ತುಮಕೂರು: ತುಮಕೂರು ಮಿಲ್ಕ್ ಯೂನಿಯನ್ (ತುಮುಲ್)ನಲ್ಲಿ ದಲಿತ ಅಧಿಕಾರಿಯೊಬ್ಬರಿಗೆ ಅವರ ಜಾತಿ ಹಿನ್ಕೆಲೆಯ ಕಾರಣದಿಂದಲೇ ಕಿರುಕುಳ ನೀಡಿರುವ ಘಟನೆ ತುಮಕೂರಿನಲ್ಲಿ ನಡೆದಿದೆ. ಕಚೇರಿಯಲ್ಲೇ ಹಿರಿಯ ಅಧಿಕಾರಿಗಳು ಚೇರು-ಟೇಬಲ್ ಕಿತ್ತುಕೊಂಡು ನೆಲದ ಮೇಲೆ ಕುಳಿತು ಕೆಲಸ ಮಾಡಿಸಿದ್ದು ತೀವ್ರ ನಿಂದನೆ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ.
ತುಮುಲ್ನ ಲೆಕ್ಕಪತ್ರ ವಿಭಾಗದ ಆಡಳಿತ ಅಧೀಕ್ಷಕರಾಗಿರುವ 35 ವರ್ಷದ ವಿನಯ್, ಎಂ.ಕಾಂ. ಮತ್ತು ಎಂಬಿಎ ಪದವೀಧರರಾಗಿದ್ದಾರೆ. ವಿನಯ್ ಮೂಲತಃ ರಾಮನಗರ ಜಿಲ್ಲೆಯವರು. ಕಳೆದ ಎಂಟು ವರ್ಷಗಳಿಂದ ಈ ಸಂಸ್ಥೆಯಲ್ಲಿ ನಿಷ್ಠೆಯಿಂದ ಸೇವೆ ಸಲ್ಲಿಸುತ್ತಿದ್ದಾರೆ.
‘ಫೇವರ್’ ಮಾಡದ ಕಾರಣಕ್ಕೆ ಕಿರುಕುಳ?
ವಿನಯ್ ಅವರ ಅನುಭವದ ಪ್ರಕಾರ, ತುಮುಲ್ನಲ್ಲಿ ಮೇಲ್ವಿಚಾರಕರಾಗಿರುವ ಉಮೇಶ್ (ಯುಮೇಶ್) ಎಸ್ (ಮೇಲ್ಜಾತಿ) ಮತ್ತು ಪರಿಶಿಷ್ಟ ವರ್ಗದವರೇ ಆದ ಮಂಜುನಾಥ ನಾಯಕ್ ಅವರು ಇಬ್ಬರೂ ಸೇರಿ ಅವರನ್ನು ಕಿರುಕುಳ ನೀಡುತ್ತಿದ್ದಾರೆ. ನಾನು ಅವರ ಫೇವರ್ ಆಗಿ ಕೆಲಸ ಮಾಡಿಲ್ಲ ಎಂಬುದೇ ಈ ಕಿರುಕುಳದ ಪ್ರಮುಖ ಕಾರಣವೆಂದು ವಿನಯ್ ಆರೋಪಿಸಿದ್ದಾರೆ.
ಅವರು ನನಗೆ ನೀಡಿದ್ದ ಕುರ್ಚಿ, ಟೇಬಲ್ ಇನ್ನಿತರ ವಸ್ತುಗಲನ್ನು ಕಿತ್ತುಕೊಂಡಿದ್ದಾರೆ ಇದರ ಜೊತೆಗೆ ಮಾನಸಿಕವಾಗಿ ಕುಗ್ಗಿ ಹೋಗುವಂತೆ ಜಾತಿ ನಿಂದನೆ ಮಾಡಿ, ಹಲ್ಲೆ ಮಾಡಲು ಮುಂದಾಗಿದ್ದಾರೆ. ಅಂತಿಮವಾಗಿ ನನ್ನನ್ನು ನೆಲದ ಮೇಲೆ ಕುಳಿತು ಕೆಲಸ ಮಾಡುವಂತೆ ಒತ್ತಾಯಿಸಿದ್ದಾರೆ ಎಂದು ವಿನಯ್ ಮನಸ್ತಾಪವನ್ನು ವ್ಯಕ್ತಪಡಿಸಿದ್ದಾರೆ.
