ಬೆಂಗಳೂರು: ಕನ್ನಡ ಟೆಲಿವಿಷನ್‌ನ ಅತ್ಯಂತ ಜನಪ್ರಿಯ ರಿಯಾಲಿಟಿ ಶೋಗಳಲ್ಲಿ ಒಂದಾದ ‘ಬಿಗ್ ಬಾಸ್ ಕನ್ನಡ ಸೀಸನ್ 12’ ತನ್ನ ಆರಂಭದ ಹಾದಿಯಲ್ಲಿ ಅಡೆತಡೆ ಎದುರಿಸಿದೆ. ಶೋ ನಡೆಯುತ್ತಿದ್ದ ಜಾಲಿವುಡ್ ಸ್ಟುಡಿಯೋಗೆ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಬೀಗ ಬಿದ್ದಿದ್ದು, ಈ ವಿಷಯವು ರಾಜಕೀಯ ಚರ್ಚೆಗೆ ಕಾರಣವಾಗಿದೆ. ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಹಳೆಯ ಹೇಳಿಕೆಯೊಂದು ಈಗ ಮತ್ತೆ ಚರ್ಚೆಗೆ ಗ್ರಾಸವಾಗಿದ್ದು, ಜೆಡಿಎಸ್ ಪಕ್ಷವು ಈ ಬಗ್ಗೆ ಆರೋಪಗಳನ್ನು ಮಾಡಿದೆ. ಈ ಎಲ್ಲ ಬೆಳವಣಿಗೆಗಳಿಗೆ ಡಿಕೆ ಶಿವಕುಮಾರ್ ಸ್ಪಷ್ಟ ಉತ್ತರ ನೀಡಿದ್ದಾರೆ.
ಈ ಬಗ್ಗೆ ಡಿಕೆ ಶಿವಕುಮಾರ್ ಮಾತನಾಡುತ್ತಾ ಕುಮಾರಸ್ವಾಮಿ ಮತ್ತು ಜೆಡಿಎಸ್‌ನವರು ಕೇವಲ ರಾಜಕೀಯ ಮಾಡುತ್ತಿದ್ದಾರೆ. ಅವರು ಟ್ವೀಟ್ ಮಾಡಲಿ, ಯಾರೇ ಟ್ವೀಟ್ ಮಾಡಲಿ, ನಾನು ಇದಕ್ಕೆ ತಲೆಕೆಡಿಸಿಕೊಳ್ಳುವುದಿಲ್ಲ. ಈ ಬಗ್ಗೆ ನಾನು ವಿಚಾರಿಸಿದ್ದೇನೆ. ಮಾಲಿನ್ಯ ನಿಯಂತ್ರಣ ಮಂಡಳಿಯವರು ಈ ಕ್ರಮ ಕೈಗೊಂಡಿದ್ದಾರೆ. ಆದರೂ, ನಾನು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಉದ್ಯೋಗಾವಕಾಶಗಳು ತುಂಬಾ ಮುಖ್ಯವಾಗಿವೆ. ಸಮಸ್ಯೆಯನ್ನು ಸರಿಪಡಿಸಿಕೊಳ್ಳಲು ಒಂದು ಅವಕಾಶ ನೀಡಬೇಕೆಂದು ಸೂಚಿಸಿದ್ದೇನೆ ಎಂದು ಹೇಳಿದ್ದಾರೆ.
ನಮ್ಮ ರಾಜ್ಯದಲ್ಲಿ ಮನರಂಜನೆ ಇರಬೇಕು. ‘ಬಿಗ್ ಬಾಸ್’ ಶೋನ ಉದ್ಘಾಟನೆಯನ್ನು ನಾನೇ ಮಾಡಿದ್ದೇನೆ. ನನ್ನ ಬಗ್ಗೆ ಮಾತನಾಡದಿದ್ದರೆ ಜೆಡಿಎಸ್‌ಗೆ ನೆಮ್ಮದಿಯಿಲ್ಲ, ನಿದ್ರೆಯೂ ಬರುವುದಿಲ್ಲ. ಅವರಿಗೆ ಯಾವುದಕ್ಕೂ ಶಕ್ತಿ ಇಲ್ಲ. ನಮ್ಮ ಸರ್ಕಾರದ ಅಧಿಕಾರಿಗಳು ತಮ್ಮ ಕರ್ತವ್ಯವನ್ನು ನಿರ್ವಹಿಸಿದ್ದಾರೆ ಎಂಬುದು ನನಗೆ ಗೊತ್ತಿರಲಿಲ್ಲ. ಆದರೆ, ತಪ್ಪಾಗಿದ್ದರೆ ಅದನ್ನು ಸರಿಪಡಿಸಿಕೊಳ್ಳಲು ಅವಕಾಶ ನೀಡಬೇಕೆಂದು ಜಿಲ್ಲಾಧಿಕಾರಿ ಮತ್ತು ಎಸ್‌ಪಿಗೆ ಫೋನ್ ಮಾಡಿ ಸೂಚಿಸಿದ್ದೇನೆ ಎಂದಿದ್ದಾರೆ.
