ಶಾಲೆಯಲ್ಲೇ ಕುಸಿದು ಬಿದ್ದು 12 ವರ್ಷದ ವಿದ್ಯಾರ್ಥಿ ಸಾ*ವು

ಅಪಾಯ (7)

ಬೆಂಗಳೂರು: ಶಾಲೆಯಲ್ಲೇ 12 ವರ್ಷದ ಬಾಲಕನೊಬ್ಬ ತರಗತಿ ಕೊಠಡಿಯಲ್ಲೇ ಕುಸಿದು ಬಿದ್ದು ಮೃತಪಟ್ಟಿರುವ ಘಟನೆ ಬೆಂಗಳೂರು ನಗರದ ಬನ್ನೇರುಘಟ್ಟ ರಸ್ತೆಯ ವಿವರ್ಸ್ ಕಾಲೋನಿಯಲ್ಲಿರುವ ನ್ಯೂ ಬ್ಲಾಸಮ್ ಖಾಸಗಿ ಶಾಲೆಯಲ್ಲಿ ನಡೆದಿದೆ.

ಮೃತ ವಿದ್ಯಾರ್ಥಿಯನ್ನು ಅರ್ಹಾನ್ ಪಾಷಾ (12) ಎಂದು ಗುರುತಿಸಲಾಗಿದೆ. ಅರ್ಹಾನ್ ಪಾಷಾ ನ್ಯೂ ಬ್ಲಾಸಮ್ ಖಾಸಗಿ ಶಾಲೆಯಲ್ಲಿ 5ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಎನ್ನಲಾಗಿದೆ.

ಮಾಹಿತಿಯ ಪ್ರಕಾರ, ಜೂನ್ 10ರಂದು ಮಧ್ಯಾಹ್ನ ಸುಮಾರು 1 ಗಂಟೆ ವೇಳೆ ಈ ಘಟನೆ ನಡೆದಿದೆ. ತರಗತಿಯಲ್ಲಿದ್ದ ಅರ್ಹಾನ್ ಪಾಷಾ, ತನಗೆ ಸುಸ್ತಾಗುತ್ತಿದೆ ಎಂದು ಶಿಕ್ಷಕಿಯ ಬಳಿ ಹೇಳಿಕೊಂಡಿದ್ದಾನೆ ಎನ್ನಲಾಗಿದೆ. ಆದರೆ, ನಂತರ ತರಗತಿ ಕೊಠಡಿಗೆ ಬಂದ ವೇಳೆ ಏಕಾಏಕಿ ಬೆಂಚ್ ಮೇಲೆ ಕುಸಿದು ಬಿದ್ದಿದ್ದಾನೆ.

ಬಾಲಕ ಕುಸಿದು ಬಿದ್ದ ಬಳಿಕ ತಕ್ಷಣ ಪ್ರಾಥಮಿಕ ಚಿಕಿತ್ಸೆಯ ನೆರವು ನೀಡುವ ಬದಲು ಶಾಲಾ ಸಿಬ್ಬಂದಿ ನಿರ್ಲಕ್ಷ್ಯ ವಹಿಸಿದ್ದಾರೆ ಎಂಬ ಗಂಭೀರ ಆರೋಪವನ್ನು ಕುಟುಂಬಸ್ಥರು ಮಾಡಿದ್ದಾರೆ. ಬಾಲಕನನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದರೆ ಜೀವ ಉಳಿಯುವ ಸಾಧ್ಯತೆ ಇತ್ತು ಎಂದು ವೈದ್ಯರು ಹೇಳಿದ್ದಾರೆ ಎನ್ನಲಾಗಿದೆ.

