳಿತ ಮಂಡಳಿಯ ಟ್ರಸ್ಟಿಗಳು ಹಾಗೂ ಅರ್ಚಕ ವೃಂದ ಸಿಎಂ ವಿಜಯ್ ಅವರಿಗೆ ಪೂರ್ಣಕುಂಭ ಸ್ವಾಗತ ಮತ್ತು ಹೂಗುಚ್ಛ ನೀಡಿ ಗೌರವಿಸಿದರು. ಮಂತ್ರಘೋಷದೊಂದಿಗೆ ಕ್ಷೇತ್ರದೊಳಗೆ ಬರಮಾಡಿಕೊಂಡರು. ಸರ್ಕಾರಿ ಶಿಷ್ಟಾಚಾರದ ಪ್ರಕಾರ ಸಚಿವ ಯುಟಿ ಖಾದರ್ ಅವರು ಮಂಗಳೂರು ವಿಮಾನ ನಿಲ್ದಾಣದಲ್ಲಿಯೇ ಸ್ವಾಗತಿಸಿದ್ದರು.

ದೇವಸ್ಥಾನದ ವಸ್ತ್ರಸಂಹಿತೆ ಪಾಲನೆ

ಕೊಲ್ಲೂರು ಮೂಕಾಂಬಿಕೆ ದೇವಸ್ಥಾನದ ನಿಯಮಗಳ ಪ್ರಕಾರ ಪುರುಷ ಭಕ್ತರು ಶರ್ಟ್, ಟೀ-ಶರ್ಟ್, ಬನಿಯನ್ ಮತ್ತು ಪ್ಯಾಂಟ್ ಧರಿಸಿ ದೇವಿಯ ಸನ್ನಿಧಿಗೆ ಹೋಗುವಂತಿಲ್ಲ. ಈ ಪವಿತ್ರ ಸಂಪ್ರದಾಯವನ್ನು ಸಿಎಂ ವಿಜಯ್ ಅವರು ಕಟ್ಟುನಿಟ್ಟಾಗಿ ಪಾಲಿಸಿದರು. ಅವರು ತಮ್ಮ ಶರ್ಟ್ ಕಳಚಿ, ಕೆಂಪು ಶಲ್ಯ ಮತ್ತು ಪಂಚೆ ಧರಿಸಿ ದೇಗುಲದತ್ತ ತೆರಳಿದರು. ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದರೂ, ಸಾಮಾನ್ಯ ಭಕ್ತನಂತೆಯೇ ಅವರು ದೇವಿಯ ದರ್ಶನ ಪಡೆದರು.

ವಿಶೇಷ ಪೂಜೆ ಮತ್ತು ಸಂಕಲ್ಪ

ಪ್ರಧಾನ ಅರ್ಚಕ ರಾಮಚಂದ್ರ ಅಡಿಗರ ಸಮ್ಮುಖದಲ್ಲಿ ಸಿಎಂ ವಿಜಯ್ ಅವರು ವಿಶೇಷ ಸಂಕಲ್ಪ ಪೂಜೆ ನೆರವೇರಿಸಿದರು.  ಅರ್ಚಕರು ಅವರ ಕೈಗೆ ಸಂಕಲ್ಪ ದಾರವನ್ನು ಕಟ್ಟಿಸಿದರು. ಅನಂತರ ಮೂಕಾಂಬಿಕೆ ದೇವಿಗೆ ದೀಪಾರಾಧನೆ ನೆರವೇರಿಸಲಾಯಿತು. ವಿಜಯ್ ಅವರು ದೇವಿಗೆ ಹೂವು, ಹಣ್ಣು ಮತ್ತು ರೇಷ್ಮೆ ಸೀರೆ ಹಾಗೂ ಬೆಳ್ಳಿ ಖಡ್ಗ ಸಮರ್ಪಿಸಿದರು.

ದೇವಿ ಮುಂದೆ ಅರ್ಧ ಗಂಟೆ ಧ್ಯಾನ

ದೇವಿ ಮುಂದೆ ಸಿಎಂ ವಿಜಯ್ ಸುಮಾರು ಅರ್ಧ ಗಂಟೆ ಕಾಲ ಧ್ಯಾನಸ್ಥರಾಗಿ ಕುಳಿತಿದ್ದರು. ಭಕ್ತಿಯ ಮುದ್ರೆಯಲ್ಲಿ ಅವರು ಕಣ್ಣು ಮುಚ್ಚಿ ಪ್ರಾರ್ಥನೆ ಮಾಡಿದರು. ಈ ಸಮಯದಲ್ಲಿ ಇತರ ಭಕ್ತರಿಗೆ ದೇವಸ್ಥಾನದ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು. ದರ್ಶನ ಮುಗಿಸಿದ ನಂತರ ಅವರು ಸ್ವಲ್ಪ ಸಮಯ ದೇವಸ್ಥಾನದ ಆವರಣದಲ್ಲಿಯೇ ಕಳೆದರು.

ಬಿಗಿ ಭದ್ರತಾ ವ್ಯವಸ್ಥೆ

ಮುಖ್ಯಮಂತ್ರಿ ವಿಜಯ್ ಅವರ ಭೇಟಿ ಹಿನ್ನೆಲೆ ಕೊಲ್ಲೂರು ಕ್ಷೇತ್ರದಲ್ಲಿ ಬಿಗಿ ಪೊಲೀಸ್ ಭದ್ರತೆಯನ್ನು ಏರ್ಪಡಿಸಲಾಗಿತ್ತು. ದೇವಸ್ಥಾನದ ಹೊರಗೆ ಹಾಗೂ ಒಳಗೆ ಹೆಜ್ಜೆ ಹೆಜ್ಜೆಗೂ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ಸಿಎಂ ವಿಜಯ್ ಅವರು ದೇವಸ್ಥಾನದಿಂದ ಹೊರನಡೆಯುವವರೆಗೂ ಸಾಮಾನ್ಯ ಭಕ್ತರ ಪ್ರವೇಶಕ್ಕೆ ಸಂಪೂರ್ಣ ನಿರ್ಬಂಧವನ್ನು ವಿಧಿಸಲಾಗಿತ್ತು. 

ಕೊಲ್ಲೂರಿನಿಂದ ಮಂಗಳೂರಿಗೆ ಪ್ರಯಾಣ

ದರ್ಶನ ಮತ್ತು ಪೂಜೆ ಮುಗಿಸಿದ ಬಳಿಕ ಸಿಎಂ ವಿಜಯ್ ಅವರು ಕೊಲ್ಲೂರಿನಿಂದ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದತ್ತ ಪ್ರಯಾಣ ಬೆಳೆಸಿದರು. ಅಲ್ಲಿಂದ ಅವರು ತಮಿಳುನಾಡಿಗೆ ಮರಳುವ ಸಾಧ್ಯತೆಯಿದೆ. 

Exit mobile version