ಬೆಂಗಳೂರು ಕಾಲ್ತುಳಿತ: ಪಿಐಎಲ್​ ವಿಚಾರಣೆ ಜೂ. 12ಕ್ಕೆ ಮುಂದೂಡಿದ ಹೈಕೋರ್ಟ್

Untitled design 2025 06 10t115251.484

ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ದುರಂತದ ಕಾಲ್ತುಳಿತದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ 11 ಅಭಿಮಾನಿಗಳ ಸಾವಿನ ಘಟನೆ ರಾಜ್ಯ ಸರ್ಕಾರಕ್ಕೆ ತೀವ್ರ ತಲೆನೋವಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಸ್ವಯಂಪ್ರೇರಿತವಾಗಿ ದಾಖಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ (PIL) ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್ ಜೂನ್ 12ಕ್ಕೆ ಮುಂದೂಡಿದೆ. ಯಾವುದೇ ಮಧ್ಯಂತರ ನಿರ್ದೇಶನ ನೀಡದೆ, ಸರ್ಕಾರದಿಂದ ವರದಿ ಬಂದ ನಂತರ ತೀರ್ಮಾನ ಕೈಗೊಳ್ಳುವುದಾಗಿ ಕೋರ್ಟ್ ತಿಳಿಸಿದೆ.

ಈ ಘಟನೆಯ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೈಕಮಾಂಡ್‌ ಜೊತೆ ಚರ್ಚಿಸಲು ದೆಹಲಿಗೆ ತೆರಳಿದ್ದಾರೆ. ಜೂನ್ 5ರಂದು ನಡೆದ ವಿಚಾರಣೆಯಲ್ಲಿ ಹೈಕೋರ್ಟ್, ಸರ್ಕಾರಕ್ಕೆ ಘಟನೆಯ ಸಂಪೂರ್ಣ ವರದಿ ಸಲ್ಲಿಸುವಂತೆ ಸೂಚಿಸಿತ್ತು. ಆದರೆ, ಸರ್ಕಾರ ಇದುವರೆಗೂ ಯಾವುದೇ ವರದಿ ಸಲ್ಲಿಸಿಲ್ಲ. ಇದರಿಂದ ಕೋಪಗೊಂಡ ಹೈಕೋರ್ಟ್, ವಿಚಾರಣೆ ವೇಳೆ ಸರ್ಕಾರದಿಂದ ವರದಿ ಏಕೆ ಸಲ್ಲಿಕೆಯಾಗಿಲ್ಲ ಎಂದು ಪ್ರಶ್ನಿಸಿತ್ತು. ಈ ಸಂದರ್ಭದಲ್ಲಿ ರಾಜ್ಯದ ಅಡ್ವೊಕೇಟ್ ಜನರಲ್ (AG) ಶಶಿಕಿರಣ್ ಶೆಟ್ಟಿ, ನ್ಯಾಯಾಂಗ ತನಿಖೆಗೆ ಆದೇಶ ನೀಡಲಾಗಿದೆ ಎಂದು ತಿಳಿಸಿದರು.

ಶಶಿಕಿರಣ್ ಶೆಟ್ಟಿ ಅವರು, ಮ್ಯಾಜಿಸ್ಟೀರಿಯಲ್ ಮತ್ತು ನ್ಯಾಯಾಂಗ ತನಿಖೆಯ ವರದಿಗಳನ್ನು ಸಲ್ಲಿಸುವುದಾಗಿ ಭರವಸೆ ನೀಡಿದರು. ತನಿಖೆಗೆ ಸರ್ಕಾರ ಈಗಾಗಲೇ ತೀರ್ಮಾನಿಸಿದ್ದು, ಒಂದು ತಿಂಗಳ ಕಾಲಾವಕಾಶ ನೀಡುವಂತೆ ಮನವಿ ಮಾಡಿದರು. ಆದರೆ, ಹೈಕೋರ್ಟ್ ಜೂನ್ 12ರೊಳಗೆ ಮುಚ್ಚಿದ ಲಕೋಟೆಯಲ್ಲಿ ವರದಿ ಸಲ್ಲಿಸುವಂತೆ ಸ್ಪಷ್ಟ ಸೂಚನೆ ನೀಡಿದೆ. ನ್ಯಾಯಮೂರ್ತಿಗಳಾದ ವಿ. ಕಾಮೇಶ್ವರ ರಾವ್ ಮತ್ತು ಸಿ.ಎಂ. ಜೋಶಿ ಅವರ ಪೀಠವು ಈ ವಿಚಾರಣೆ ನಡೆಸಿತ್ತು.

ಕಾಲ್ತುಳಿತದ ದುರಂತದ ನಂತರ ಯಾವುದೇ ಕ್ರಿಮಿನಲ್ ಪ್ರಕರಣ ದಾಖಲಾಗಿರಲಿಲ್ಲ. ಆದರೆ, ಹೈಕೋರ್ಟ್ ಸ್ವಯಂಪ್ರೇರಿತವಾಗಿ ಈ ಅರ್ಜಿಯನ್ನು ದಾಖಲಿಸಿಕೊಂಡಿತ್ತು. ಹಲವು ಮಧ್ಯಂತರ ಅರ್ಜಿಗಳ ಮನವಿಯ ಹಿನ್ನೆಲೆಯಲ್ಲಿ ಈ ವಿಚಾರಣೆ ನಡೆದಿದ್ದು, ಸರ್ಕಾರದ ಪ್ರತಿಕ್ರಿಯೆಯನ್ನು ಆಧರಿಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ಕೋರ್ಟ್ ಸ್ಪಷ್ಟಪಡಿಸಿದೆ.

Exit mobile version