ಬೆಂಗಳೂರು: ನಗರದಲ್ಲಿ ಫುಟ್‌ಪಾತ್ ತೆರವು ಕಾರ್ಯಾಚರಣೆಯ ಬಳಿಕ ಇದೀಗ ಬೀದಿ ಬದಿ ಹಾಗೂ ದೀರ್ಘಕಾಲ ರಸ್ತೆ ಬದಿಯಲ್ಲಿ ನಿಲ್ಲಿಸಿರುವ ವಾಹನಗಳ ವಿರುದ್ಧವೂ ಬೃಹತ್ ಕಾರ್ಯಾಚರಣೆ ಆರಂಭವಾಗಿದೆ. ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು ಶುಕ್ರವಾರ ಈ ಅಭಿಯಾನಕ್ಕೆ ಚಾಲನೆ ನೀಡಿದ್ದು, ರಸ್ತೆ ಬದಿಯಲ್ಲಿ ತಿಂಗಳುಗಳ ಕಾಲ ನಿಂತಿದ್ದ ಹಳೆಯ ವಾಹನಗಳಿಗೆ ನೋಟಿಸ್ ಅಂಟಿಸಿ, ಅವುಗಳ ಚಕ್ರಗಳಿಗೆ ಲಾಕ್ ಹಾಕುವ ಮೂಲಕ ಸಾಂಕೇತಿಕವಾಗಿ ಕಾರ್ಯಾಚರಣೆಯನ್ನು ಆರಂಭಿಸಿದರು.
ಗ್ರೇಟರ್ ಬೆಂಗಳೂರು ಆಡಳಿತ (ಜಿಬಿಎ), ಸಂಚಾರಿ ಪೊಲೀಸರು ಹಾಗೂ ಪಾಲಿಕೆ ಅಧಿಕಾರಿಗಳ ಸಂಯುಕ್ತ ಕಾರ್ಯಾಚರಣೆಯಲ್ಲಿ ಮೊದಲ ಹಂತವಾಗಿ ಗುರುತಿಸಲಾದ ವಾಹನಗಳ ಮಾಲೀಕರಿಗೆ 7 ದಿನಗಳ ಗಡುವು ನೀಡಲಾಗಿದೆ. ಈ ಅವಧಿಯೊಳಗೆ ವಾಹನಗಳನ್ನು ತೆರವುಗೊಳಿಸದಿದ್ದರೆ ಅವುಗಳನ್ನು ಜಪ್ತಿ ಮಾಡಿ ಟೋಯಿಂಗ್ ಮಾಡುವುದಾಗಿ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಜನರ ಜಾಗ ಅತಿಕ್ರಮಣಕ್ಕೆ ಅವಕಾಶವಿಲ್ಲ: ಸಚಿವ ಕೃಷ್ಣ ಬೈರೇಗೌಡ
ಕಾರ್ಯಾಚರಣೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಕೃಷ್ಣ ಬೈರೇಗೌಡ, “ಸುಮಾರು 15 ದಿನಗಳ ಹಿಂದೆಯೇ ರಸ್ತೆ ಬದಿಯಲ್ಲಿ ಬಿಟ್ಟಿರುವ ವಾಹನಗಳನ್ನು ತೆರವುಗೊಳಿಸುವಂತೆ ಸಾರ್ವಜನಿಕರಿಗೆ ಮನವಿ ಹಾಗೂ ಎಚ್ಚರಿಕೆ ನೀಡಲಾಗಿತ್ತು. ಆದರೂ ಅನೇಕರು ವಾಹನಗಳನ್ನು ಸಾರ್ವಜನಿಕ ರಸ್ತೆಗಳಲ್ಲೇ ಬಿಟ್ಟು ಹೋಗಿದ್ದಾರೆ. ಇದರಿಂದ ಸಾರ್ವಜನಿಕರಿಗೆ ಓಡಾಡಲು ತೊಂದರೆಯಾಗುತ್ತಿದೆ. ಸಾರ್ವಜನಿಕ ಆಸ್ತಿಯನ್ನು ಖಾಸಗಿ ಉದ್ದೇಶಕ್ಕೆ ಬಳಸುವುದು ಕಾನೂನು ಉಲ್ಲಂಘನೆಯಾಗಿದೆ,” ಎಂದು ಹೇಳಿದರು.
