ಮಹಿಳೆಯರ ಉಚಿತ ಟಿಕೆಟ್ ಪುರುಷರಿಗೆ ನೀಡಿ ಹಣ ಪೀಕಿದ ನಾಲ್ವರು ಕಂಡಕ್ಟರ್‌‌ ಅಮಾನತು

Untitled design 2026 04 12T134350.362

ಬೆಂಗಳೂರು, ಏಪ್ರಿಲ್ 12: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ‘ಶಕ್ತಿ’ ಯೋಜನೆ ದುರುಪಯೋಗವಾಗಿರುವ ಘಟನೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ (BMTC) ಬೆಳಕಿಗೆ ಬಂದಿದೆ. ಕೆಲವು ನಿರ್ವಾಹಕರು (ಕಂಡಕ್ಟರ್ಗಳು) ಪುರುಷ ಪ್ರಯಾಣಿಕರಿಗೆ, ಮಹಿಳೆಯರಿಗೆ ಮಾತ್ರ ಉಚಿತವಾಗಿ ನೀಡುವ ಟಿಕೆಟ್ ನೀಡಿ, ಸಂಸ್ಥೆಗೆ ಸೇರಬೇಕಿದ್ದ ಲಕ್ಷಾಂತರ ರೂಪಾಯಿಗಳನ್ನು ತಮ್ಮ ವೈಯಕ್ತಿಕ UPI ಖಾತೆಗಳಿಗೆ ಹಾಕಿಸಿಕೊಂಡಿದ್ದಾರೆ. ಈ ಹಗರಣದಲ್ಲಿ ಭಾಗಿಯಾದ ನಾಲ್ವರು ಕಂಡಕ್ಟರ್‌‌ಗಳನ್ನು ತಕ್ಷಣ ಅಮಾನತುಗೊಳಿಸಿ, ಅವರ ವಿರುದ್ಧ ಶಿಸ್ತು ಕ್ರಮಕ್ಕೆ ಆದೇಶಿಸಲಾಗಿದೆ.

ಹೇಗೆ ನಡೆದಿದೆ ಹಗರಣ?

ಶಕ್ತಿ ಯೋಜನೆಯ ಅಡಿಯಲ್ಲಿ, ಮಹಿಳಾ ಪ್ರಯಾಣಿಕರು ಬಿಎಂಟಿಸಿ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದಾಗಿದೆ. ಈ ಯೋಜನೆಯ ಟಿಕೆಟ್‌ಗಳ ಮೇಲೆ ಕನ್ನಡದಲ್ಲಿ “ಉಚಿತ ಪ್ರಯಾಣ,ಕೇವಲ ಮಹಿಳೆಯರಿಗೆ ಮಾತ್ರ” ಎಂದು ಸ್ಪಷ್ಟವಾಗಿ ಮುದ್ರಿಸಲಾಗಿದೆ. ಆದರೆ, ಕನ್ನಡ ಓದಲು ಬಾರದ ಪುರುಷ ಪ್ರಯಾಣಿಕರನ್ನೇ ಗುರಿಯಾಗಿಸಿಕೊಂಡು, ಅವರಿಗೆ ಮಹಿಳೆಯರ ಉಚಿತ ಟಿಕೆಟ್‌ಗಳನ್ನು ನೀಡಿ ಹಣ ವಸೂಲಿ ಮಾಡಲಾಗುತ್ತಿತ್ತು.

ಬಿಎಂಟಿಸಿ ಪ್ರಯಾಣಿಕರ ಅನುಕೂಲಕ್ಕಾಗಿ ಬಸ್ಸುಗಳಲ್ಲಿ ಅಳವಡಿಸಿದ್ದ ಅಧಿಕೃತ UPI QR ಕೋಡ್‌ಗಳನ್ನು ಈ ಕಂಡಕ್ಟರ್‌‌ಗಳು ಡಿಪೋದಿಂದ ಬಸ್ ಹೊರಟ ಕೂಡಲೇ ಕಿತ್ತು ಇಟ್ಟುಕೊಳ್ಳುತ್ತಿದ್ದರು. ಪ್ರಯಾಣಿಕರು ಯುಪಿಐ ಮೂಲಕ ಹಣ ಪಾವತಿಸಲು ಮುಂದಾದಾಗ, ತಮ್ಮ ವೈಯಕ್ತಿಕ ಮೊಬೈಲ್‌ನಲ್ಲಿರುವ ಸ್ವಂತ QR ಕೋಡ್ ತೋರಿಸಿ, ಹಣವನ್ನು ನೇರವಾಗಿ ತಮ್ಮ ಬ್ಯಾಂಕ್ ಖಾತೆಗೆ ಜಮಾ ಮಾಡಿಸಿಕೊಳ್ಳುತ್ತಿದ್ದರು. ನಿಗಮಕ್ಕೆ ಒಂದೇ ಒಂದು ಪೈಸೆಯೂ ಸೇರದಂತೆ ಮಾಡಲಾಗುತ್ತಿತ್ತು.

