ಇರಾನ್‌ನ ಉಕ್ಕು ಕಾರ್ಖಾನೆಗಳನ್ನು ನಾಶಪಡಿಸಿದ ಇಸ್ರೇಲ್

Untitled design 2026 04 03T203214.627

ಜೆರುಸಲೇಂ, ಏ. 3: ಮಧ್ಯಪ್ರಾಚ್ಯದಲ್ಲಿ ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧ 35ನೇ ದಿನಕ್ಕೆ ಕಾಲಿಟ್ಟಿದೆ. ಈ ಸಂದರ್ಭದಲ್ಲಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ತಮ್ಮ ದೇಶದ ವಾಯುದಾಳಿಗಳ ಮೂಲಕ ಇರಾನ್‌ನ ಶೇ.70ರಷ್ಟು ಉಕ್ಕು ಉತ್ಪಾದನಾ ಸಾಮರ್ಥ್ಯವನ್ನು ನಾಶಪಡಿಸಿರುವುದಾಗಿ ಶುಕ್ರವಾರ ಘೋಷಿಸಿದ್ದಾರೆ.

ಕ್ಷಿಪಣಿಗಳು, ಡ್ರೋನ್‌ಗಳು ಮತ್ತು ಯುದ್ಧನೌಕೆಗಳ ತಯಾರಿಕೆಗೆ ಉಕ್ಕು ಅತ್ಯಂತ ಪ್ರಮುಖ ಕಚ್ಚಾವಸ್ತುವಾಗಿದೆ. ಇಸ್ರೇಲ್‌ನ ಈ ಕ್ರಮದಿಂದಾಗಿ ಇರಾನ್‌ನ ಶಸ್ತ್ರಾಸ್ತ್ರ ತಯಾರಿಕಾ ಸಾಮರ್ಥ್ಯಕ್ಕೆ ಭಾರಿ ಹಿನ್ನಡೆ ಉಂಟಾಗಿದೆ. ಈ ಕುರಿತು ವಿಡಿಯೋ ಸಂದೇಶವನ್ನು ಬಿಡುಗಡೆ ಮಾಡಿರುವ ನೆತನ್ಯಾಹು, ನಮ್ಮ ಮಿತ್ರ ರಾಷ್ಟ್ರ ಅಮೆರಿಕದ ಸಹಯೋಗದೊಂದಿಗೆ ನಾವು ಇರಾನ್‌ನ ಭಯೋತ್ಪಾದನಾ ಆಡಳಿತವನ್ನು ಹತ್ತಿಕ್ಕುವ ಕೆಲಸ ಮುಂದುವರಿಸಿದ್ದೇವೆ. ಕಮಾಂಡರ್‌ಗಳನ್ನು ಹತ್ಯೆಗೈಯುವ ಜೊತೆಗೆ ಶತ್ರು ರಾಷ್ಟ್ರದ ಸೇತುವೆಗಳು ಮತ್ತು ಮೂಲಸೌಕರ್ಯಗಳನ್ನು ಧ್ವಂಸಗೊಳಿಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.

ಯಾವ ಕಾರ್ಖಾನೆಗಳು ನಾಶವಾದವು?

ಕಳೆದ ಕೆಲವು ದಿನಗಳಲ್ಲಿ ಇಸ್ರೇಲ್ ವಾಯುಪಡೆಯು ಇರಾನ್‌ನ ಆರ್ಥಿಕ ಮತ್ತು ಮಿಲಿಟರಿ ಶಕ್ತಿಯ ಬೆನ್ನೆಲುಬಾಗಿದ್ದ ಉಕ್ಕು ಉದ್ಯಮದ ಮೇಲೆ ನಿರಂತರ ದಾಳಿ ನಡೆಸಿದೆ. ಇರಾನ್‌ನ ಅತಿದೊಡ್ಡ ಉಕ್ಕು ಕಾರ್ಖಾನೆಗಳಾದ ‘ಖುಜೆಸ್ತಾನ್ ಸ್ಟೀಲ್ ಕಂಪನಿ’ ಮತ್ತು ‘ಮುಬಾರಕೆ ಸ್ಟೀಲ್ ಕಂಪನಿ’ ಗಳ ಕಾರ್ಯಾಚರಣೆ ಸಂಪೂರ್ಣ ಸ್ಥಗಿತಗೊಂಡಿದೆ. ಈ ಘಟಕಗಳನ್ನು ಪುನರ್ನಿರ್ಮಿಸಲು ಕನಿಷ್ಠ ಕೆಲವು ತಿಂಗಳುಗಳ ಕಾಲಾವಕಾಶ ಬೇಕಾಗಬಹುದು ಎಂದು ಕಂಪನಿಗಳು ತಿಳಿಸಿವೆ. ಇದರಿಂದ ಇರಾನ್‌ನ ರೆವಲ್ಯೂಷನರಿ ಗಾರ್ಡ್ಸ್‌ಗೆ ಹಣಕಾಸಿನ ಸಮಸ್ಯೆ ತಂದೊಡ್ಡಲಿದೆ ಎಂದು ನೆತನ್ಯಾಹು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇರಾನ್‌ನ ತಿರುಗೇಟು

