ಬೆಂಗಳೂರು: ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರ ನಿವಾಸದಲ್ಲಿ ನಿಯೋಜಿತರಾಗಿದ್ದ ಮೂವರು ಭದ್ರತಾ ಸಿಬ್ಬಂದಿಯನ್ನು ಗೃಹ ಇಲಾಖೆ ಹಿಂಪಡೆದುಕೊಂಡಿದೆ. ಈ ಕ್ರಮದಿಂದ ಕೋಪಗೊಂಡ ನಾರಾಯಣಸ್ವಾಮಿ, ಇದರ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಪ್ರಿಯಾಂಕ್ ಖರ್ಗೆ ಕೈವಾಡ ಇದೆ ಎಂದು ತೀವ್ರ ಆರೋಪ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಪತ್ರಕರ್ತರನ್ನು ಕುರಿತು ಮಾತನಾಡಿದ ಛಲವಾದಿ ನಾರಾಯಣಸ್ವಾಮಿ ಅವರು, ನಮ್ಮ ಮನೆಗೆ ಬೆಂಗಾವಲು ರಕ್ಷಕರನ್ನು ಕೊಟ್ಟಿದ್ದರು. ಆದರೆ ಈಗ ಮೂವರು ಭದ್ರತಾ ಸಿಬ್ಬಂದಿಗಳನ್ನು ವಾಪಾಸ್ ಪಡೆದುಕೊಂಡಿದ್ದಾರೆ. ನನಗೆ ಭದ್ರತೆ ಬೇಕು. ಇದರ ಹಿಂದೆ ಪ್ರಿಯಾಂಕ್ ಖರ್ಗೆ ಕೈವಾಡವಿದೆ ಎಂದು ಆರೋಪಿಸಿದರು. ತಮಗೆ ಏನಾದರೂ ಆದರೆ ಸರ್ಕಾರವಷ್ಟೇ ಅಲ್ಲ, ಪ್ರಿಯಾಂಕ್ ಖರ್ಗೆ ಮತ್ತು ಅವರ ಕುಟುಂಬವೂ ಸಂಪೂರ್ಣವಾಗಿ ಹೊಣೆಗಾರರು ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಾನು ವಿಪಕ್ಷ ನಾಯಕನಾಗಿ ಒಂದೂವರೆ ವರ್ಷ ಕಳೆದಿದೆ. ಆದರೆ ಈವರೆಗೆ ನನಗೆ ಸರ್ಕಾರಿ ಮನೆ ಕೊಟ್ಟಿಲ್ಲ. ಇದೇ ಜಾಗದಲ್ಲಿ ಸಿದ್ದರಾಮಯ್ಯ ಇದ್ದಾಗ ಜಗಳವಾಡಿ ಮನೆ ತೆಗೆದುಕೊಂಡಿದ್ದರು. ಈಗ ನನಗೆ ಕೊಟ್ಟ ಭದ್ರತೆಯನ್ನೂ ಹಿಂಪಡೆದಿದ್ದಾರೆ.ನನಗೆ ಕೊಟ್ಟ ಭದ್ರತೆ ವಾಪಸ್ ಪಡೆದಿದ್ದು ಯಾಕೆ? ಇದಕ್ಕೆ ಗೃಹ ಸಚಿವರು ಉತ್ತರ ನೀಡಲಿ. ಇಲ್ಲವಾದಲ್ಲಿ ನನಗೆ ಕೊಟ್ಟಿರುವ ಇತರೆ ಸೌಲಭ್ಯಗಳಾದ ಕಾರು, ಬೆಂಗಾವಲು, ಭದ್ರತಾ ಸಿಬ್ಬಂದಿ ಎಲ್ಲವನ್ನೂ ವಾಪಸ್ ಕಳುಹಿಸುತ್ತೇನೆ ಎಂದು ಕಿಡಿಕಾರಿದ್ದಾರೆ.