ತನಿಖೆಯಲ್ಲಿ ಬಯಲಾದ ಕಳ್ಳಾಟ

ಬಿಎಂಟಿಸಿಯ ಸೆಕ್ಯೂರಿಟಿ ಅಧಿಕಾರಿಗಳಿಗೆ ಈ ಬಗ್ಗೆ ಗುಪ್ತ ಮಾಹಿತಿ ಸಿಕ್ಕಿದ್ದನ್ನು ಆಧರಿಸಿ ತಪಾಸಣೆ ಆರಂಭಿಸಲಾಯಿತು. ಪರಿಶೀಲನೆಯಲ್ಲಿ ಹತ್ತಕ್ಕೂ ಹೆಚ್ಚು ಕಂಡಕ್ಟರ್‌ಗಳು ಈ ಅಕ್ರಮದಲ್ಲಿ ಭಾಗಿಯಾಗಿರುವುದು ಕಂಡುಬಂದಿದೆ. ಆದರೆ, ಮೊದಲ ಹಂತದಲ್ಲಿ ನಾಲ್ವರು ಕಂಡಕ್ಟರ್‌ಗಳು ವಿರುದ್ಧ ಸ್ಪಷ್ಟ ಪುರಾವೆಗಳು ದೊರಕಿವೆ.

ಅಮಾನತುಗೊಂಡ ಕಂಡಕ್ಟರ್‌ಗಳ ವಿವರ ಮತ್ತು ಅಕ್ರಮ ಹಣ
ಕಂಡಕ್ಟರ್ ಹೆಸರು ಡಿಪೋ ಸಂಖ್ಯೆ ವೈಯಕ್ತಿಕ UPI ಗೆ ಬಂದ ಮೊತ್ತ
ಸೂರ್ಯನಾರಾಯಣ 18 ₹54,290
ಬೊಮ್ಮಲಿಂಗೇಶ್ ಸಿ. 18 ₹16,404
ಬ್ರಿಜೇಶ್ ಬಾಬು 51 ₹9,795
ಮೋಹನ್ 18 ₹6,117

ಇವರ ಜೊತೆಗೆ, ಇನ್ನೂ ಅನೇಕ ಕಂಡಕ್ಟರ್‌ಗಳ ಖಾತೆಗಳಲ್ಲಿ 10 ಸಾವಿರದಿಂದ 50 ಸಾವಿರ ರೂಪಾಯಿವರೆಗೆ ಅನಧಿಕೃತ UPI ವಹಿವಾಟು ನಡೆದಿರುವುದು ಪತ್ತೆಯಾಗಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ತನಿಖೆ ನಡೆಸಿ, ದೋಷಿಗಳನ್ನು ಅಮಾನತುಗೊಳಿಸಲಾಗುವುದು ಎಂದು ಬಿಎಂಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.

ಕನ್ನಡ ಬಾರದ ಪ್ರಯಾಣಿಕರು, ವಲಸೆ ಕಾರ್ಮಿಕರು, ಹೊರ ರಾಜ್ಯದವರು ಮತ್ತು ಪ್ರವಾಸಿಗರು ಈ ವಂಚನೆಗೆ ಸುಲಭವಾಗಿ ಬಲಿಯಾಗುತ್ತಿದ್ದರು. “ಮಹಿಳೆಯರ ಉಚಿತ ಟಿಕೆಟ್ ಅನ್ನು ತಪ್ಪಾಗಿ ಪುರುಷರಿಗೆ ನೀಡಿ, ಅದಕ್ಕೆ ಹಣ ಪಡೆಯುವುದು ನೇರವಾಗಿ ಸರ್ಕಾರಿ ಯೋಜನೆಯ ದುರುಪಯೋಗ ಮತ್ತು ಮೋಸ” ಎಂದು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರು ಹೇಳಿದ್ದಾರೆ. ಅಮಾನತುಗೊಂಡ ನಾಲ್ವರು ಕಂಡಕ್ಟರ್‌ಗಳ ವಿರುದ್ಧ ಪೊಲೀಸ್ ದೂರು ದಾಖಲಿಸುವ ಸಾಧ್ಯತೆಯೂ ಇದೆ.

 

Exit mobile version