ಗಲ್ಫ್ ರಾಷ್ಟ್ರಗಳ ಯುದ್ಧದ ಎಫೆಕ್ಟ್: ಎಲ್‌ಪಿಜಿ ಬೆನ್ನಲ್ಲೇ ಈಗ ಡಾಂಬರು ಅಭಾವ, ರಸ್ತೆ ಕಾಮಗಾರಿಗಳು ಸ್ಥಗಿತ!

Untitled design 2026 04 04T080106.863

ಕಾರವಾರ, ಏಪ್ರಿಲ್ 4: ಗಲ್ಫ್ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಇರಾನ್-ಇಸ್ರೇಲ್ ನಡುವಿನ ಸತತ ಯುದ್ಧದ ಭೀತಿಯು ಭಾರತದ ಆರ್ಥಿಕತೆ ಮತ್ತು ಮೂಲಸೌಕರ್ಯ ಅಭಿವೃದ್ಧಿಯ ಮೇಲೆ ತೀವ್ರ ಪರಿಣಾಮ ಬೀರಲಾರಂಭಿಸಿದೆ. ಹಾರ್ಮುಜ್ ಜಲಸಂಧಿ ಮಾರ್ಗವು ಸಂಘರ್ಷದ ಹಿನ್ನೆಲೆಯಲ್ಲಿ ಬಂದ್ ಆಗಿರುವುದರಿಂದ, ಎಲ್‌ಪಿಜಿ ಗ್ಯಾಸ್ ಮಾತ್ರವಲ್ಲದೆ ಕಚ್ಚಾ ಡಾಂಬರು (ಬಿಟುಮಿನ್) ಪೂರೈಕೆಯಲ್ಲೂ ತೀವ್ರ ವ್ಯತ್ಯಯ ಉಂಟಾಗಿದೆ. ಇದರಿಂದಾಗಿ ಎಲ್‌ಪಿಜಿ ಹಾಗೂ ಆಟೋ ಗ್ಯಾಸ್ ಕೊರತೆಯ ಬೆನ್ನಲ್ಲೇ ಈಗ ರಸ್ತೆ ಕಾಮಗಾರಿಗಳು ಸ್ಥಗಿತಗೊಂಡಿರುವುದು ಗುತ್ತಿಗೆದಾರರನ್ನು ಹೈರಾಣಾಗಿಸಿದೆ.

ಕಾರವಾರ ಬಂದರಿನಲ್ಲಿ ಬಿಕೋ

ಇರಾಕ್ ಮತ್ತು ಯುಎಇ (UAE) ರಾಷ್ಟ್ರಗಳಿಂದ ಕಾರವಾರ ವಾಣಿಜ್ಯ ಬಂದರಿಗೆ ನಿಯಮಿತವಾಗಿ ಬರುತ್ತಿದ್ದ ಕಚ್ಚಾ ಡಾಂಬರು ಪೂರೈಕೆ ಸಂಪೂರ್ಣ ಸ್ಥಗಿತಗೊಂಡಿದೆ. ಯುದ್ಧ ಆರಂಭವಾದ ಬಳಿಕ ಮಾರ್ಚ್ 13ರಂದು ಕೇವಲ ಒಂದು ಹಡಗು ಮಾತ್ರ ಬಂದಿತ್ತು. ಅಂದಿನಿಂದ ಇಲ್ಲಿಯವರೆಗೆ ಯಾವುದೇ ಸರಕು ಬಂದಿಲ್ಲ. ಇದರಿಂದಾಗಿ ಕಾರವಾರ ಬಂದರು ಚಟುವಟಿಕೆಗಳಿಲ್ಲದೆ ಬಿಕೋ ಎನ್ನುತ್ತಿದೆ. ಸಾಮಾನ್ಯವಾಗಿ ದಕ್ಷಿಣ ಭಾರತದ ಅನೇಕ ರಾಜ್ಯಗಳಿಗೆ ಕಚ್ಚಾ ಡಾಂಬರನ್ನು ಸರಬರಾಜು ಮಾಡುವ ಪ್ರಮುಖ ಕೇಂದ್ರವಾಗಿದ್ದ ಕಾರವಾರ, ಈಗ ಸಂಪೂರ್ಣ ನಿಶ್ಚಲವಾಗಿದೆ.

