ಹಾಡಹಗಲೇ ಕೊಡಲಿಯಿಂದ ಕೊಚ್ಚಿ ಮಹಿಳೆಯ ಬರ್ಬರ ಹತ್ಯೆ

Untitled design 2026 01 12T163546.397

ಬೆಂಗಳೂರು: ಬೆಂಗಳೂರಿನಲ್ಲಿ ಹಾಡಹಗಲೇ ನಡೆದ ಭೀಕರ ಕೊಲೆಯೊಂದು ಜನರಲ್ಲಿ ಭಾರೀ ಆತಂಕ ಮೂಡಿಸಿದೆ. ಬೆಂಗಳೂರಿನ ಕುದುರಗೆರೆ ಗ್ರಾಮದಲ್ಲಿ 55 ವರ್ಷದ ಮಹಿಳೆಯನ್ನು ಕೊಡಲಿಯಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

ಮೃತ ಮಹಿಳೆಯನ್ನು ದಾಕ್ಷಾಯಿಣಿ (55) ಎಂದು ಗುರುತಿಸಲಾಗಿದೆ. ದಾಕ್ಷಾಯಿಣಿ ಅವರು ಕುದುರಗೆರೆ ಗ್ರಾಮದ ನಿವಾಸಿಯಾಗಿದ್ದು, ಸೋಮವಾರ ಮಧ್ಯಾಹ್ನ ತಮ್ಮ ಮೊಮ್ಮಗನಿಗೆ ಶಾಲೆಯಲ್ಲಿ ಊಟ ಕೊಟ್ಟು ಮನೆಗೆ ಹಿಂತಿರುಗುತ್ತಿದ್ದಾಗ, ದುಷ್ಕರ್ಮಿಗಳು ಬೈಕ್‌ನಲ್ಲಿ ಬಂದು ಏಕಾಏಕಿ ದಾಳಿ ನಡೆಸಿದ್ದಾರೆ ಎನ್ನಲಾಗಿದೆ.

ಕೈಯಲ್ಲಿ ಕೊಡಲಿ ಹಿಡಿದು ಬಂದ ದುಷ್ಕರ್ಮಿಗಳು, ದಾಕ್ಷಾಯಿಣಿಯ ಕತ್ತಿಗೆ ಹಾಗೂ ದೇಹದ ವಿವಿಧ ಭಾಗಗಳಿಗೆ ಹೊಡೆದು ಕೊಲೆ ಮಾಡಿ ಪರಾರಿಯಾಗಿದ್ದಾರೆ.

ಈ ಕೊಲೆಯ ಹಿಂದೆ ಸಂಬಂಧಿಯವರ ಕೈವಾಡವಿದೆ ಎಂಬ ಶಂಕೆ ವ್ಯಕ್ತವಾಗಿದೆ. ಮೃತ ದಾಕ್ಷಾಯಿಣಿಯ ಮಾವ ವೀರಭದ್ರ ಎಂಬುವರೊಂದಿಗೆ ಅನೈತಿಕ ಸಂಬಂಧ ಹಾಗೂ ಭೂ ವಿವಾದ ಇತ್ತು ಎನ್ನಲಾಗಿದೆ. ಈ ಹಳೆಯ ವೈಷಮ್ಯವೇ ಕೊಲೆಗೆ ಕಾರಣವಾಗಿರಬಹುದು ಎಂದು ಮೃತ ಮಹಿಳೆಯ ಮಕ್ಕಳು ಆರೋಪಿಸಿದ್ದಾರೆ.

ಘಟನೆಯ ಸುದ್ದಿ ತಿಳಿದ ಕೂಡಲೇ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ವಾಯುವ್ಯ ವಿಭಾಗದ ಡಿಸಿಪಿ ಡಿ.ಎಲ್. ನಾಗೇಶ್ ಅವರು ಫೋರೆನ್ಸಿಕ್ ತಂಡದೊಂದಿಗೆ ಸ್ಥಳಕ್ಕೆ ಭೇಟಿ ನೀಡಿ, ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿದ್ದಾರೆ.

ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ. ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಕೊಲೆ ಪ್ರಕರಣ ದಾಖಲಾಗಿದೆ.

Exit mobile version