ಜಾಲಿವುಡ್ ಸ್ಟುಡಿಯೋದಲ್ಲಿ ‘ಬಿಗ್ ಬಾಸ್ ಕನ್ನಡ ಸೀಸನ್ 12’ ಚಿತ್ರೀಕರಣ ನಡೆಯುತ್ತಿದ್ದ ಸಂದರ್ಭದಲ್ಲಿ, ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಉಲ್ಲಂಘನೆಯ ಆರೋಪದ ಮೇಲೆ ಸ್ಟುಡಿಯೋಗೆ ಬೀಗ ಹಾಕಲಾಗಿದೆ. ಈ ಕ್ರಮವು ಶೋನ ಚಿತ್ರೀಕರಣಕ್ಕೆ ತಾತ್ಕಾಲಿಕ ತಡೆಯೊಡ್ಡಿದೆ. ಡಿಕೆ ಶಿವಕುಮಾರ್ ಅವರು ಈ ಬಗ್ಗೆ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷರೊಂದಿಗೆ ಮಾತನಾಡಿದ್ದಾರೆ. “ಬಿಗ್ ಬಾಸ್‌ನಂತಹ ಮನರಂಜನಾ ಕಾರ್ಯಕ್ರಮಗಳು ಇರಬೇಕು. ಖಾಸಗಿ ವಲಯದವರು ಇದಕ್ಕಾಗಿ ದೊಡ್ಡ ಮೊತ್ತದ ಬಂಡವಾಳವನ್ನು ಹೂಡಿಕೆ ಮಾಡಿದ್ದಾರೆ. ತಪ್ಪು ಆಗಿರಬಹುದು, ಆದರೆ ಅದನ್ನು ಸರಿಪಡಿಸಿಕೊಳ್ಳಲು ಅವಕಾಶ ನೀಡಬೇಕು ಎಂದು ಅವರು ಸಲಹೆ ನೀಡಿದ್ದಾರೆ.
ಸಮಸ್ಯೆಯನ್ನು ಸರಿಪಡಿಸಿಕೊಳ್ಳಲು ಜಾಲಿವುಡ್ ಸ್ಟುಡಿಯೋದವರು ಜಿಲ್ಲಾಧಿಕಾರಿಗಳ ಬಳಿ ಸಮಯಾವಕಾಶ ಕೋರಿದ್ದಾರೆ. ಈ ಮನವಿಯನ್ನು ಜಿಲ್ಲಾಡಳಿತವು ಮಾಲಿನ್ಯ ನಿಯಂತ್ರಣ ಮಂಡಳಿಗೆ ಕಳುಹಿಸಿದೆ. ಒಂದು ವೇಳೆ ಅನುಮತಿ ಸಿಕ್ಕರೆ, ‘ಬಿಗ್ ಬಾಸ್ ಕನ್ನಡ ಸೀಸನ್ 12 ಶೀಘ್ರವೇ ಚಿತ್ರೀಕರಣವನ್ನು ಮುಂದುವರೆಸಲಿದೆ. ಆದರೆ, ಅನುಮತಿ ತಡವಾದರೆ, ಶೋನ ಪ್ರಾರಂಭವು ಮತ್ತಷ್ಟು ದಿನಗಳ ಕಾಲ ಮುಂದೂಡಿಕೆಯಾಗುವ ಸಾಧ್ಯತೆಯಿದೆ. ಸದ್ಯಕ್ಕೆ, ಶೋನ ಸ್ಪರ್ಧಿಗಳನ್ನು ರೆಸಾರ್ಟ್‌ನಲ್ಲಿ ಇರಿಸಲಾಗಿದೆ.
ಈ ಘಟನೆಯನ್ನು ಜೆಡಿಎಸ್ ಪಕ್ಷವು ರಾಜಕೀಯವಾಗಿ ಬಳಸಿಕೊಳ್ಳಲು ಯತ್ನಿಸಿದೆ. ಡಿಕೆ ಶಿವಕುಮಾರ್ ಅವರ ಹಿಂದಿನ ಹೇಳಿಕೆಯಾದ “ಕನ್ನಡ ಚಿತ್ರರಂಗದ ನಟ್ಟು ಬೋಲ್ಟು ಟೈಟ್ ಮಾಡುತ್ತೇನೆ” ಎಂಬುದನ್ನು ಉಲ್ಲೇಖಿಸಿ, ಜೆಡಿಎಸ್ ಈ ಕ್ರಮವನ್ನು ಶಿವಕುಮಾರ್‌ರಿಂದ ಪ್ರೇರಿತ ಎಂದು ಆರೋಪಿಸಿದೆ. ಆದರೆ, ಶಿವಕುಮಾರ್ ಈ ಆರೋಪಗಳನ್ನು ತಿರಸ್ಕರಿಸಿದ್ದು, ಇದು ಕೇವಲ ರಾಜಕೀಯ ದುರುದ್ದೇಶದಿಂದ ಮಾಡಲಾದ ಆರೋಪ ಎಂದಿದ್ದಾರೆ.