ಇರಾನ್ ನಾಯಕ ಅಲಿ ಖಮೇನಿ ಅಂತ್ಯಕ್ರಿಯೆಗೆ ಸಿದ್ಧತೆ; ವಿಶ್ವದ ಹಲವು ನಾಯಕರು ದೌಡು

ಕೊ (16)

ಟೆಹ್ರಾನ್, ಜುಲೈ 03: ಇರಾನ್‌ನ ಸರ್ವೋಚ್ಛ ನಾಯಕರಾಗಿದ್ದ ಅಯಾತೊಲ್ಲಾ ಅಲಿ ಖಮೇನಿ ಅವರ ಅಂತ್ಯಕ್ರಿಯೆಯು ಜುಲೈ 4 ಮತ್ತು 5 ರಂದು ನಡೆಯಲಿದ್ದು, ವಿಶ್ವದ 30 ದೇಶಗಳ ಗಣ್ಯರು ಭಾಗವಹಿಸುವ ಸಾಧ್ಯತೆಯಿದೆ. ಫೆಬ್ರವರಿ 28 ರಂದು ಅಮೆರಿಕ ಮತ್ತು ಇಸ್ರೇಲ್ ನಡೆಸಿದ ವಾಯುದಾಳಿಯಲ್ಲಿ ಮೃತಪಟ್ಟಿದ್ದ ಖಮೇನಿ ಅವರ ಅಂತಿಮ ಸಂಸ್ಕಾರವು ಸುಮಾರು 4 ತಿಂಗಳ ಬಳಿಕ ಅಧಿಕೃತವಾಗಿ ನಡೆಯುತ್ತಿದೆ. ಖಮೇನಿ ಹತ್ಯೆಯ ಬಳಿಕ ಇರಾನ್-ಇಸ್ರೇಲ್ ಮತ್ತು ಅಮೆರಿಕ ನಡುವಣ ಸಮರವು ಮತ್ತಷ್ಟು ಹೆಚ್ಚಾಗಿತ್ತು.

ಅಂತ್ಯಕ್ರಿಯೆಯ ವೇಳಾಪಟ್ಟಿ

ಜುಲೈ 4 ರಂದು ರಾಜಧಾನಿ ಟೆಹ್ರಾನ್‌ನಲ್ಲಿ ಅಂತ್ಯಕ್ರಿಯೆಯ ಪ್ರಕ್ರಿಯೆಗಳು ಆರಂಭವಾಗಲಿದ್ದು, ಜುಲೈ 5 ರಂದು ವಿಶೇಷ ಧಾರ್ಮಿಕ ಆಚರಣೆಗಳು ನಡೆಯಲಿವೆ. ಜುಲೈ 7 ರಂದು ಪವಿತ್ರ ನಗರ ಕೋಮ್ ನಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು, ಜುಲೈ 9 ರಂದು ಅವರ ತವರು ನಗರ ಮಶಾದ್ ನಲ್ಲಿ ಸಮಾಧಿ ಮಾಡುವ ಮೂಲಕ ಇದು ಮುಕ್ತಾಯಗೊಳ್ಳಲಿದೆ. ಈ ಅವಧಿಯಲ್ಲಿ ಇರಾನ್ ಸರ್ಕಾರವು ಹಲವು ದಿನಗಳ ಕಾಲ ಅಂತ್ಯಸಂಸ್ಕಾರದ ವಿಧಿವಿಧಾನಗಳನ್ನು ಆಯೋಜಿಸಿದೆ.

ಮೊಜ್ತಬಾ ಅಲಿ ಖಮೇನಿ ಗೈರು

ಅಲಿ ಖಮೇನಿ ಅವರ ಪುತ್ರ ಹಾಗೂ ಇರಾನ್‌ನ ಈಗಿನ ಸರ್ವೋಚ್ಛ ನಾಯಕ ಮೊಜ್ತಬಾ ಅಲಿ ಖಮೇನಿ ಅವರು ಭದ್ರತಾ ಕಾರಣಗಳಿಂದಾಗಿ ಈ ಸಮಾರಂಭದಲ್ಲಿ ಭಾಗವಹಿಸುತ್ತಿಲ್ಲ. ಇಸ್ರೇಲಿ ಪಡೆಗಳಿಂದ ಹೆಚ್ಚುತ್ತಿರುವ ಕಣ್ಗಾವಲು ಮತ್ತು ಭದ್ರತಾ ಬೆದರಿಕೆಗಳು ಈ ನಿರ್ಧಾರಕ್ಕೆ ಕಾರಣವಾಗಿವೆ ಎಂದು ಅವರ ಪ್ರತಿನಿಧಿಗಳು ತಿಳಿಸಿದ್ದಾರೆ. ಸಾರ್ವಜನಿಕ ಸಮಾರಂಭಗಳಲ್ಲಿ ಅವರು ಕಾಣಿಸಿಕೊಂಡರೆ ಡ್ರೋನ್ ದಾಳಿ ಅಥವಾ ಮಾರಣಾಂತಿಕ ಗುಂಡಿನ ದಾಳಿಯ ಅಪಾಯವಿದೆ ಎಂದು ಭದ್ರತಾ ತಜ್ಞರು ಎಚ್ಚರಿಸಿದ್ದಾರೆ.

