ಬೆಂಗಳೂರು: ಅಣ್ಣನ ಪ್ರೀತಿ ನಿರಾಕರಿಸಿದ್ದಕ್ಕೆ ಯುವತಿಯ ಮೇಲೆ ತಮ್ಮ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಹೆಚ್‌ಎಎಲ್ ರಸ್ತೆಯ ಕೋಡಿಹಳ್ಳಿಯಲ್ಲಿ ನಡೆದಿದೆ. ಮೃತ ಯುವತಿಯನ್ನು ಅಮೃತಾ ಎಂದು ಗುರುತಿಸಲಾಗಿದೆ. ಪ್ರಕರಣ ಸಂಬಂಧ ಯುವತಿಯ ಪ್ರಿಯಕರನಾಗಿದ್ದ ಧನುಷ್ ಹಾಗೂ ಆತನ ತಮ್ಮ ಸೂರ್ಯನನ್ನು ಜೀವನಭೀಮಾನಗರ ಪೊಲೀಸರು ಬಂಧಿಸಿ ತನಿಖೆ ಮುಂದುವರಿಸಿದ್ದಾರೆ.
ಜುಲೈ 13ರಂದು ನಡೆದಿದ್ದ ಈ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಅಮೃತಾಳನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಮೂರು ದಿನಗಳ ಕಾಲ ಚಿಕಿತ್ಸೆ ಪಡೆದ ಬಳಿಕ ಜುಲೈ 15ರ ಸಂಜೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.
ಪರಿಚಯದಿಂದ ಪ್ರೀತಿ
ಮಾಹಿತಿ ಪ್ರಕಾರ, ಅಮೃತಾ, ಧನುಷ್ ಹಾಗೂ ಸೂರ್ಯ ಒಂದೇ ಪ್ರದೇಶದಲ್ಲಿ ವಾಸಿಸುತ್ತಿದ್ದರು. ಓಂ ಶಕ್ತಿ ಮಾಲೆ ಧರಿಸುವ ಕಾರ್ಯಕ್ರಮದ ವೇಳೆ ಎರಡೂ ಕುಟುಂಬಗಳ ನಡುವೆ ಪರಿಚಯ ಬೆಳೆದಿತ್ತು. ಈ ಪರಿಚಯ ಕ್ರಮೇಣ ಅಮೃತಾ ಮತ್ತು ಧನುಷ್ ಪರಸ್ಪರ ಪ್ರೀತಿಸುತ್ತಿದ್ದರು ಎನ್ನಲಾಗಿದೆ.
ಆದರೆ ಧನುಷ್ ಈಗಾಗಲೇ ಮದುವೆಯಾಗಿದ್ದು, ಬಳಿಕ ವಿಚ್ಛೇದನ ಪಡೆದಿದ್ದನು. ಅವನಿಗೆ ಒಂದು ವರ್ಷದ ಮಗು ಕೂಡ ಇತ್ತು. ಈ ಮಹತ್ವದ ವಿಚಾರವನ್ನು ಅಮೃತಾಳಿಂದ ಧನುಷ್ ಮುಚ್ಚಿಟ್ಟಿದ್ದಾನೆ ಎನ್ನಲಾಗಿದೆ.
ಸತ್ಯ ಗೊತ್ತಾದ ಬಳಿಕ ದೂರವಾದ ಅಮೃತಾ
ಧನುಷ್ ಮದುವೆಯಾಗಿ ವಿಚ್ಛೇದನ ಪಡೆದಿದ್ದಾನೆ ಹಾಗೂ ಮಗುವಿನ ತಂದೆಯೂ ಆಗಿದ್ದಾನೆ ಎಂಬ ಮಾಹಿತಿ ತಿಳಿದ ನಂತರ ಅಮೃತಾ ಸಂಬಂಧ ಮುಂದುವರಿಸಲು ನಿರಾಕರಿಸಿದ್ದರು. ಇದರಿಂದ ಇಬ್ಬರ ನಡುವೆ ಭಿನ್ನಾಭಿಪ್ರಾಯ ಉಂಟಾಗಿತ್ತು.
