ಬೀದರ್: ರಥದ ಗಾಲಿಗೆ ಸಿಲುಕಿ ಎರಡು ಕಾಲು ಕಳೆದುಕೊಂಡು ವ್ಯಕ್ತಿಯೊರ್ವ ಚಿಕಿತ್ಸೆ ಫಲಕಾರಿಯಾಗದೆ ಕಲಬುರ್ಗಿಯ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಈ ಘಟನೆ ಬೀದರ್‌ನ ಬಸವಕಲ್ಯಾಣ ನಗರದ ಥೇರ್ ಮೈದಾನದಲ್ಲಿ ಇಂದು ಬೆಳಿಗ್ಗೆ 6:30 ಗಂಟೆಗೆ ಬಸವೇಶ್ವರ ಜಾತ್ರಾ ರಥೋತ್ಸವದ ವೇಳೆ ಸಂಭವಿಸಿದೆ. ಬಸವ ಭಕ್ತ ಧನರಾಜ್ ಚಾಕುರೆ (45) ಎಂಬುವವರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ ದುರ್ದೈವಿ.
ರಥೋತ್ಸವದಲ್ಲಿ ನೂಕುನುಗ್ಗಲು
ಬಸವಕಲ್ಯಾಣದ ಥೇರ್ ಮೈದಾನದಲ್ಲಿ ಆಯೋಜಿಸಲಾಗಿದ್ದ ಬಸವೇಶ್ವರ ಜಾತ್ರಾ ರಥೋತ್ಸವಕ್ಕೆ ಸಾವಿರಾರು ಭಕ್ತರು ಸೇರಿದ್ದರು. ರಥವನ್ನು ಎಳೆಯುವ ಸಂದರ್ಭದಲ್ಲಿ ಅತಿಯಾದ ನೂಕು ನುಗ್ಗಲು ಉಂಟಾಯಿತು. ಈ ವೇಳೆ ಭಕ್ತಾದಿಗಳ ನಿಯಂತ್ರಣ ತಪ್ಪಿ ರಥವು ಒಂದು ಬದಿಗೆ ವಾಲಿತು. ರಥದ ಚಕ್ರವು ಅಲ್ಲಿ ನಿಂತಿದ್ದ ಧನರಾಜ್ ಅವರ ಎರಡೂ ಕಾಲುಗಳ ಮೇಲೆ ಹರಿದುಹೋಯಿತು.
ತಕ್ಷಣದ ಚಿಕಿತ್ಸೆ ವ್ಯರ್ಥ
ಘಟನಾ ಸ್ಥಳದಲ್ಲೇ ಧನರಾಜ್ ಪ್ರಜ್ಞೆ ಕಳೆದುಕೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಸ್ಥಳೀಯರು ತಕ್ಷಣ ಅವರನ್ನು ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದರು. ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿದ ವೈದ್ಯರು, ಅವರ ಸ್ಥಿತಿ ಗಂಭೀರವಾಗಿರುವುದರಿಂದ ಕಲಬುರ್ಗಿಯ ದೊಡ್ಡ ಆಸ್ಪತ್ರೆಗೆ ಕಳುಹಿಸಬೇಕು ಎಂದು ಸಲಹೆ ನೀಡಿದರು. ನಂತರ ಕಲಬುರ್ಗಿಯ ಖಾಸಗಿ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ (ICU) ಚಿಕಿತ್ಸೆ ನೀಡಲಾಯಿತು. ಮರುದಿನ (ಏಪ್ರಿಲ್ 24) ಅವರು ಕೊನೆಯುಸಿರೆಳೆದಿದ್ದಾರೆ..
ಕುಟುಂಬದಲ್ಲಿ ಶೋಕದ ಅಲೆ
ಧನರಾಜ್ ಚಾಕುರೆ ಅವರು ಬಸವಕಲ್ಯಾಣದ ಸ್ಥಳೀಯರಾಗಿದ್ದು, ಅವರಿಗೆ ಪತ್ನಿ, ಇಬ್ಬರು ಮಕ್ಕಳು ಮತ್ತು ವೃದ್ಧ ತಂದೆ ತಾಯಿಯಿದ್ದಾರೆ.