ತಮ್ಮ ಉಕ್ಕು ಕಾರ್ಖಾನೆಗಳ ಮೇಲಿನ ದಾಳಿಗೆ ಪ್ರತಿಯಾಗಿ ಇರಾನ್‌ನ ರೆವಲ್ಯೂಷನರಿ ಗಾರ್ಡ್ಸ್ ಈಗಾಗಲೇ ಇಸ್ರೇಲ್ ಮತ್ತು ಸುತ್ತಮುತ್ತಲ ಪ್ರದೇಶಗಳ ಕೈಗಾರಿಕಾ ವಲಯಗಳ ಮೇಲೆ ಕ್ಷಿಪಣಿ ಹಾಗೂ ಡ್ರೋನ್‌ ದಾಳಿಗಳನ್ನು ನಡೆಸಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ತೀವ್ರವಾಗಿ ತಿರುಗೇಟು ನೀಡುವ ಎಚ್ಚರಿಕೆಯನ್ನೂ ನೀಡಿದೆ. ಇದರಿಂದಾಗಿ ಮಧ್ಯಪ್ರಾಚ್ಯದಲ್ಲಿ ಯುದ್ಧದ ಆತಂಕ ಮತ್ತಷ್ಟು ತೀವ್ರಗೊಂಡಿದೆ.

ಕುವೈತ್ ಮೇಲೆ ಕ್ಷಿಪಣಿ ದಾಳಿ

ಗಲ್ಫ್ ರಾಷ್ಟ್ರಗಳ ಮೇಲಿನ ಸರಣಿ ದಾಳಿಗಳು ಮುಂದುವರಿದಿವೆ. ಶುಕ್ರವಾರ ಕುವೈತ್‌ನ ಪ್ರಮುಖ ವಿದ್ಯುತ್ ಮತ್ತು ಜಲಶುದ್ಧೀಕರಣ (Desalination) ಘಟಕದ ಮೇಲೆ ವೈಮಾನಿಕ ದಾಳಿ ನಡೆದಿದೆ. ಅಲ್ಲದೇ, ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಮೇಲೆ ನಡೆದ ಕ್ಷಿಪಣಿ ದಾಳಿಯನ್ನು ತಡೆಯುವ ವೇಳೆ ಬಿದ್ದ ಅವಶೇಷಗಳ ಕಾರಣದಿಂದ 12 ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆರೋಪ-ಪ್ರತ್ಯಾರೋಪ

ಕುವೈತ್ ಈ ದಾಳಿಗೆ ಇರಾನ್ ನೇರ ಕಾರಣ ಎಂದು ಆರೋಪಿಸಿದೆ. ಆದರೆ, ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಈ ಆರೋಪವನ್ನು ತಳ್ಳಿಹಾಕಿದ್ದು, ಇದು ಇಸ್ರೇಲ್‌ನ ಕೃತ್ಯ ಎಂದು ತಿರುಗೇಟು ನೀಡಿದೆ. ಇದಕ್ಕೂ ಮೊದಲು ಕುವೈತ್‌ನ ಅಲ್-ಅಹ್ಮದಿ ತೈಲ ಸಂಸ್ಕರಣಾ ಘಟಕದ ಮೇಲೆಯೂ ಡ್ರೋನ್‌ ದಾಳಿ ನಡೆಸಲಾಗಿತ್ತು. ಘಟನೆಯಿಂದಾಗಿ ಸಂಸ್ಕರಣಾ ಘಟಕದ ಹಲವು ವಿಭಾಗಗಳಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

Exit mobile version