ಗಗನಕ್ಕೇರಿದ ಡಾಂಬರು ದರ 

ಪೂರೈಕೆ ಕುಂಠಿತವಾಗಿರುವ ಹಿನ್ನೆಲೆಯಲ್ಲಿ ಬಿಟುಮಿನ್ ದರ ಗಗನಕ್ಕೇರಿದೆ. ಈ ಹಿಂದೆ ಪ್ರತಿ ಟನ್‌ಗೆ 40 ರಿಂದ 45 ಸಾವಿರ ರೂಪಾಯಿ ಇದ್ದ ದರವು ಈಗ 60 ರಿಂದ 65 ಸಾವಿರ ರೂಪಾಯಿಗೆ ಏರಿಕೆಯಾಗಿದೆ. ಕೇವಲ ಒಂದು ತಿಂಗಳ ಅವಧಿಯಲ್ಲಿ ಪ್ರತಿ ಟನ್‌ಗೆ ಸುಮಾರು 20 ಸಾವಿರ ರೂಪಾಯಿ ಹೆಚ್ಚಳವಾಗಿದೆ. ಗುತ್ತಿಗೆದಾರರು ಈ ಹೆಚ್ಚುವರಿ ಹಣ ನೀಡಲು ಸಿದ್ಧರಿದ್ದರೂ ಡಾಂಬರು ಸಿಗುತ್ತಿಲ್ಲ. ಲಭ್ಯವಿರುವ ಸೀಮಿತ ಸ್ಟಾಕ್ ಅನ್ನು ಅತ್ಯಂತ ನಿರ್ಣಾಯಕ ಯೋಜನೆಗಳಿಗೆ ಮಾತ್ರ ಬಳಸಲಾಗುತ್ತಿದೆ.

ಸ್ತಬ್ಧಗೊಂಡ ರಸ್ತೆ ಕಾಮಗಾರಿಗಳು

ಸಾಮಾನ್ಯವಾಗಿ ಡಿಸೆಂಬರ್‌ನಿಂದ ಏಪ್ರಿಲ್ ತಿಂಗಳವರೆಗೆ ಮಳೆಯ ಅಬ್ಬರ ಕಡಿಮೆ ಇರುವುದರಿಂದ ದೊಡ್ಡ ಮಟ್ಟದ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತದೆ. ಆದರೆ ಈಗ ಡಾಂಬರು ಅಭಾವದಿಂದಾಗಿ ಗುತ್ತಿಗೆ ಕಂಪನಿಗಳು ಕೆಲಸ ಮಾಡಲಾಗದೆ ಕೈಚೆಲ್ಲಿ ಕುಳಿತಿವೆ. ರಾಜ್ಯದಾದ್ಯಂತ ಸಾವಿರಾರು ಕೋಟಿ ರೂಪಾಯಿ ಮೌಲ್ಯದ ರಸ್ತೆ ಕಾಮಗಾರಿಗಳು ಅರ್ಧಕ್ಕೆ ನಿಂತಿವೆ. ಗ್ರಾಮೀಣ ರಸ್ತೆಗಳು, ರಾಷ್ಟ್ರೀಯ ಹೆದ್ದಾರಿಗಳು ಮತ್ತು ನಗರದ ಒಳರಸ್ತೆಗಳ ಅಭಿವೃದ್ಧಿ ಕಾರ್ಯಗಳು ಸ್ಥಗಿತಗೊಂಡಿವೆ.

ಇನ್ನೊಂದೆಡೆ ಎಲ್‌ಪಿಜಿ ಮತ್ತು ಗ್ಯಾಸ್ ಸಂಕಷ್ಟ

ಎಲ್‌ಪಿಜಿ ಸಿಗದೆ ಹೋಟೆಲ್ ಉದ್ಯಮಿಗಳು ಸೌದೆ ಒಲೆ ಮತ್ತು ಇಂಡಕ್ಷನ್ ಮೊರೆ ಹೋಗುತ್ತಿದ್ದರೆ, ಆಟೋ ಗ್ಯಾಸ್ ಸಿಗದೆ ಆಟೋ ಚಾಲಕರೂ ಕಂಗಾಲಾಗಿದ್ದಾರೆ. ದೇಶೀಯ ಬಳಕೆದಾರರಿಗೆ ಸಿಲಿಂಡರ್‌ಗಳ ಪೂರೈಕೆಯಲ್ಲೂ ವಿಳಂಬವಾಗುತ್ತಿದೆ. ಇದೀಗ ಕಚ್ಚಾ ಡಾಂಬರು ಬಾರದೆ ರಸ್ತೆ ಕಾಮಗಾರಿಗಳು ಸ್ಥಗಿತಗೊಳ್ಳುತ್ತಿರುವುದು ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ. 

Exit mobile version