ಚಿಕ್ಕಬಳ್ಳಾಪುರ: ಜಮೀರ್ ಅವರ ಆಪ್ತ ಸೈಯದ್ ಅಬ್ದುಲ್ ಅಕ್ಟರ್ ಪಾಷಾ, ರೈತರಿಂದ ಮೆಕ್ಕೆಜೋಳ ಖರೀದಿಸಿ ಕೋಟ್ಯಂತರ ರೂಪಾಯಿ ವಂಚನೆ ಮಾಡಿದ್ದಾನೆ ಎಂದು ರೈತರು ದೂರಿದ್ದಾರೆ. ಈ ಸಂಬಂಧ ಸಚಿವ ಜಮೀರ್, ಪೊಲೀಸ್ ಇನ್ಸ್‌ಪೆಕ್ಟರ್‌ಗೆ ಕರೆ ಮಾಡಿ ಆರೋಪಿಗೆ ಸಹಾಯ ಮಾಡಲು ಸೂಚಿಸಿದ್ದಾರೆ ಎನ್ನಲಾದ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಚಿಕ್ಕಬಳ್ಳಾಪುರ ತಾಲೂಕಿನ ದಿಗೂರು ನಿವಾಸಿ ಡಿ. ಎನ್. ರಾಮಕೃಷ್ಣ ಎಂಬ ಪಾಪ್‌ಕಾರ್ನ್ ಉದ್ಯಮಿ, ತೆಲಂಗಾಣದ ಹೈದರಾಬಾದ್ ಮೂಲದ ಎಚ್‌ಕೆಜಿಎನ್ ಮುಸ್ಕಾನ್ ಪಾಪ್‌ಕಾರ್ನ್ ಟ್ರೇಡರ್ಸ್‌ನ ಮಾಲೀಕರಾದ ಸೈಯದ್ ಅಬ್ದುಲ್ ರಜಾಕ್, ಸೈಯದ್ ಅಬ್ದುಲ್ ಅಕ್ಟರ್ ಪಾಷಾ ಮತ್ತು ನಾಸಿರ್ ಅಹಮದ್ ಎಂಬ ಸಹೋದರರಿಗೆ 1 ಕೋಟಿ 89 ಲಕ್ಷ ರೂಪಾಯಿ ಮೌಲ್ಯದ ಪಾಪ್‌ಕಾರ್ನ್ ಜೋಳವನ್ನು ಸರಬರಾಜು ಮಾಡಿದ್ದರು. ಆದರೆ, ಹೈದರಾಬಾದ್‌ನ ವ್ಯಾಪಾರಿಗಳು ಈ ಜೋಳದ ಹಣವನ್ನು ಪಾವತಿಸದೇ ವಂಚನೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಕಾರಣಕ್ಕಾಗಿ ರಾಮಕೃಷ್ಣ ಅವರು ಚಿಕ್ಕಬಳ್ಳಾಪುರದ ಪೆರೇಸಂದ್ರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ, ನ್ಯಾಯಕ್ಕಾಗಿ ಕಾಯುತ್ತಿದ್ದಾರೆ.
ಪೆರೇಸಂದ್ರ ಪೊಲೀಸ್ ಠಾಣೆಯ ಪಿಎಸ್‌ಐ ಜಗದೀಶ್ ರೆಡ್ಡಿ, ಆರೋಪಿ ಸೈಯದ್ ಅಬ್ದುಲ್ ಅಕ್ಟರ್ ಪಾಷಾನನ್ನು ಬಂಧಿಸಿ ವಿಚಾರಣೆ ನಡೆಸುತ್ತಿರುವಾಗ, ಸಚಿವ ಜಮೀರ್ ಅಹಮದ್ ಖಾನ್ ಅವರು ಪೊಲೀಸರಿಗೆ ಕರೆ ಮಾಡಿ ಸಹಾಯ ಮಾಡಿ, ಇವರು ಬಹಳ ಬೇಕಾದವರು ಎಂದು ಮನವಿ ಮಾಡಿದ್ದಾರೆ ಎನ್ನಲಾದ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಈ ಆಡಿಯೋ ಕರೆಯಿಂದ ರೈತರ ಆಕ್ರೋಶ ಮತ್ತಷ್ಟು ಉಲ್ಬಣಗೊಂಡಿದೆ. ರೈತರು, ಜಮೀರ್ ಅವರು ಮಧ್ಯಸ್ಥಿಕೆ ವಹಿಸದೇ ಇದ್ದಿದ್ದರೆ, ನಮಗೆ ನ್ಯಾಯ ಸಿಗುತ್ತಿತ್ತು ಮತ್ತು ಹಣ ವಾಪಸ್ ಬರುತ್ತಿತ್ತು ಎಂದು ಆರೋಪಿಸಿದ್ದಾರೆ.
