ಚಿಕ್ಕಬಳ್ಳಾಪುರ, ಜುಲೈ 03: ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಚಿಕ್ಕತೇಕಹಳ್ಳಿ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ ಭೀಕರ ದುರಂತ ಸಂಭವಿಸಿದೆ. ಕುಡಿಯುವ ನೀರಿಗೆ ಚರಂಡಿ ನೀರು ಬೆರೆತ ಪರಿಣಾಮ 80ಕ್ಕೂ ಅಧಿಕ ಜನರು ಅಸ್ವಸ್ಥರಾಗಿದ್ದಾರೆ. ವಾಂತಿ, ಭೇದಿ ಮತ್ತು ತೀವ್ರ ಹೊಟ್ಟೆನೋವಿನಿಂದ ಬಳಲುತ್ತಿರುವ ಗ್ರಾಮಸ್ಥರು ನಿನ್ನೆಯಿಂದ ಆಸ್ಪತ್ರೆಗಳಿಗೆ ಅಲೆದಾಡುತ್ತಿದ್ದಾರೆ.
ದುರಂತದ ಹಿನ್ನೆಲೆ
ಗ್ರಾಮದ ಕುಡಿಯುವ ನೀರಿನ ಕೊಳವೆ ಬಾವಿಗೆ ಸಮೀಪದ ಚರಂಡಿ ನೀರು ಮಿಶ್ರಣವಾಗಿರುವುದು ಈ ದುರಂತಕ್ಕೆ ಕಾರಣವಾಗಿದೆ. ಈ ನೀರನ್ನು ಕುಡಿದ ಗ್ರಾಮಸ್ಥರಲ್ಲಿ ತೀವ್ರವಾದ ವಾಂತಿ, ಭೇದಿ, ಜ್ವರ ಮತ್ತು ನಿರ್ಜಲೀಕರಣದ ಲಕ್ಷಣಗಳು ಕಂಡುಬಂದಿವೆ.
ಆಸ್ಪತ್ರೆಗಳಿಗೆ ಜನರು ದೌಡು
ಅಸ್ವಸ್ಥರಾದ ಗ್ರಾಮಸ್ಥರು ಶಿಡ್ಲಘಟ್ಟದ ಸತ್ಯನಾರಾಯಣ ರಾವ್ ಆಸ್ಪತ್ರೆ, ಅಬ್ಲೂಡು ಮತ್ತು ಬಶೆಟ್ಟಿಹಳ್ಳಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಸ್ಪತ್ರೆಗಳಲ್ಲಿ ರೋಗಿಗಳ ದಟ್ಟಣೆ ಹೆಚ್ಚಾಗಿದ್ದು, ಚಿಕಿತ್ಸೆಗೆ ವೈದ್ಯಕೀಯ ಸಿಬ್ಬಂದಿ ಪರದಾಡುತ್ತಿದ್ದಾರೆ. ಅನೇಕ ರೋಗಿಗಳ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿದೆ.
ದನಕರುಗಳ ಆರೋಗ್ಯ ಏರುಪೇರು
ಗ್ರಾಮದ 50ಕ್ಕೂ ಹೆಚ್ಚು ದನಕರುಗಳು ಸಹ ಕಲುಷಿತ ನೀರು ಸೇವಿಸಿ ಅಸ್ವಸ್ಥವಾಗಿವೆ. ಹಸು, ಎಮ್ಮೆ ಮತ್ತು ಕುರಿಗಳಲ್ಲಿ ವಾಂತಿ, ಅತಿಸಾರ ಮತ್ತು ಆಹಾರ ಸೇವನೆಯಲ್ಲಿ ತೊಂದರೆಯ ಲಕ್ಷಣಗಳು ಕಂಡುಬಂದಿವೆ. ಸ್ಥಳೀಯ ಪಶು ವೈದ್ಯರು ದನಕರುಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ.
ಪಿಡಿಒ ನಿರ್ಲಕ್ಷ್ಯಕ್ಕೆ ಗ್ರಾಮಸ್ಥರ ಆಕ್ರೋಶ
ಈ ಭೀಕರ ದುರಂತಕ್ಕೆ ಗ್ರಾಮ ಪಂಚಾಯತಿಯ ಪಿಡಿಒ ವಜ್ರೇಶ್ ಅವರ ಬೇಜವಾಬ್ದಾರಿತನವೇ ಕಾರಣ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಕಳೆದ ಹಲವು ದಿನಗಳಿಂದ ಚರಂಡಿ ನೀರು ಕುಡಿಯುವ ನೀರಿನ ಮೂಲಕ್ಕೆ ಮಿಶ್ರಣವಾಗುತ್ತಿದ್ದು, ಈ ಬಗ್ಗೆ ಪಿಡಿಒ ಗಮನಕ್ಕೆ ತಂದಿದ್ದರೂ ಅವರು ಅಲಕ್ಷಿಸಿದ್ದಾರೆಂದು ಗ್ರಾಮಸ್ಥರು ಆರೋಪಿಸಿದ್ದಾರೆ.
