ಯೆಮೆನ್‌ನಲ್ಲಿ ಮತ್ತೆ ರಕ್ತಪಾತ: ಸೇನಾ ಶಿಬಿರದ ಮೇಲೆ ಹೌತಿ ಕ್ಷಿಪಣಿ ದಾಳಿ, 53 ಸೈನಿಕರು ಸಾ*ವು

Untitled design 2026 10 20T095207.673

ಯೆಮೆನ್: ಮಧ್ಯಪ್ರಾಚ್ಯದಲ್ಲಿ ಪ್ರಾದೇಶಿಕ ಉದ್ವಿಗ್ನತೆ ಹೆಚ್ಚುತ್ತಿರುವ ಬೆನ್ನಲ್ಲೇ ಯೆಮೆನ್‌ನಲ್ಲಿ ಮತ್ತೊಮ್ಮೆ ರಕ್ತಪಾತ ಸಂಭವಿಸಿದೆ. ದಕ್ಷಿಣ ಯೆಮೆನ್‌ನ ಶಬ್ದಾ ಪ್ರಾಂತ್ಯದಲ್ಲಿರುವ ಅಲ್-ಅಲಮ್ ಸೇನಾ ತರಬೇತಿ ಶಿಬಿರದ ಮೇಲೆ ಇರಾನ್ ಬೆಂಬಲಿತ ಹೌತಿ ಬಂಡುಕೋರರು ನಡೆಸಿದ ಭೀಕರ ಕ್ಷಿಪಣಿ ದಾಳಿಯಲ್ಲಿ ಕನಿಷ್ಠ 53 ಸೈನಿಕರು ಮೃತಪಟ್ಟಿದ್ದು, 200ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಆಡಳಿತ ತಿಳಿಸಿದೆ.  

ಶಿಬಿರದಲ್ಲಿ ಹೊಸದಾಗಿ ನೇಮಕಗೊಂಡ ಭದ್ರತಾ ಸಿಬ್ಬಂದಿಗೆ ಕವಾಯತು ಹಾಗೂ ಸೇನಾ ತರಬೇತಿ ನೀಡಲಾಗುತ್ತಿತ್ತು. ಈ ಸಂದರ್ಭದಲ್ಲಿ ಬಂಡುಕೋರರು ಏಕಾಏಕಿ ಮೂರು ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಉಡಾಯಿಸಿದ್ದಾರೆ ಎನ್ನಲಾಗಿದೆ. ಕ್ಷಿಪಣಿಗಳು ಸೇನಾ ಶಿಬಿರದ ಮೇಲೆ ಅಪ್ಪಳಿಸಿದ ಪರಿಣಾಮ ಭಾರೀ ಸಾವು-ನೋವು ಸಂಭವಿಸಿದೆ. ಗಾಯಗೊಂಡವರಲ್ಲಿ ಹಲವರ ಸ್ಥಿತಿ ಗಂಭೀರವಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಆತಂಕವೂ ಇದೆ.

ಮತ್ತೆ ತೀವ್ರಗೊಂಡ ಯೆಮೆನ್ ಸಂಘರ್ಷ

ಯೆಮೆನ್‌ನಲ್ಲಿ ಹಲವು ವರ್ಷಗಳಿಂದ ನಡೆಯುತ್ತಿರುವ ಅಂತರ್ಯುದ್ಧವು ಲಕ್ಷಾಂತರ ಜನರ ಬದುಕಿನ ಮೇಲೆ ಗಂಭೀರ ಪರಿಣಾಮ ಬೀರಿದೆ. ಸೌದಿ ಅರೇಬಿಯಾ ಬೆಂಬಲಿತ ಯೆಮೆನ್ ಸರ್ಕಾರಿ ಪಡೆಗಳು ಹಾಗೂ ಇರಾನ್ ಬೆಂಬಲಿತ ಹೌತಿ ಬಂಡುಕೋರರ ನಡುವಿನ ಸಂಘರ್ಷವು ದೇಶದ ರಾಜಕೀಯ ಸ್ಥಿರತೆ ಮತ್ತು ಭದ್ರತೆಗೆ ದೊಡ್ಡ ಸವಾಲಾಗಿದೆ.

