ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸಿದ್ದರಾಮಯ್ಯ ಸೂಚನೆ

Untitled design 2025 09 13t104810.707

ಬೆಂಗಳೂರು : ಗಣೇಶ ಮೂರ್ತಿ ವಿಸರ್ಜನೆ ಮೆರವಣಿಗೆ ವೇಳೆ ಏಕಾಏಕಿ ಟ್ರಕ್ ಹರಿದ ಪರಿಣಾಮ, 8 ಜನರು ಮೃತಪಟ್ಟಿದ್ದು, 20ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯವಾಗಿರುವ ಘಟನೆ ಹಾಸನ ತಾಲೂಕಿನ ಮೊಸಳೆಹೊಸಳ್ಳಿ ಗ್ರಾಮದಲ್ಲಿ ನಡೆದಿದೆ. ಈ ಅಪಘಾತದ ಹಿನ್ನೆಲೆಯಲ್ಲಿ ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸಿದ್ದರಾಮಯ್ಯ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಬೈರೇಗೌಡರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಘಟನೆ ನಡೆದ ಕ್ಷಣದಿಂದ ರಾತ್ರಿಯಿಡೀ ಅಧಿಕಾರಿಗಳ ತಂಡ-ವೈದ್ಯರ ತಂಡಗಳ ಜೊತೆ ನಿರಂತರ ಸಂಪರ್ಕದಲ್ಲಿದ್ದು ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡರು ತೀವ್ರ ನಿಗಾ ವಹಿಸಿದ್ದಾರೆ. ಮೃತರ ಕುಟುಂಬಗಳ ಜೊತೆ ಸತತ ಸಂಪರ್ಕದಲ್ಲಿದ್ದ ಅಧಿಕಾರಿಗಳು ಮೃತರ ಮರಣೋತ್ತರ ಪರೀಕ್ಷೆ ರಾತ್ರಿಯೇ ನಡೆಯಲು ಬೇಕಾದ ಅಗತ್ಯ ಕ್ರಮ ಕೈಗೊಂಡರು. ವೈದ್ಯರ ತಂಡ ಬೆಳಗಾಗುವವರೆಗೂ ಕಾಯದೇ ರಾತ್ರಿಯೇ ಮರಣೋತ್ತರ ಪರೀಕ್ಷೆ ಮತ್ತು ಕಾನೂನು ಪ್ರಕ್ರಿಯೆ ಮುಗಿಸಿ ಮೃತದೇಹಗಳನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಿದೆ.

ಗಾಯಾಳುಗಳ ಚಿಕಿತ್ಸೆಗೆ ಖುದ್ದಾಗಿ ಜಿಲ್ಲಾ ವೈದ್ಯಾಧಿಕಾರಿಗಳೇ ಉಸ್ತುವಾರಿ ವಹಿಸಿದ್ದು, ಅಗತ್ಯ ವೈದ್ಯರ ತಂಡವನ್ನು ರಚಿಸಿದ್ದಾರೆ. ಅಗತ್ಯವಾದ ಎಲ್ಲಾ ಆಧುನಿಕ ಚಿಕಿತ್ಸಾ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ.

ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ವೈದ್ಯಾಧಿಕಾರಿಯವರ ಜೊತೆ ನಿರಂತರ ಸಂಪರ್ಕದಲ್ಲಿರುವ ಉಸ್ತುವಾರಿ ಸಚಿವರು ಆಸ್ಪತ್ರೆಗಳಿಗೆ ಭೇಟಿ ನೀಡುತ್ತಿದ್ದು, ಮೃತರ ಕುಟುಂಬದವರ ಜೊತೆಗೂ ಮಾತನಾಡುತ್ತಿದ್ದಾರೆ.

Exit mobile version