ಬೆಂಗಳೂರು: ರಾಜ್ಯದ ನೂತನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಇಂದು ಸಂಜೆ 4:05ಕ್ಕೆ ಲೋಕಭವನದ ಗಾಜಿನ ಮನೆಯಲ್ಲಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಈ ಐತಿಹಾಸಿಕ ಸಮಾರಂಭಕ್ಕೆ ರಾಹುಲ್ ಗಾಂಧಿ, ಪ್ರಿಯಾಂಕ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು, ಸುಮಾರು 50 ವಿವಿಐಪಿಗಳು ಮತ್ತು 55ಕ್ಕೂ ಹೆಚ್ಚು ಧಾರ್ಮಿಕ ಸ್ವಾಮೀಜಿಗಳು ಆಗಮಿಸುತ್ತಿರುವುದರಿಂದ ಬೆಂಗಳೂರಿನಲ್ಲಿ ತೀವ್ರ ಟ್ರಾಫಿಕ್ ಸಮಸ್ಯೆ ಉಂಟಾಗುವ ಸಾಧ್ಯತೆಯಿದೆ.
ಬೆಂಗಳೂರು ನಗರ ಪೊಲೀಸ್ ಆಯುಕ್ತರು ಮತ್ತು ಸಾರಿಗೆ ಇಲಾಖೆಯು ಈಗಾಗಲೇ ಮುನ್ನಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದಾರೆ. ಲೋಕಭವನ, ವಿಧಾನಸೌಧ, ವಿಧಾನ ವೃತ್ತ, ಕ್ಯೂಬ್ಬನ್ ಪಾರ್ಕ್, ರಿಚರ್ಡ್ಸ್ ಪಾರ್ಕ್, ರಾಜಭವನ ರಸ್ತೆಗಳು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಟ್ರಾಫಿಕ್ ನಿಯಂತ್ರಣ ವ್ಯವಸ್ಥೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗಿದೆ.
ಕೆಲವು ಪ್ರಮುಖ ರಸ್ತೆಗಳಲ್ಲಿ ಸಂಜೆ 2 ಗಂಟೆಯಿಂದಲೇ ವಾಹನ ಸಂಚಾರ ನಿರ್ಬಂಧಿಸುವ ಸಾಧ್ಯತೆಯಿದೆ. ಪೊಲೀಸ್ ಇಲಾಖೆಯು ಜನರಿಗೆ ಮನವಿ ಮಾಡಿದ್ದು, “ಅಗತ್ಯವಿಲ್ಲದಿದ್ದರೆ ಲೋಕಭವನ, ವಿಧಾನಸೌಧ ಪ್ರದೇಶಕ್ಕೆ ಬರುವುದನ್ನು ತಪ್ಪಿಸಿ. ಬದಲಿ ರಸ್ತೆಗಳನ್ನು ಬಳಸಿ.
ಸಮಾರಂಭದ ಸಮಯದಲ್ಲಿ ಟ್ರಾಫಿಕ್ ಪೊಲೀಸರ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ” ಎಂದು ತಿಳಿಸಿದೆ. ಭಾರೀ ಸಂಖ್ಯೆಯಲ್ಲಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಡ್ರೋನ್ ಮೂಲಕ ಮೇಲ್ವಿಚಾರಣೆ ಮಾಡುವ ಏರ್ಪಾಟುಗಳನ್ನು ಮಾಡಲಾಗಿದೆ.
ಸಮಾರಂಭದಲ್ಲಿ ಸರ್ವಧರ್ಮ ಸ್ವಾಮೀಜಿಗಳು, ಮಠಾಧಿಪತಿಗಳು, ಫಾದರ್‌ಗಳು ಮತ್ತು ಮೌಲ್ವಿಗಳು ಭಾಗವಹಿಸುತ್ತಿರುವುದು ವಿಶೇಷ. ಆದಿಚುಂಚನಗಿರಿ, ಸುತ್ತೂರು, ಸಿದ್ಧಗಂಗಾ, ಪೇಜಾವರ, ಶ್ರವಣಬೆಳಗೊಳ ಮುಂತಾದ ಮಠಗಳ ಪ್ರಮುಖ ಸ್ವಾಮೀಜಿಗಳು ಆಗಮಿಸುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ಭದ್ರತಾ ದೃಷ್ಟಿಯಿಂದಲೂ ಪೊಲೀಸರು ಹೆಚ್ಚು ಎಚ್ಚರಿಕೆ ವಹಿಸಿದ್ದಾರೆ.ನಗರದ ವಾಹನ ಸವಾರರು ತೊಂದರೆ ತಪ್ಪಿಸಿಕೊಳ್ಳಲು ಬೆಳಗ್ಗೆಯೇ ತಮ್ಮ ಕೆಲಸಗಳನ್ನು ಮುಗಿಸಿಕೊಳ್ಳುವಂತೆ ಸಲಹೆ ನೀಡಲಾಗಿದೆ. ಮೆಟ್ರೋ, ಬಿಎಂಟಿಸಿ ಬಸ್‌ಗಳ ಸಂಖ್ಯೆಯನ್ನು ಹೆಚ್ಚಿಸುವ ಯೋಜನೆಯಿದೆ. ಆದರೂ ಸಂಜೆ 3 ರಿಂದ 7 ಗಂಟೆಯ ನಡುವೆ ಕೆಲವು ಪ್ರದೇಶಗಳಲ್ಲಿ ತೀವ್ರ ಟ್ರಾಫಿಕ್ ಜಾಮ್ ಉಂಟಾಗುವ ನಿರೀಕ್ಷೆಯಿದೆ.
ಡಿ.ಕೆ.ಶಿವಕುಮಾರ್ ಅವರ ಪಟ್ಟಾಭಿಷೇಕ ಸಮಾರಂಭವು ಕರ್ನಾಟಕ ರಾಜಕೀಯದಲ್ಲಿ ಹೊಸ ಅಧ್ಯಾಯ ಆರಂಭಿಸುತ್ತಿದೆ ಆದರೆ, ಬೆಂಗಳೂರು ನಗರವು ಇಂದು ಟ್ರಾಫಿಕ್ ಸವಾಲನ್ನು ಎದುರಿಸಲಿದೆ. ನಾಗರಿಕರು ಸಹಕಾರ ನೀಡುವ ಮೂಲಕ ಸಮಾರಂಭವನ್ನು ಸುಸಂಘಟಿತವಾಗಿ ನಡೆಸಲು ಪೊಲೀಸರಿಗೆ ಸಹಾಯ ಮಾಡುವಂತೆ ಜಿಲ್ಲಾಧಿಕಾರಿಗಳು ಮನವಿ ಮಾಡಿದ್ದಾರೆ.