ಕಳೆದ ತಿಂಗಳು ಕೆಂಪು ಸಮುದ್ರದ ತೀರದಲ್ಲಿರುವ ಪ್ರಮುಖ ಪ್ರದೇಶಗಳನ್ನು ಹೌತಿ ಬಂಡುಕೋರರು ವಶಪಡಿಸಿಕೊಂಡ ಬಳಿಕ ಸಂಘರ್ಷ ಮತ್ತಷ್ಟು ತೀವ್ರಗೊಂಡಿದೆ ಎನ್ನಲಾಗಿದೆ. ಇದಕ್ಕೆ ಪ್ರತಿಯಾಗಿ ಯೆಮೆನ್ ಸರ್ಕಾರಿ ಪಡೆಗಳು ಬಂಡುಕೋರರ ನಿಯಂತ್ರಣದಲ್ಲಿರುವ ಪ್ರದೇಶಗಳನ್ನು ಮರಳಿ ಪಡೆಯಲು ಕಾರ್ಯಾಚರಣೆ ಆರಂಭಿಸಿವೆ. ರಾಜಧಾನಿ ಸನಾ ಸೇರಿದಂತೆ ಪ್ರಮುಖ ಪ್ರದೇಶಗಳ ಮೇಲೆ ನಿಯಂತ್ರಣ ಸಾಧಿಸುವ ಪ್ರಯತ್ನಗಳು ಮುಂದುವರಿದಿವೆ.

‘ಡಾನ್ ಆಫ್ ಯೆಮೆನ್’ ಕಾರ್ಯಾಚರಣೆ

ಹೌತಿಗಳ ಹಿಡಿತದಲ್ಲಿರುವ ಪ್ರದೇಶಗಳನ್ನು ಮರಳಿ ಪಡೆಯುವ ಉದ್ದೇಶದಿಂದ ಯೆಮೆನ್ ಸರ್ಕಾರಿ ಪಡೆಗಳು ‘ಡಾನ್ ಆಫ್ ಯೆಮೆನ್’ ಹೆಸರಿನ ಕಾರ್ಯಾಚರಣೆ ಆರಂಭಿಸಿರುವುದಾಗಿ ವರದಿಯಾಗಿದೆ. ಈ ಕಾರ್ಯಾಚರಣೆಯ ಭಾಗವಾಗಿ ಬಂಡುಕೋರರ ನೆಲೆಗಳು ಹಾಗೂ ಶಸ್ತ್ರಾಸ್ತ್ರ ಸಾಗಣೆ ವಾಹನಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗುತ್ತಿದೆ.

ಇನ್ನೊಂದೆಡೆ, ಹೌತಿ ಬಂಡುಕೋರರು ಸೌದಿ ಅರೇಬಿಯಾದ ಪ್ರಮುಖ ನೆಲೆಗಳ ಮೇಲೂ ದಾಳಿಗಳನ್ನು ತೀವ್ರಗೊಳಿಸಿರುವುದಾಗಿ ವರದಿಗಳು ತಿಳಿಸಿವೆ. ವಿಮಾನ ನಿಲ್ದಾಣಗಳು ಮತ್ತು ಅರಾಮ್ಕೊ ತೈಲ ಸಂಸ್ಥೆಗೆ ಸಂಬಂಧಿಸಿದ ನೆಲೆಗಳ ಮೇಲಿನ ದಾಳಿಯ ಆತಂಕದಿಂದ ಪ್ರಾದೇಶಿಕ ಭದ್ರತಾ ಪರಿಸ್ಥಿತಿ ಮತ್ತಷ್ಟು ಸೂಕ್ಷ್ಮವಾಗಿದೆ. ರಿಯಾದ್ ನಗರದಲ್ಲಿ ವೈಮಾನಿಕ ದಾಳಿಯ ಎಚ್ಚರಿಕೆ ನೀಡಲಾಗಿದೆ ಎಂಬ ಮಾಹಿತಿಯೂ ವರದಿಯಾಗಿದೆ. ಈ ಬೆಳವಣಿಗೆಗಳು ಯೆಮೆನ್ ಸಂಘರ್ಷವು ದೇಶದ ಗಡಿಗಳನ್ನು ಮೀರಿ ಪರಿಣಾಮ ಬೀರುವ ಸಾಧ್ಯತೆಯನ್ನು ಹೆಚ್ಚಿಸಿವೆ.

