ಕರ್ನಾಟಕ ಸರ್ಕಾರವು ಪ್ರವಾಹ ಪೀಡಿತ ಕಲ್ಯಾಣ ಕರ್ನಾಟಕ ಭಾಗದ ರೈತರು ಮತ್ತು ಸಾಮಾನ್ಯ ನಾಗರಿಕರ ಪುನರಾವಾಸ ಮತ್ತು ಪುನರ್ನಿರ್ಮಾಣಕ್ಕಾಗಿ 2,000 ಕೋಟಿ ರೂಪಾಯಿಗಳ ಪರಿಹಾರ ಪ್ಯಾಕೇಜ್ ಅನ್ನು ಘೋಷಿಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ತಿಳಿಸಿದರು.
ಇತ್ತೀಚಿನ ಭಾರೀ ಮಳೆ ಮತ್ತು ಮಹಾರಾಷ್ಟ್ರದ ಜಲಾಶಯಗಳಿಂದ ನೀರು ಬಿಡುಗಡೆಯ ಪರಿಣಾಮವಾಗಿ ಕಲ್ಯಾಣ ಕರ್ನಾಟಕದ ಎಂಟು ಜಿಲ್ಲೆಗಳಲ್ಲಿ ವ್ಯಾಪಕ ಹಾನಿ ಸಂಭವಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿವರಿಸಿದಂತೆ, 9 ಲಕ್ಷ ಹೆಕ್ಟೇರ್ ಗಿಂತಲೂ ಹೆಚ್ಚು ಕೃಷಿ ಭೂಮಿ ಮುಳಗಿದೆ ಮತ್ತು ಬೆಳೆಗಳು ನಾಶವಾಗಿವೆ. ಈ ಹಾನಿಯ ನಿಖರ ಮೌಲ್ಯಮಾಪನ ಮಾಡಲು ರಾಜ್ಯ ಸರ್ಕಾರವು ಎರಡು ಸುತ್ತಿನ ವೈಮಾನಿಕ ಸಮೀಕ್ಷೆ ನಡೆಸಿದೆ. ಸೆ.30 ರಂದು ನಾಲ್ಕು ಜಿಲ್ಲೆಗಳ ಸಮೀಕ್ಷೆ ಮಾಡಲಾಗಿದೆ, ಉಳಿದ ಜಿಲ್ಲೆಗಳ ಸಮೀಕ್ಷೆಯೂ ವೇಗವಾಗಿ ನಡೆಯುತ್ತಿದೆ.
ಸರ್ಕಾರವು ಹಾನಿಗೊಳಗಾದ ಕುಟುಂಬಗಳಿಗೆ ತಕ್ಷಣದ ನೆರವು ನೀಡಲು ಹಲವಾರು ಕ್ರಮಗಳನ್ನು ಜಾರಿಗೆ ತಂದಿದೆ:
-
ನಿವಾಸ ಹಾನಿ: 547 ಮನೆಗಳು ಸಂಪೂರ್ಣವಾಗಿ ನಾಶವಾಗಿದೆ. ಹೀಗಾಗಿ ಪ್ರತಿ ಮನೆಗೂ 1.20 ಲಕ್ಷ ರೂಪಾಯಿ ಪರಿಹಾರ ನೀಡಲಾಗಿದೆ. ಭಾಗಶಃ ಹಾನಿಗೊಂಡ ಸುಮಾರು 7,000 ಮನೆಗಳಿಗೂ ಸಹಯತೆ ನೀಡಲಾಗಿದೆ. ಇಲ್ಲಿಯವರೆಗೆ ಮನೆ ಹಾನಿಗಾಗಿ ಒಟ್ಟು 23.12 ಕೋಟಿ ರೂಪಾಯಿ ವಿತರಿಸಲಾಗಿದೆ.
-
ಜಾನುವಾರು ನಷ್ಟ: ಪ್ರವಾಹದಲ್ಲಿ 422 ಜಾನುವಾರುಗಳು ಸಾವಿಗೀಡಾಗಿವೆ, ಅದರಲ್ಲಿ ಯಾದಗಿರಿ ಜಿಲ್ಲೆಯಲ್ಲಿ ಮಾತ್ರ 245 ಸಾವು ನೋಂದಾಣಿಯಾಗಿದೆ. ಇದರಲ್ಲಿ 407 ಜಾನುವಾರುಗಳ ಮಾಲಿಕರಿಗೆ ಪರಿಹಾರ ಈಗಾಗಲೇ ನೀಡಲಾಗಿದೆ.