ಖಮೇನಿ ಕುಟುಂಬದ ಇತರ ಸದಸ್ಯರಿಗೂ ವಿದಾಯ

ಖಮೇನಿ ಅವರ ಜೊತೆಯಲ್ಲಿಯೇ ಅದೇ ವಾಯುದಾಳಿಯಲ್ಲಿ ಅವರ ಮಗಳು, ಅಳಿಯ ಮತ್ತು ಮೊಮ್ಮಗಳು ಸಹ ಮೃತಪಟ್ಟಿದ್ದರು. ಈ ಎಲ್ಲಾ ಕುಟುಂಬ ಸದಸ್ಯರಿಗೂ ಅಂತಿಮ ನಮನ ಸಲ್ಲಿಸಲಾಗುವುದು ಎಂದು ಇರಾನ್ ಸರ್ಕಾರ ತಿಳಿಸಿದೆ.

ಭಾರತದ 6 ಗಣ್ಯರ ನಿಯೋಗ

ಭಾರತದ ಪರವಾಗಿ ಉನ್ನತ ಮಟ್ಟದ 6 ಜನ ಗಣ್ಯರು ಈ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲಿದ್ದಾರೆ. ಅವರಲ್ಲಿ ಬಿಹಾರ ರಾಜ್ಯಪಾಲ ಸೈಯದ್ ಅತಾ ಹಸ್ನೈನ್, ವಿದೇಶಾಂಗ ಇಲಾಖೆ ಸಹ ಸಚಿವೆ ಪವಿತ್ರಾ ಮಾರ್ಗರಿಟಾ, ಕಾಂಗ್ರೆಸ್ ನಾಯಕ ಹಾಗೂ ಸಂಸದ ಪವನ್ ಖೇರಾ, ವಿದೇಶಾಂಗ ಇಲಾಖೆ ಮಾಜಿ ಸಚಿವ ಸಲ್ಮಾನ್ ಖುರ್ಷಿದ್ ಮತ್ತು ಜಮ್ಮು-ಕಾಶ್ಮೀರದ ಪಿಡಿಪಿ ನಾಯಕಿ ಮೆಹಬೂಬಾ ಮುಫ್ತಿ ಸೇರಿದ್ದಾರೆ. 

ಅಂತಾರಾಷ್ಟ್ರೀಯ ಉಪಸ್ಥಿತಿ

ಭಾರತ ಮಾತ್ರವಲ್ಲದೆ, ರಷ್ಯಾ, ಚೀನಾ, ಪಾಕಿಸ್ತಾನ ಸೇರಿದಂತೆ 30 ದೇಶಗಳ ಗಣ್ಯರು ಈ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲಿದ್ದಾರೆ. ಇರಾನ್ ಮತ್ತು ಅಮೆರಿಕ ಇತ್ತೀಚೆಗಷ್ಟೇ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದ್ದರೂ, ಹಾರ್ಮುಜ್ ಜಲಸಂಧಿಯಲ್ಲಿ ವಾಣಿಜ್ಯ ಹಡಗಿನ ವಿವಾದದಿಂದಾಗಿ ಮಿಲಿಟರಿ ದಾಳಿಗಳು ನಡೆದಿದ್ದವು. ಪ್ರಸ್ತುತ ಉಭಯ ದೇಶಗಳ ನಡುವಿನ ಗುಂಡಿನ ಚಕಮಕಿ ಕಡಿಮೆಯಾಗಿದ್ದು, ಕತಾರ್ ಮತ್ತು ಪಾಕಿಸ್ತಾನದ ಮಧ್ಯಸ್ಥಿಕೆಯಲ್ಲಿ ದೋಹಾದಲ್ಲಿ ನಡೆದ 14-ಅಂಶಗಳ ತಿಳುವಳಿಕೆ ಒಪ್ಪಂದದಲ್ಲಿ ಸಕಾರಾತ್ಮಕ ಪ್ರಗತಿ ಕಂಡುಬಂದಿದೆ.

ಈ ದೊಡ್ಡ ಪ್ರಮಾಣದ ಸಮಾರಂಭದಲ್ಲಿ ಹಲವು ಅಂತಾರಾಷ್ಟ್ರೀಯ ಗಣ್ಯರು ಭಾಗವಹಿಸುತ್ತಿರುವುದರಿಂದ ಇರಾನ್ ಸರ್ಕಾರವು ಕಟ್ಟುನಿಟ್ಟಾದ ಭದ್ರತಾ ವ್ಯವಸ್ಥೆಯನ್ನು ಮಾಡಿದೆ. ಇರಾನಿನ ರಿವಲ್ಯೂಷನರಿ ಗಾರ್ಡ್ ಮತ್ತು ಇತರ ಭದ್ರತಾ ಪಡೆಗಳು ಸಮಾರಂಭ ಸ್ಥಳದ ಸುತ್ತಮುತ್ತಲಿನ ಪ್ರದೇಶಗಳನ್ನು ಸುತ್ತುವರೆದಿವೆ.

 

Exit mobile version