ಬೆಂಗಳೂರು: ಬಿಡದಿ ಟೌನ್‌ಶಿಪ್ ಯೋಜನೆಯ ವಿಚಾರವಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ನಡುವೆ ರಾಜಕೀಯ ಸಂಘರ್ಷ ಹೊಸ ತಿರುವು ಪಡೆದುಕೊಂಡಿದೆ.. ಈ ಮಹತ್ವಾಕಾಂಕ್ಷಿ ಯೋಜನೆಗೆ ಸಂಬಂಧಿಸಿದಂತೆ ಮುಕ್ತ ಚರ್ಚೆ ನಡೆಸಲು ಜೂನ್ 26 ರಂದು ವಿಧಾನಸೌಧಕ್ಕೆ ಬರುವಂತೆ ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ಮುಖ್ಯಮಂತ್ರಿಗಳು ಅಧಿಕೃತ ಆಹ್ವಾನ ಪತ್ರ ಬರೆದಿದ್ದಾರೆ.
ಸಿಎಂ ಪತ್ರದಲ್ಲಿ ಏನಿದೆ?
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ಬರೆದಿರುವ ಅಧಿಕೃತ ಪತ್ರದಲ್ಲಿ, “ಶ್ರೀ ಕುಮಾರಸ್ವಾಮಿ ರವರೇ, ತಾವು ಪ್ರಾರಂಭಿಸಿದ ಬಿಡದಿ ಟೌನ್ಶಿಪ್ ಯೋಜನೆಗೆ ಸಂಬಂಧಿಸಿದಂತೆ, ತಮ್ಮ ಜೊತೆ ನಾನು ಚರ್ಚಿಸಲು ಉತ್ಸುಕನಾಗಿದ್ದು. ದಿನಾಂಕ 26.06.2026ರಂದು ಬೆಳಗ್ಗೆ 11.00 ಗಂಟೆಗೆ ವಿಧಾನಸೌಧಕ್ಕೆ, ತಾವು ಮತ್ತು ತಮ್ಮ ತಂಡದ ಐದು ಪ್ರತಿನಿಧಿಗಳೊಂದಿಗೆ ನನ್ನ ಕಚೇರಿಗೆ ಆಗಮಿಸುವಂತೆ ತಮ್ಮನ್ನು ಕೋರುತ್ತೇನೆ” ಎಂದು ಉಲ್ಲೇಖಿಸಿದ್ದಾರೆ.
ಎಚ್‌ಡಿಕೆ ಸವಾಲಿಗೆ ಡಿಕೆಶಿ ಉತ್ತರ
ಬಿಡದಿ ಟೌನ್ಶಿಪ್ ವಿಚಾರವಾಗಿ ಕುಮಾರಸ್ವಾಮಿ ಇತ್ತೀಚೆಗೆ ಬಹಿರಂಗವಾಗಿಯೇ ಪಂಥಾಹ್ವಾನ ನೀಡಿದ್ದರು. “ಟೌನ್ಶಿಪ್ ವಿಚಾರವಾಗಿ ನೇರವಾಗಿ ಚರ್ಚೆ ಮಾಡೋಣ. ಬಿಡದಿಯ ಬೈರ ಮಂಗಲಕ್ಕೆ ಹೋಗೋಣ, ಜಮೀನು ಕೊಡಲು ರೈತರು ಒಪ್ಪಿದ್ದಾರಾ ಎಂದು ಕೇಳೋಣ” ಎಂದು ಅವರು ಡಿಕೆ ಶಿವಕುಮಾರ್ ಅವರಿಗೆ ಸವಾಲು ಹಾಕಿದ್ದರು. ಈ ಸವಾಲನ್ನು ಸ್ವೀಕರಿಸಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, “ಚರ್ಚೆ ಮಾಡೋಣ, ವಿಧಾನಸೌಧಕ್ಕೆ ಬನ್ನಿ” ಎಂದು ಕೇಂದ್ರ ಸಚಿವರಿಗೆ ಪತ್ರದ ಮೂಲಕ ಆಹ್ವಾನಿಸಿದ್ದಾರೆ.
ಹೈವೋಲ್ಟೇಜ್ ಮೀಟಿಂಗ್‌ಗೆ ಸಿದ್ಧತೆ
ಬಿಡದಿ ಟೌನ್ಶಿಪ್ ಯೋಜನೆಗೆ ಸಂಬಂಧಿಸಿದಂತೆ ಮುಕ್ತ ಚರ್ಚೆ ನಡೆಸಲು ಸಿಎಂ ಡಿಕೆ ಶಿವಕುಮಾರ್ ಅವರು ಕುಮಾರಸ್ವಾಮಿ ಅವರಿಗೆ ಅಧಿಕೃತ ಆಹ್ವಾನ ನೀಡಿರುವುದು ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಜೂನ್ 26 ರಂದು ಬೆಳಿಗ್ಗೆ 11 ಗಂಟೆಗೆ ವಿಧಾನಸೌಧದಲ್ಲಿ ಈ ಹೈವೋಲ್ಟೇಜ್ ಸಭೆ ನಡೆಯಲಿದೆ.
ಬಿಡದಿ ಟೌನ್ಶಿಪ್ ವಿವಾದವೇನು?
ಬಿಡದಿ ಟೌನ್ಶಿಪ್ ಯೋಜನೆಯು ಬೆಂಗಳೂರಿನ ಹೊರವಲಯದ ಬಿಡದಿ ಪ್ರದೇಶದಲ್ಲಿ ಅಭಿವೃದ್ಧಿಪಡಿಸಲು ಉದ್ದೇಶಿಸಲಾದ ಮಹತ್ವಾಕಾಂಕ್ಷಿ ಯೋಜನೆಯಾಗಿದೆ. ಈ ಯೋಜನೆಯು ಹೆಚ್.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಪ್ರಾರಂಭವಾಗಿತ್ತು. ಈಗ ಸಿಎಂ ಡಿಕೆ ಶಿವಕುಮಾರ್ ಅವರು ಯೋಜನೆಯನ್ನು ಮುಂದುವರೆಸುವ ಬಗ್ಗೆ ಆಸಕ್ತಿ ತೋರಿದ್ದಾರೆ. ಆದರೆ ಯೋಜನೆಯ ಜಮೀನು ಸ್ವಾಧೀನ, ರೈತರ ಸಮಸ್ಯೆಗಳು ಮತ್ತು ಅನುಷ್ಠಾನದ ವಿಧಾನದ ಬಗ್ಗೆ ಭಿನ್ನಾಭಿಪ್ರಾಯಗಳಿವೆ.
ಈ ಸಭೆಯು ಯೋಜನೆಯ ಭವಿಷ್ಯದ ದಿಕ್ಕನ್ನು ನಿರ್ಧರಿಸುವ ಸಾಧ್ಯತೆಯಿದೆ. ರೈತರ ಹಿತಾಸಕ್ತಿ, ಯೋಜನೆಯ ಪಾರದರ್ಶಕತೆ ಮತ್ತು ಅಭಿವೃದ್ಧಿಯ ಬಗ್ಗೆ ಚರ್ಚೆಯಾಗುವ ನಿರೀಕ್ಷೆಯಿದೆ.