-
ವೈಯಕ್ತಿಕ ಸಾಮಗ್ರಿ ನಷ್ಟ: ಬಟ್ಟೆ ಮತ್ತು ಮನೆಬಳಕೆ ಸಾಮಗ್ರಿ ಕಳೆದುಕೊಂಡ 4,858 ಕುಟುಂಬಗಳಿಗೆ 2.42 ಕೋಟಿ ರೂಪಾಯಿ ಪರಿಹಾರ ವಿತರಿಸಲಾಗಿದೆ.
ಹಾನಿಯ ವ್ಯಾಪಕತೆಯನ್ನು ಗಮನಿಸಿದ ಸರ್ಕಾರವು 2,000 ಕೋಟಿ ರೂಪಾಯಿಗಳ ಸಮಗ್ರ ಪರಿಹಾರ ಪ್ಯಾಕೇಜ್ ಅನ್ನು ಘೋಷಿಸಿದೆ. ಈ ನಿಧಿಯನ್ನು ರೈತರು, ಗೃಹಹಾನಿ, ರಸ್ತೆ, ಸೇತುವೆಗಳ ಮರಮುಟ್ಟು ಮತ್ತು ಇತರ ಮೂಲಸೌಕರ್ಯ ದುರಸ್ತಿಗಾಗಿ ಬಳಕೆ ಮಾಡಲಾಗುವುದು. ರಾಜ್ಯ ಸರ್ಕಾರವು ಪ್ರತಿ ಕ್ಷೇತ್ರಕ್ಕೆ 25 ರಿಂದ 50 ಕೋಟಿ ರೂಪಾಯಿ ವಿಶೇಷ ಅನುದಾನವನ್ನೂ ನೀಡಿದೆ.
ಹಾನಿಯ ಪೂರ್ಣ ಮೌಲ್ಯಮಾಪನಕ್ಕಾಗಿ ಸಮೀಕ್ಷೆಗಳು ನಡೆಯುತ್ತಿದ್ದು, ಸಮೀಕ್ಷೆ ವರದಿ ಬಂದ ನಂತರ ಹೆಚ್ಚುವರಿ ಪರಿಹಾರ ಕ್ರಮಗಳನ್ನು ಜಾರಿಗೆ ತರಲಾಗುವುದು. ರಾಜ್ಯದ ಅಂದಾಜು ಸಾವಿರ ಕೋಟಿ ರೂಪಾಯಿ ಪರಿಹಾರದ ಅಗತ್ಯವಿದೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ. ಇದರ ನಿಮಿತ್ತ ಕೇಂದ್ರ ಸರ್ಕಾರದಿಂದಲೂ ಹಣಕಾಸು ನೆರವು ಕೋರಲು ಸಚಿವರ ನಿಯೋಗವನ್ನು ದೆಹಲಿಗೆ ಕಳುಹಿಸಲಾಗುವುದು ಎಂದು ತಿಳಿಸಿದ್ದಾರೆ.
ಪರಿಹಾರ ಹಂಚಿಕೆ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಖಾತರಿಗೊಳಿಸಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಲ್ಲಾ ಬರ ಪೀಡಿತರಿಗೆ ಒಟ್ಟಿಗೇ ಪರಿಹಾರ ನೀಡುವ ನಿರ್ಣಯ ತೆಗೆದುಕೊಂಡಿದ್ದು, ಇದರಿಂದ ಕೆಲವರಿಗೆ ಮಾತ್ರ ಪರಿಹಾರ ಬಂತು ಎಂಬ ಗೊಂದಲ ತಪ್ಪಲು ಸಾಧ್ಯವಾಗುವುದು. ಮುಂದಿನ ದಿನಗಳಲ್ಲಿ ಮತ್ತೆ ಮಳೆ ಸಾಧ್ಯತೆ ಇರುವುದರಿಂದ, ಅಗತ್ಯ ಸ್ಥಳಗಳಲ್ಲಿ ತಾತ್ಕಾಲಿಕ ಮತ್ತು ಶಾಶ್ವತ ತಡೆಗೋಡೆ ನಿರ್ಮಿಸಲು ಸರ್ಕಾರಿ ಇಲಾಖೆಗಳಿಗೆ ಸೂಚನೆ ನೀಡಲಾಗಿದೆ.