ಚಿಕ್ಕಮಗಳೂರಿನ ಪ್ರಸಿದ್ಧ ತೀರ್ಥಯಾತ್ರಾ ಕೇಂದ್ರವಾದ ದೇವಿರಮ್ಮ ಬೆಟ್ಟ (Deviramma Betta) ದರ್ಶನಕ್ಕೆ ಬಂದ ಇಬ್ಬರು ಭಕ್ತರು ಬೆಟ್ಟ ಏರುವ ಸಮಯದಲ್ಲಿ ಅಸ್ವಸ್ಥರಾಗಿದ್ದಾರೆ. ಘಟನೆ ನಡೆದ ತಕ್ಷಣ ಚಿಕ್ಕಮಗಳೂರು ಅಗ್ನಿಶಾಮಕ ದಳದ ಸಿಬ್ಬಂದಿಗಳು ರಕ್ಷಿಸಿದ್ದಾರೆ.
ದೇವಿರಮ್ಮ ಬೆಟ್ಟ ಏರುತ್ತಿದ್ದ ಯುವತಿ ಮಾರ್ಗಮಧ್ಯದಲ್ಲೇ ತೀವ್ರ ಆಯಾಸದಿಂದ ಕುಸಿದು ಬಿದ್ದಿದ್ದಾರೆ. ಅವರ ಸ್ಥಿತಿ ಗಂಭೀರವಾಗಿದ್ದನ್ನ ಕಂಡು ಸ್ಥಳೀಯ ಜನ ತಕ್ಷಣ ಅಗ್ನಿಶಾಮಕ ದಳವನ್ನು ಸಂಪರ್ಕಿಸಿದ್ದಾರೆ.ನಂತರ ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿಗಳು ಯುವತಿಯನ್ನು ಬೆಟ್ಟದ ಕೆಳಭಾಗಕ್ಕೆ ಹೊತ್ತೊಯ್ದು, ಪ್ರಾಥಮಿಕ ಚಿಕಿತ್ಸೆ ನೀಡಿದ್ದಾರೆ.
ಮತ್ತೊಂದು ಕಡೆ ಯುವಕನೊಬ್ಬ ಬೆಟ್ಟದಿಂದ ಇಳಿಯುವಾಗ ಜಾರಿಕೆಯಲ್ಲಿ ಸಿಕ್ಕುಬಿದ್ದು ಕಾಲು ಉಳುಕ್ಕಿದ್ದರಿಂದ ನಡೆಯಲು ಕಷ್ಟಪಡುತ್ತಿದ್ದರು. ಹೀಗಾಗಿ ಅಗ್ನಿಶಾಮಕ ಸಿಬ್ಬಂದಿಗಳು ಅವರನ್ನು ಸ್ಟ್ರೆಚರ್‌ನಲ್ಲಿ ಹಾಸಿಗೆ ಮಾಡಿ, ಬೆಟ್ಟದ ಮೇಲಿನಿಂದ ಕೆಳಗೆ ಇಳಿಸಿದರು. ಬೆಟ್ಟದ ಪ್ರದೇಶವು ಇಳಿಜಾರಾಗಿದ್ದು, ಜಾರಿಕೆಯ ಸಾಧ್ಯತೆ ಹೆಚ್ಚಾಗಿರುವುದರಿಂದ ರಕ್ಷಣಾ ಕಾರ್ಯಾಚರಣೆಗೆ ಹೆಚ್ಚು ಶ್ರಮವಾಗಿದೆ.
ಬೆಟ್ಟ ಹತ್ತುವ ಮಾರ್ಗದಲ್ಲಿ ಭಾರೀ ಜಾರಿಕೆಯ ಸಮಸ್ಯೆ ಇದ್ದು, ಭಕ್ತರು ಇಳಿಯುವಾಗ ತೆವಳಿಕೊಂಡು ಬರಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದನ್ನ ತಪ್ಪಿಸಲು, ಅರ್ಧ ಬೆಟ್ಟದ ಪ್ರದೇಶದಲ್ಲಿ ಹಗ್ಗವನ್ನು ಬಿಗಿದು ಭದ್ರತಾ ವ್ಯವಸ್ಥೆ ಮಾಡಲಾಗಿದೆ. ಜೊತೆಗೆ ಅಲ್ಲಲ್ಲೆ ಪೊಲೀಸರು ನಿಂತು ಜನರಿಗೆ ಸಹಾಯ ಮಾಡುತ್ತಿದ್ದಾರೆ.