ಪೊಲೀಸರ ಮಾಹಿತಿ ಪ್ರಕಾರ, ಧನುಷ್‌ನ ತಮ್ಮ ಸೂರ್ಯ ಇದರಿಂದ ಆಕ್ರೋಶಗೊಂಡಿದ್ದು, “ಅಣ್ಣನ ಪ್ರೀತಿಯನ್ನು ನಿರಾಕರಿಸಿದವಳನ್ನು ಬಿಡುವುದಿಲ್ಲ” ಎಂದು ಆತ ಹೇಳಿಕೊಂಡಿದ್ದನೆಂಬ ಆರೋಪವೂ ಕೇಳಿಬಂದಿದೆ.
ಮನೆಯ ಬಳಿ ಗಲಾಟೆ, ಬಳಿಕ ಮಾರಣಾಂತಿಕ ಹಲ್ಲೆ
ಜುಲೈ 13ರಂದು ಸಂಜೆ ಸೂರ್ಯ ಅಮೃತಾಳ ಮನೆ ಸಮೀಪ ತೆರಳಿ ಗಲಾಟೆ ನಡೆಸಿದ್ದಾನೆ. ಮಾತಿನ ಚಕಮಕಿ ತೀವ್ರಗೊಂಡ ವೇಳೆ ಸೂರ್ಯ ಚಾಕುವಿನಿಂದ ಅಮೃತಾಳ ಎದೆ ಹಾಗೂ ಬೆನ್ನಿನ ಭಾಗಕ್ಕೆ ಹಲವು ಬಾರಿ ಚಾಕುವಿನಿಂದ ಇರಿದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ತೀವ್ರ ರಕ್ತಸ್ರಾವಗೊಂಡ ಅಮೃತಾಳನ್ನು ಕುಟುಂಬಸ್ಥರು ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದರು. ವೈದ್ಯರು ಸತತ ಚಿಕಿತ್ಸೆ ನೀಡಿದರೂ ಮೂರು ದಿನಗಳ ಬಳಿಕ ಅವರು ಮೃತಪಟ್ಟಿದ್ದಾರೆ.
ಲಾ ವಿದ್ಯಾರ್ಥಿನಿಯಾಗಿದ್ದ ಅಮೃತಾ
ಮೃತ ಅಮೃತಾ ಕಾನೂನು ವ್ಯಾಸಂಗ ಮಾಡುತ್ತಿದ್ದ ಲಾ ವಿದ್ಯಾರ್ಥಿನಿಯಾಗಿದ್ದರು.. ಯುವತಿಯ ಸಾವಿನ ಸುದ್ದಿ ತಿಳಿಯುತ್ತಿದ್ದಂತೆಯೇ ಆಸ್ಪತ್ರೆ ಹಾಗೂ ನಿವಾಸದ ಬಳಿ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತು.
ಇಬ್ಬರು ಆರೋಪಿಗಳ ಬಂಧನ
ಪ್ರಕರಣ ದಾಖಲಿಸಿಕೊಂಡ ಜೀವನಭೀಮಾನಗರ ಪೊಲೀಸರು ತಕ್ಷಣ ಕಾರ್ಯಾಚರಣೆ ನಡೆಸಿ ಆರೋಪಿ ಸೂರ್ಯ ಹಾಗೂ ಆತನ ಅಣ್ಣ ಧನುಷ್ ಅವರನ್ನು ಬಂಧಿಸಿದ್ದಾರೆ. ಇಬ್ಬರ ವಿರುದ್ಧ ಕೊಲೆ ಸೇರಿದಂತೆ ವಿವಿಧ ಕಲಂಗಳಡಿ ಎಫ್‌ಐಆರ್ ದಾಖಲಿಸಲಾಗಿದೆ.
