ಚಿಕ್ಕಬಳ್ಳಾಪುರ, ಏ. 03: ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧದ ಪ್ರಭಾವ ಈಗ ಕರ್ನಾಟಕದ ಚಿಕ್ಕಬಳ್ಳಾಪುರದ ತರಕಾರಿ ಬೆಳೆಗಾರರ ಮೇಲೂ ತಟ್ಟಿದೆ. ವಾಣಿಜ್ಯ ಸಿಲಿಂಡರ್‌ಗಳ ತೀವ್ರ ಕೊರತೆಯಿಂದಾಗಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಹೋಟೆಲ್‌ಗಳು ಮುಚ್ಚಲಾಗಿದೆ. ಇದರಿಂದ ತರಕಾರಿಗಳಿಗೆ ಬೇಡಿಕೆಯೇ ಇಲ್ಲದಂತಾಗಿದ್ದು, ರೈತರು ಕಂಗಾಲಾಗಿದ್ದಾರೆ.
ಹೋಟೆಲ್ ಬಂದ್, ತರಕಾರಿಗೆ ಬೆಲೆಯಿಲ್ಲ
ಚಿಕ್ಕಬಳ್ಳಾಪುರ ಪ್ರದೇಶವು ಹೂವು, ಹಣ್ಣು ಮತ್ತು ತರಕಾರಿಗಳಿಗೆ ಪ್ರಸಿದ್ಧಿ ಪಡೆದಿದೆ. ಇಲ್ಲಿ ಬೆಳೆಯುವ ತಾಜಾ ತರಕಾರಿಗಳು ಪ್ರತಿದಿನ ಬೆಂಗಳೂರು ಮತ್ತು ದೇಶದ ಇತರ ಮೆಟ್ರೋ ನಗರಗಳಿಗೆ ರಫ್ತಾಗುತ್ತವೆ. ಆದರೆ, ಇರಾನ್-ಇಸ್ರೇಲ್-ಅಮೆರಿಕ ಯುದ್ಧದಿಂದಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ವಾಣಿಜ್ಯ ಸಿಲಿಂಡರ್‌ಗಳ (ಎಲ್ಪಿಜಿ) ಪೂರೈಕೆ ಸ್ಥಗಿತಗೊಂಡಿದೆ. ಪರಿಣಾಮವಾಗಿ ಬೆಂಗಳೂರಿನ ಸಾವಿರಾರು ಹೋಟೆಲ್‌ಗಳು, ಢಾಬಾಗಳು ಮತ್ತು ಚಹಾ ಅಂಗಡಿಗಳು ಮುಚ್ಚಲ್ಪಟ್ಟಿವೆ. ಇದರಿಂದ ತರಕಾರಿ ಖರೀದಿಸುವವರೇ ಇಲ್ಲದಂತಾಗಿದೆ.
ಗಗನಕ್ಕೇರಿದ್ದ ತರಕಾರಿಗಳ ದರ
ಕಳೆದ 20 ದಿನಗಳ ಹಿಂದೆ, ಯುದ್ಧ ಆರಂಭವಾಗುವ ಮೊದಲು ತರಕಾರಿಗಳಿಗೆ ಒಳ್ಳೆಯ ಬೆಲೆ ಇತ್ತು. ಬೇಸಿಗೆಯಲ್ಲಿ ಬೀನ್ಸ್‌ನ ಕೆಜಿ ದರ ₹80-100 ರವರೆಗೂ ಇತ್ತು. ಆದರೆ ಈಗ ಸ್ಥಿತಿ ಸಂಪೂರ್ಣ ಬದಲಾಗಿದೆ. ಒಂದು ಮೂಟೆ ಬೀನ್ಸ್ (ಸುಮಾರು 15-20 ಕೆಜಿ) ಕೇವಲ ₹300-400 ಗೆ ಬಿಕರಿಯಾಗುತ್ತಿದೆ. ಕೆಜಿಗೆ ಕೇವಲ ₹20. ರೈತರು ಕಷ್ಟಪಟ್ಟು ಬೆಳೆದ ತರಕಾರಿಗಳು ಈಗ ಎಪಿಎಂಸಿ ಮಾರುಕಟ್ಟೆಯಲ್ಲಿ ರಾಶಿ ರಾಶಿ ಕೊಳೆಯುತ್ತಿವೆ.
ಪ್ರಮುಖ ತರಕಾರಿಗಳ ಪ್ರಸ್ತುತ ದರಗಳು (ಪ್ರತಿ ಕೆಜಿ)
| ತರಕಾರಿ | ಪ್ರಸ್ತುತ ದರ (₹) |
|---|---|
| ಬೀನ್ಸ್ | 20 |
| ಕ್ಯಾರೆಟ್ | 8 |
| ಸೋರೆಕಾಯಿ | 5 |
| ಆಲೂಗಡ್ಡೆ | 6 |
| ಬೆಂಡೆಕಾಯಿ | 10 |
| ಈರುಳ್ಳಿ | 12 |
| ಮೂಲಂಗಿ | 5 |
| ಆಗಲಕಾಯಿ | 15 |
| ಕ್ಯಾಪ್ಸಿಕಂ | 20 |
| ಬದನೇಕಾಯಿ | 2 |
ರೈತರ ಕಣ್ಣೀರು
ಹಗಲು-ರಾತ್ರಿ ಶ್ರಮಿಸಿ, ಬಿತ್ತನೆಯಿಂದ ಕೊಯ್ಲುವರೆಗೆ ಹತ್ತು ಹಂತಗಳಲ್ಲಿ ಕಷ್ಟಪಟ್ಟು ಬೆಳೆದ ತರಕಾರಿಗಳಿಗೆ ಇಷ್ಟೊಂದು ಕಡಿಮೆ ದೊರಕುತ್ತಿರುವುದು ರೈತರನ್ನು ಮಾನಸಿಕವಾಗಿ ಕುಗ್ಗಿಸಿದೆ.
ಗಲ್ಫ್ ಯುದ್ಧದ ಅನಿರೀಕ್ಷಿತ ಪರಿಣಾಮ
ವಾಣಿಜ್ಯ ಸಿಲಿಂಡರ್‌ಗಳ ಕೊರತೆಯು ಹೋಟೆಲ್ ಉದ್ಯಮವನ್ನು ಸಂಪೂರ್ಣವಾಗಿ ಕುಂಟಿತಗೊಳಿಸಿದೆ. ಹೋಟೆಲ್‌ಗಳು ಮುಚ್ಚಿರುವುದರಿಂದ ಅಲ್ಲಿ ತರಕಾರಿಗಳ ಬೇಡಿಕೆ ಶೂನ್ಯವಾಗಿದೆ. ಸಾರಿಗೆ ವೆಚ್ಚ ಮತ್ತು ಕೂಲಿ ನೀಡಿಯೂ ತರಕಾರಿ ಸಾಗಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ರೈತರು ತಮ್ಮ ಬೆಳೆಯನ್ನು ಸ್ಥಳೀಯವಾಗಿಯೇ ಕಡಿಮೆ ಬೆಲೆಗೆ ಎಸೆಯುವಂತಾಗಿದೆ.
