ಬೆಂಗಳೂರು; (ಸೆ.25, 2025) ಬೆಂಗಳೂರಿನ ರಸ್ತೆಗಳು ಗುಂಡಿಗಳಿಂದ ಕೂಡಿದ್ದು, ವಾಹನ ಸಂಚಾರ ದಟ್ಟಣೆಯಿಂದಾಗಿ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ವರ್ತೂರು ಮತ್ತು ಇಬ್ಲೂರು ಜಂಕ್ಷನ್‌ಗಳಂತಹ ಪ್ರಮುಖ ಕೇಂದ್ರಗಳಲ್ಲಿ ಟ್ರಾಫಿಕ್ ಸಮಸ್ಯೆ ಹೆಚ್ಚಾಗಿದೆ.
ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸರ್ಕಾರ ಕ್ರಮ ಕೈಗೊಂಡಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ವಿಪ್ರೋ ಕ್ಯಾಂಪಸ್‌ನ ರಸ್ತೆಯನ್ನು ಸಾರ್ವಜನಿಕ ವಾಹನ ಸಂಚಾರಕ್ಕೆ ತೆರೆಯುವಂತೆ ವಿಪ್ರೋ ಚೇರ್ಮನ್ ಅಜೀಮ್ ಪ್ರೇಮ್‌ಜೀ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದರು. ಆದರೆ, ವಿಪ್ರೋ ಈ ಕೋರಿಕೆಯನ್ನು ನಯವಾಗಿ ತಿರಸ್ಕರಿಸಿದ್ದು ಸಿಎಂಗೆ ನಿರಾಸೆಯಾಗಿದೆ.
ಬೆಂಗಳೂರಿನ ಹೊರ ವರ್ತುಲ ರಸ್ತೆ (ORR) ಕಾರಿಡಾರ್‌ನಲ್ಲಿ ಟ್ರಾಫಿಕ್ ದಟ್ಟಣೆಯಿಂದಾಗಿ ವಾಹನ ಸವಾರರು ತೊಂದರೆ ಅನುಭವಿಸುತ್ತಿದ್ದಾರೆ. ರಸ್ತೆ ಗುಂಡಿಗಳಿಂದಾಗಿ ಸಂಚಾರ ವ್ಯವಸ್ಥೆ ಇನ್ನಷ್ಟು ಹದಗೆಟ್ಟಿದೆ. ಜನರ ಆಕ್ರೋಶ ಹೆಚ್ಚಾದಂತೆ, ಸರ್ಕಾರ ರಸ್ತೆ ಗುಂಡಿಗಳನ್ನು ಮುಚ್ಚಲು ಕಾರ್ಯಪ್ರವೃತ್ತವಾಗಿದೆ. ಇದರ ಜೊತೆಗೆ ಟ್ರಾಫಿಕ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಿಎಂ ಸಿದ್ದರಾಮಯ್ಯ ಅವರು ಕಾರ್ಪೊರೇಟ್ ಸಹಕಾರ ಕೋರಿದ್ದಾರೆ. ವಿಶೇಷವಾಗಿ ವಿಪ್ರೋ ಕ್ಯಾಂಪಸ್‌ನ ರಸ್ತೆಯನ್ನು ಸಾರ್ವಜನಿಕ ಬಳಕೆಗೆ ತೆರೆಯುವಂತೆ ಕೋರಿಕೆ ಸಲ್ಲಿಸಿದ್ದರು.