ಎಸ್ಎಸ್ಎಲ್‌ಸಿ ಪಾಸ್ ಆದ ಖುಷಿಯಲ್ಲಿ ಈಜಲು ಹೋಗಿದ್ದ ವಿದ್ಯಾರ್ಥಿ ಸಾ*ವು
ಕೋಲಾರ : ಎಸ್ಎಸ್ಎಲ್ಸಿ ಫಲಿತಾಂಶ ಪ್ರಕಟವಾಗಿ ರಾಜ್ಯದಲ್ಲಿ ಶೇ. 94 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾದ ಸಂಭ್ರಮದ ವೇಳೆ, ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಸೋಣ್ಣವಾಡಿ ಗ್ರಾಮದಲ್ಲಿ ದುರಂತ ಘಟನೆಯೊಂದು ನಡೆದಿದೆ. ತನ್ನ ಸ್ನೇಹಿತರೊಂದಿಗೆ ಬಾವಿಯಲ್ಲಿ ಈಜಲು ಹೋಗಿದ್ದ 15 ವರ್ಷದ ಬಾಲಕನೋರ್ವ ನೀರಿನಲ್ಲಿ ಮುಳುಗಿ ಮೃತಪಟ್ಟ ದುರ್ಘಟನೆ ಸಂಭವಿಸಿದೆ.
ಮೃತ ವಿದ್ಯಾರ್ಥಿಯನ್ನು ಕಿರಣ್ (15) ಎಂದು ಗುರುತಿಸಲಾಗಿದೆ. ಇಂದು ಪ್ರಕಟವಾದ ಎಸ್ಎಸ್ಎಲ್ಸಿ ಫಲಿತಾಂಶದಲ್ಲಿ ಕಿರಣ್ ಉತ್ತೀರ್ಣನಾಗಿದ್ದನು. ಈ ಸಂತಸದ ಸಂದರ್ಭದಲ್ಲಿ ಅವನು ತನ್ನ ಗೆಳೆಯರೊಂದಿಗೆ ಸೋಣ್ಣವಾಡಿ ಗ್ರಾಮದ ಹೊರವಲಯದಲ್ಲಿರುವ ಹಳೆಯ ಬಾವಿಯ ಬಳಿ ಈಜಲು ತೆರಳಿದ್ದನು. ಆದರೆ, ಆಳವಾದ ಬಾವಿಯ ನೀರಿನಲ್ಲಿ ಇಳಿದ ಕಿರಣ್ ತನ್ನ ಹತೋಟಿ ಕಳೆದುಕೊಂಡು ನೀರಿನಲ್ಲಿ ಮುಳುಗಿದ್ದಾನೆ. ಸ್ನೇಹಿತರು ಗಾಬರಿಗೊಂಡು ಕೂಗಾಡಿದರೂ, ಕಿರಣ್ ಅನ್ನು ಉಳಿಸಲು ಸಾಧ್ಯವಾಗಲಿಲ್ಲ.
ಸ್ಥಳೀಯರು ತಕ್ಷಣ ಮಾಹಿತಿ ನೀಡಿದ ಮೇರೆಗೆ ಅಗ್ನಿಶಾಮಕ ದಳದ ಸಿಬ್ಬಂದಿ ಘಟನಾ ಸ್ಥಳಕ್ಕೆ ಧಾವಿಸಿದರು. ಶೋಧ ಕಾರ್ಯಾಚರಣೆ ನಡೆಸಿದ ಅವರು, ಅಂತಿಮವಾಗಿ ಕಿರಣ್‌ನ ಮೃತದೇಹವನ್ನು ಬಾವಿಯಿಂದ ಹೊರತೆಗೆದರು. ಮೃತದೇಹವನ್ನು ಪೋಸ್ಟ್ಮಾರ್ಟಮ್ ಗಾಗಿ ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾಯಿತು.