ದಾಳಿಗೆ ತಕ್ಕ ಪ್ರತ್ಯುತ್ತರ ನೀಡುವ ಎಚ್ಚರಿಕೆ

ಸೇನಾ ತರಬೇತಿ ಶಿಬಿರದ ಮೇಲಿನ ದಾಳಿಗೆ ಯೆಮೆನ್ ಅಧ್ಯಕ್ಷೀಯ ನಾಯಕತ್ವ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಅಧ್ಯಕ್ಷೀಯ ಮಂಡಳಿಯ ಮುಖ್ಯಸ್ಥ ರಶಾದ್ ಅಲ್-ಅಲಿಮಿ, ತರಬೇತಿ ಪಡೆಯುತ್ತಿದ್ದ ಯೋಧರನ್ನು ಗುರಿಯಾಗಿಸಿಕೊಂಡು ನಡೆದಿರುವ ದಾಳಿಗೆ ತಕ್ಕ ಪ್ರತ್ಯುತ್ತರ ನೀಡುವುದಾಗಿ ಎಚ್ಚರಿಸಿದ್ದಾರೆ.

ಹೌತಿ ಬಂಡುಕೋರರು ಒತ್ತಡಕ್ಕೆ ಸಿಲುಕಿದಾಗ ಇಂತಹ ದಾಳಿಗಳನ್ನು ನಡೆಸುತ್ತಾರೆ ಎಂದು ಅವರು ಆರೋಪಿಸಿದ್ದಾರೆ. ಈ ಘಟನೆಯು ಸರ್ಕಾರಿ ಪಡೆಗಳ ಮುಂದಿನ ಕಾರ್ಯತಂತ್ರದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.

ದಾಳಿಯ ಹೊಣೆ ಹೊತ್ತ ಹೌತಿಗಳು

ಇತ್ತ, ಅಲ್-ಅಲಮ್ ಸೇನಾ ಶಿಬಿರದ ಮೇಲಿನ ಕ್ಷಿಪಣಿ ದಾಳಿಯ ಹೊಣೆಯನ್ನು ಹೌತಿ ಸಂಘಟನೆ ಹೊತ್ತುಕೊಂಡಿದೆ ಎಂದು ವರದಿಯಾಗಿದೆ. ಸೌದಿ ಬೆಂಬಲಿತ ಪಡೆಗಳು ನೆಲೆಸಿರುವ ಸೇನಾ ಶಿಬಿರಗಳು ತಮ್ಮ ಗುರಿಗಳಾಗಿವೆ ಎಂದು ಹೌತಿ ವಕ್ತಾರ ಯಾಹ್ಯಾ ಸಾರೀ ಹೇಳಿದ್ದಾನೆ. ಮುಂದೆಯೂ ಇಂತಹ ನೆಲೆಗಳ ಮೇಲೆ ದಾಳಿಗಳನ್ನು ಮುಂದುವರಿಸುವುದಾಗಿ ಸಂಘಟನೆ ಎಚ್ಚರಿಸಿದೆ ಎನ್ನಲಾಗಿದೆ.

ಇದೇ ವೇಳೆ, ಯೆಮೆನ್ ಸರ್ಕಾರಿ ಪಡೆಗಳು ತೈಜ್ ಪ್ರಾಂತ್ಯದ ದಕ್ಷಿಣ ಭಾಗದಲ್ಲಿರುವ ಹೌತಿಗಳ ಅಡಗುದಾಣಗಳು ಹಾಗೂ ಶಸ್ತ್ರಾಸ್ತ್ರ ವಾಹನಗಳ ಮೇಲೆ ಪ್ರತಿದಾಳಿ ಮುಂದುವರಿಸಿವೆ.

 

Exit mobile version