ವಿಪ್ರೋ ಚೇರ್ಮನ್ ಅಜೀಮ್ ಪ್ರೇಮ್‌ಜೀ ಅವರು ಸರ್ಕಾರದ ಮನವಿಯನ್ನು ನೇರವಾಗಿ ತಿರಸ್ಕರಿಸದೆ.ಈ ವಿಷಯದ ಬಗ್ಗೆ ಹೆಚ್ಚಿನ ಚರ್ಚೆಯ ಅಗತ್ಯವಿದೆ ಎಂದು ಪ್ರತಿಕ್ರಿಯಿಸಿದ್ದಾರೆ. ವಿಪ್ರೋ ಕ್ಯಾಂಪಸ್ ಒಂದು ವಿಶೇಷ ಆರ್ಥಿಕ ವಲಯ (SEZ) ಆಗಿದ್ದು, ಕಟ್ಟುನಿಟ್ಟಿನ ಭದ್ರತಾ ನಿಯಮಗಳನ್ನು ಹೊಂದಿದೆ. “ಕ್ಯಾಂಪಸ್ ರಸ್ತೆಯನ್ನು ಸಾರ್ವಜನಿಕ ಬಳಕೆಗೆ ತೆರೆಯುವುದು ಸದ್ಯಕ್ಕೆ ಸಾಧ್ಯವಿಲ್ಲ. ಇದು ಖಾಸಗಿ ಸ್ಥಳವಾಗಿದ್ದು, ಆರ್ಥಿಕ ಉದ್ದೇಶಗಳಿಗಾಗಿ ರಚಿತವಾಗಿದೆ,” ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಆದರೂ, ದೀರ್ಘಕಾಲೀನ ಪರಿಹಾರಕ್ಕಾಗಿ ಸರ್ಕಾರದ ಜೊತೆ ಸಹಕರಿಸಲು ವಿಪ್ರೋ ಒಲವು ತೋರಿದೆ.
ಅಜೀಮ್ ಪ್ರೇಮ್‌ಜೀ ಅವರು, ಟ್ರಾಫಿಕ್ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ವೈಜ್ಞಾನಿಕ ಅಧ್ಯಯನದ ಅಗತ್ಯವಿದೆ ಎಂದು ಸಲಹೆ ನೀಡಿದ್ದಾರೆ. ವಿಶ್ವ ದರ್ಜೆಯ ಸಾರಿಗೆ ನಿರ್ವಹಣೆ ಪರಿಣತಿಯನ್ನು ಹೊಂದಿರುವ ಸಂಸ್ಥೆಯೊಂದರ ನೇತೃತ್ವದಲ್ಲಿ ಸಮಗ್ರ ಅಧ್ಯಯನ ನಡೆಸಬೇಕು ಎಂದಿದ್ದಾರೆ. ಈ ಅಧ್ಯಯನವು ತಾತ್ಕಾಲಿಕ ಮತ್ತು ದೀರ್ಘಾವಧಿಯ ಪರಿಹಾರಗಳನ್ನು ರೂಪಿಸಲು ಸಹಾಯಕವಾಗಲಿದೆ. ಈ ಯೋಜನೆಯ ವೆಚ್ಚದ ಭಾಗವನ್ನು ವಿಪ್ರೋ ಭರಿಸಲಿದೆ ಎಂದು ಅವರು ತಿಳಿಸಿದ್ದಾರೆ. ಇದರಿಂದ ಸರ್ಕಾರದ ಜೊತೆಗಿನ ಸಹಕಾರದ ಬದ್ಧತೆಯನ್ನು ತೋರಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರ ಕಾರ್ಪೊರೇಟ್ ಸಹಕಾರ ಕೋರಿಕೆಯನ್ನು ಅಜೀಮ್ ಪ್ರೇಮ್‌ಜೀ ಮೆಚ್ಚಿಕೊಂಡಿದ್ದಾರೆ. ಆದರೆ, ಭದ್ರತಾ ಕಾರಣಗಳಿಂದ ಕ್ಯಾಂಪಸ್ ರಸ್ತೆಯನ್ನು ತೆರೆಯಲು ಸಾಧ್ಯವಿಲ್ಲ ಎಂದು ಸೂಕ್ಷ್ಮವಾಗಿ ತಿಳಿಸಿದ್ದಾರೆ. ಈ ಮೂಲಕ, ವಿಪ್ರೋ ತನ್ನ ನಿಲುವನ್ನು ರಕ್ಷಿಸಿಕೊಂಡಿದ್ದು, ಚರ್ಚೆಗೆ ತೆರೆದುಕೊಳ್ಳುವ ಮೂಲಕ ಸರ್ಕಾರದ ಜೊತೆ ಸೌಹಾರ್ದಯುತ ಸಂಬಂಧ ಕಾಯ್ದುಕೊಂಡಿದೆ.