ಎಂಡಿಯವರ ಸೂಚನೆಗೆ ಪ್ಲಾಸ್ಟಿಕ್ ಚೀಲವೂ ಕಸಿದು!
ಈ ಕಿರುಕುಳ ಕೇವಲ ಚೇರು-ಟೇಬಲ್ ವರೆಗೆ ಮಾತ್ರ ಸೀಮಿತವಾಗಿಲ್ಲ. ವಿನಯ್ ಅವರು ಹೇಳುವ ಪ್ರಕಾರ, ತುಮುಲ್ನ ವ್ಯವಸ್ಥಾಪಕ ನಿರ್ದೇಶಕರು (ಎಂಡಿ) ಶ್ರೀನಿವಾಸನ್ ಅವರೇ ಈ ಕಿರುಕುಳಕ್ಕೆ ಪರೋಕ್ಷ ಸಮರ್ಥನೆ ನೀಡಿದ್ದಾರೆ. “ಒಕ್ಕೂಟದ ಎಂಡಿ ಅವರ ಸೂಚನೆ ಮೇರೆಗೆ, ಇಷ್ಟು ದಿನ ನಾನು ನೆಲದ ಮೇಲೆ ಕುಳಿತುಕೊಳ್ಳಲು ಬಳಸುತ್ತಿದ್ದ ಪ್ಲಾಸ್ಟಿಕ್ ಚೀಲವನ್ನೂ ಕಸಿದುಕೊಂಡಿದ್ದಾರೆ. ಈಗ ಬರೀ ನೆಲದ ಮೇಲೆ ಕುಳಿತು ಕೆಲಸ ಮಾಡುತ್ತಿದ್ದೇನೆ” ಎಂದು ವಿನಯ್ ತಮ್ಮ ಅಸಹಾಯಕತೆಯನ್ನು ವ್ಯಕ್ತಪಡಿಸಿದ್ದಾರೆ.
ಈ ಸಮಸ್ಯೆಯ ಬಗ್ಗೆ ಎಂಡಿ ಶ್ರೀನಿವಾಸನ್ ಅವರಿಗೆ ಮಾಹಿತಿ ನೀಡಿದ್ದರೂ, ಅವರು ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ಮಾಡುತ್ತಿದ್ದಾರೆಂದೂ ಆರೋಪ.
ಪೊಲೀಸರು ದೂರು ದಾಖಲಿಸದೇ ನಿರ್ಲಕ್ಷ್ಯ!
ಮಾನಸಿಕ ಹಿಂಸೆ ಮತ್ತು ಜಾತಿ ತಾರತಮ್ಯದಿಂದ ಬಳಲುತ್ತಿರುವ ವಿನಯ್ ಅವರು ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಗೆ ಈ ಬಗ್ಗೆ ದೂರು ನೀಡಿದ್ದಾರೆ. ಕಿರುಕುಳ ನೀಡುತ್ತಿರುವ ವ್ಯಕ್ತಿಗಳ ವಿರುದ್ಧ ತಾನೇ ಸ್ವತಃ ರಾಜೀನಾಮೆ ನೀಡಿ ಹೋಗುವಂತೆ ಒತ್ತಡ ಹೇರಲಾಗುತ್ತಿದೆ ಎಂದು ದೂರಿನಲ್ಲಿ ತಿಳಿಸಲಾಗಿತ್ತು. ಆದರೆ, ಪೊಲೀಸರು ಈ ದೂರನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ ಎಂದು ವಿನಯ್ ಆರೋಪಿಸಿದ್ದಾರೆ.
“ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಜಿಲ್ಲಾ ಪೊಲೀಸ್ ಅಧೀಕ್ಷರ (ಎಸ್ಪಿ) ಅವರಿಗೆ ಕೂಡಾ ಈ ವಿಚಾರವನ್ನು ತಿಳಿಸಿದ್ದೇನೆ. ಆದರೆ ಇದುವರೆಗೂ ಕಿರುಕುಳ ನೀಡುತ್ತಿರುವ ವ್ಯಕ್ತಿಗಳ ವಿರುದ್ಧ ಯಾವುದೇ ಎಫ್ಐಆರ್ ದಾಖಲಾಗಿಲ್ಲ,” ಎಂದು ವಿನಯ್ ತಿಳಿಸಿದ್ದಾರೆ.