ಕುಟುಂಬಸ್ಥರ ಆರೋಪದ ಪ್ರಕಾರ, ಬಾಲಕ ಕುಸಿದು ಬಿದ್ದ ಬಳಿಕ ಸುಮಾರು 45 ನಿಮಿಷಗಳ ಕಾಲ ಶಾಲಾ ಕೊಠಡಿಯಲ್ಲೇ ಇರಿಸಲಾಗಿತ್ತು. ಬಳಿಕ ಶಾಲಾ ಸಿಬ್ಬಂದಿ ಕುಟುಂಬಕ್ಕೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.

ಮಾಹಿತಿ ತಿಳಿದ ತಕ್ಷಣ ಕುಟುಂಬಸ್ಥರು ಶಾಲೆಯತ್ತ ಧಾವಿಸಿದ್ದಾರೆ. ಆದರೆ, ಮಗುವನ್ನು ಆಸ್ಪತ್ರೆಗೆ ಕರೆದೊಯ್ಯಲು ಶಾಲಾ ವಾಹನ ನೀಡಲು ಸಿಬ್ಬಂದಿ ಹಿಂದೇಟು ಹಾಕಿದರು ಎಂಬ ಆರೋಪ ಕೇಳಿಬಂದಿದೆ. ಕೊನೆಗೆ ಕುಟುಂಬಸ್ಥರು ಬೈಕ್ ಮೂಲಕ ಬಾಲಕನನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

ಆದರೆ, ಆಸ್ಪತ್ರೆಗೆ ತಲುಪುವಷ್ಟರಲ್ಲಿ ಬಾಲಕ ಮೃತಪಟ್ಟಿದ್ದಾನೆ ಎಂದು ವೈದ್ಯರು ದೃಢಪಡಿಸಿದ್ದಾರೆ. ಸಮಯಕ್ಕೆ ಸರಿಯಾಗಿ ಚಿಕಿತ್ಸೆ ದೊರೆತಿದ್ದರೆ ಬಾಲಕನನ್ನು ಉಳಿಸುವ ಸಾಧ್ಯತೆ ಇತ್ತು ಎಂದು ವೈದ್ಯರು ಕುಟುಂಬಕ್ಕೆ ತಿಳಿಸಿದ್ದಾರೆ ಎನ್ನಲಾಗಿದೆ.

ಘಟನೆಯ ಬಳಿಕ ಅರ್ಹಾನ್ ಪಾಷಾ ಅವರ ಕುಟುಂಬಸ್ಥರು ಶಾಲಾ ಆಡಳಿತದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಬ್ಬನೇ ಮಗನನ್ನು ಕಳೆದುಕೊಂಡ ನೋವಿನಲ್ಲಿ ಕುಟುಂಬ ಕಣ್ಣೀರಿಟ್ಟಿದ್ದು, ಶಾಲಾ ಸಿಬ್ಬಂದಿಯ ನಿರ್ಲಕ್ಷ್ಯದಿಂದಲೇ ಈ ದುರಂತ ಸಂಭವಿಸಿದೆ ಎಂದು ಆರೋಪಿಸಿದ್ದಾರೆ.

ಈ ಘಟನೆಗೆ ಸಂಬಂಧಿಸಿದಂತೆ ಶಾಲೆಯ ಸಿಸಿಟಿವಿ ದೃಶ್ಯಗಳು ಪೊಲೀಸರ ಕೈ ಸೇರಿವೆ. ಬಾಲಕ ಕುಸಿದು ಬೀಳುತ್ತಿರುವ ದೃಶ್ಯಗಳು ತನಿಖೆಗೆ ಪ್ರಮುಖ ಸಾಕ್ಷಿಯಾಗುವ ಸಾಧ್ಯತೆ ಇದೆ.

ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. ಸಿಸಿಟಿವಿ ದೃಶ್ಯಾವಳಿ, ವೈದ್ಯಕೀಯ ವರದಿ ಹಾಗೂ ಶಾಲಾ ಸಿಬ್ಬಂದಿಗಳ ಹೇಳಿಕೆಗಳನ್ನು ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುತ್ತಿದೆ.

Exit mobile version