ಬೆಂಗಳೂರು, ಸೆಪ್ಟೆಂಬರ್ 28: ಡಿಜಿಟಲ್ ಯುಗದಲ್ಲಿ ಸೈಬರ್ ವಂಚನೆಯ ಜಾಲವು ದಿನೇ ದಿನೇ ಜನರ ಜೀವನವನ್ನು ಕಾಡುತ್ತಿದೆ. ಶ್ರೀಮಂತರು, ಸೆಲೆಬ್ರಿಟಿಗಳಿಂದ ಹಿಡಿದು ಈಗ ಸಾಮಾನ್ಯ ಜನರವರೆಗೂ ಈ ವಂಚಕರು ತಮ್ಮ ಗುರಿಯನ್ನು ವಿಸ್ತರಿಸಿದ್ದಾರೆ. ಇದೀಗ ಬೆಂಗಳೂರಿನ ಐಐಎಸ್‌ಸಿಯ ನ್ಯೂ ಹೌಸಿಂಗ್ ಕಾಲೋನಿಯ ನಿವಾಸಿಯಾದ ಮಹಿಳಾ ವಿಜ್ಞಾನಿ ಡಾ. ಸಂಧ್ಯಾ ಅವರು ಸೈಬರ್ ವಂಚಕರ ಡಿಜಿಟಲ್ ಅರೆಸ್ಟ್‌ಗೆ ಒಳಗಾಗಿ 8.8 ಲಕ್ಷ ರೂಪಾಯಿಗಳನ್ನು ಕಳೆದುಕೊಂಡ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.
ಘಟನೆಯ ವಿವರ
ಸೆಪ್ಟೆಂಬರ್ 16, ರಂದು ಡಾ. ಸಂಧ್ಯಾ ಅವರಿಗೆ ಅಪರಿಚಿತ ವ್ಯಕ್ತಿಯೊಬ್ಬ ಕರೆ ಮಾಡಿ, “ನಿಮ್ಮ ಮೊಬೈಲ್ ನಂಬರ್ ಬೇರೆ ಕಡೆಗಳಲ್ಲಿ ದುರ್ಬಳಕೆಯಾಗುತ್ತಿದೆ” ಎಂದು ತಿಳಿಸಿದ್ದಾನೆ. ಕೆಲವೇ ಕ್ಷಣಗಳಲ್ಲಿ ಮತ್ತೊಂದು ಸಂದೇಶ ಬಂದಿದ್ದು, ಸಂಧ್ಯಾ ಅವರ ಹೆಸರಿನಲ್ಲಿ 17 ಪ್ರಕರಣಗಳು ದಾಖಲಾಗಿವೆ ಎಂದು ಆತಂಕಕಾರಿ ಮಾಹಿತಿಯನ್ನು ನೀಡಿದೆ. ಇದಾದ ಬಳಿಕ, “ಪೊಲೀಸ್ ಅಧಿಕಾರಿಯೊಬ್ಬರು ನಿಮ್ಮೊಂದಿಗೆ ಮಾತನಾಡುತ್ತಾರೆ” ಎಂದು ಮತ್ತೊಂದು ಕರೆ ಬಂದಿದೆ. ಈ ಕರೆಯಲ್ಲಿ ಸಿಬಿಐ ಅಧಿಕಾರಿಗಳ ಸೋಗಿನಲ್ಲಿ ವಂಚಕರು, “ನೀವು ಮಾನವ ಕಳ್ಳ ಸಾಗಣೆ ಪ್ರಕರಣದಲ್ಲಿ ಭಾಗಿಯಾಗಿದ್ದೀರಿ. ಸುಪ್ರೀಂ ಕೋರ್ಟ್ ದಾಖಲೆಗಳನ್ನು ತೋರಿಸಿ, ಇಲ್ಲದಿದ್ದರೆ ನಿಮ್ಮನ್ನು ಡಿಜಿಟಲ್ ಅರೆಸ್ಟ್ ಮಾಡಲಾಗುವುದು” ಎಂದು ಬೆದರಿಕೆ ಹಾಕಿದ್ದಾರೆ.
ಗಾಬರಿಗೊಂಡ ಡಾ. ಸಂಧ್ಯಾ, ತಾವು ಯಾವುದೇ ಅಕ್ರಮ ಕೃತ್ಯದಲ್ಲಿ ತೊಡಗಿಲ್ಲ ಎಂದು ಸ್ಪಷ್ಟಪಡಿಸಿದರೂ, ವಂಚಕರು ತಮ್ಮ ಬೆದರಿಕೆಯನ್ನು ಮುಂದುವರೆಸಿದ್ದಾರೆ. “ಪ್ರಕರಣದಿಂದ ಪಾರಾಗಲು ನಾವು ಸೂಚಿಸಿದ ಬ್ಯಾಂಕ್ ಖಾತೆಗೆ ಹಣ ವರ್ಗಾಯಿಸಿ” ಎಂದು ಒತ್ತಾಯಿಸಿದ್ದಾರೆ. ಭಯಗೊಂಡ ಸಂಧ್ಯಾ, ವಂಚಕರ ಸೂಚನೆಯಂತೆ 8.8 ಲಕ್ಷ ರೂಪಾಯಿಗಳನ್ನು ಆನ್‌ಲೈನ್‌ನಲ್ಲಿ ವರ್ಗಾಯಿಸಿದ್ದಾರೆ. ಆದರೆ, ಇದೊಂದು ಸೈಬರ್ ವಂಚನೆ ಎಂದು ತಿಳಿದು, ಸಂಧ್ಯಾ ಅವರು ಕೇಂದ್ರ ವಿಭಾಗದ CEN ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ. ಪೊಲೀಸರು ತನಿಖೆಯನ್ನು ಆರಂಭಿಸಿದ್ದಾರೆ.
ಪೊಲೀಸರು ಈ ಪ್ರಕರಣದಲ್ಲಿ ತನಿಖೆಯನ್ನು ತೀವ್ರಗೊಳಿಸಿದ್ದಾರೆ. ವಂಚಕರ ಬ್ಯಾಂಕ್ ಖಾತೆಯ ವಿವರಗಳನ್ನು ಪತ್ತೆಹಚ್ಚಲು ಪ್ರಯತ್ನಿಸಲಾಗುತ್ತಿದೆ.