ತಿಂಗಳುಗಟ್ಟಲೆ ರಸ್ತೆ ಬದಿಯಲ್ಲಿ ನಿಂತಿರುವ ಹಲವು ವಾಹನಗಳ ಮಾಲೀಕರು ಯಾರು ಎಂಬುದೇ ಪತ್ತೆಯಾಗದ ಪರಿಸ್ಥಿತಿ ಇದೆ. ಇಂತಹ ವಾಹನಗಳು ನಗರ ಸೌಂದರ್ಯಕ್ಕೂ ಧಕ್ಕೆ ತರುತ್ತಿದ್ದು, ಅಪಘಾತಗಳಿಗೂ ಕಾರಣವಾಗುತ್ತಿವೆ ಎಂದು ಸಚಿವರು ಹೇಳಿದರು.
1,581 ವಾಹನಗಳ ಗುರುತು
ನಗರದ ವಿವಿಧ ಪ್ರದೇಶಗಳಲ್ಲಿ ಈಗಾಗಲೇ 1,581 ಬೀದಿ ಬದಿವಾಹನಗಳನ್ನು ಅಧಿಕಾರಿಗಳು ಗುರುತಿಸಿದ್ದಾರೆ. ಇದಕ್ಕಿಂತಲೂ ಹೆಚ್ಚಿನ ವಾಹನಗಳು ರಸ್ತೆ ಬದಿಯಲ್ಲಿ ನಿಲ್ಲಿಸಿರುವ ಸಾಧ್ಯತೆ ಇದ್ದು, ಹಂತ ಹಂತವಾಗಿ ಎಲ್ಲ ವಾಹನಗಳಿಗೂ ನೋಟಿಸ್ ನೀಡಲಾಗುತ್ತಿದೆ.
7 ದಿನಗಳಲ್ಲಿ ತೆರವುಗೊಳಿಸದಿದ್ದರೆ ಏನಾಗುತ್ತದೆ?
ಅಧಿಕಾರಿಗಳ ಪ್ರಕಾರ, ನೋಟಿಸ್ ನೀಡಿದ ದಿನದಿಂದ ಒಂದು ವಾರದೊಳಗೆ ವಾಹನ ಮಾಲೀಕರು ವಾಹನವನ್ನು ತೆರವುಗೊಳಿಸಿ, ₹500 ರಿಂದ ₹1,000 ವರೆಗೆ ವಿಧಿಸಲಾದ ದಂಡವನ್ನು ಪಾವತಿಸಿದರೆ ವಾಹನವನ್ನು ಮರಳಿ ಪಡೆಯಬಹುದು.
ಆದರೆ, ನಿಗದಿತ ಅವಧಿಯೊಳಗೆ ವಾಹನವನ್ನು ತೆರವುಗೊಳಿಸದಿದ್ದರೆ ಅದನ್ನು ಟೋಯಿಂಗ್ ಮಾಡಿ ಜಪ್ತಿ ಮಾಡಲಾಗುತ್ತದೆ. ಬಳಿಕ ವಾಹನವನ್ನು ವಾಪಸ್ ಪಡೆಯಲು ಟೋಯಿಂಗ್ ಶುಲ್ಕ, ದಂಡ ಹಾಗೂ ಇತರೆ ಎಲ್ಲಾ ಶುಲ್ಕಗಳನ್ನು ಪಾವತಿಸಬೇಕಾಗುತ್ತದೆ.
ಕೊನೆಗೆ ಹರಾಜು
ಜಪ್ತಿ ಮಾಡಿದ ವಾಹನವನ್ನು ಮಾಲೀಕರು ಮರಳಿ ಪಡೆಯದಿದ್ದರೆ, ಪತ್ರಿಕೆಯಲ್ಲಿ ಸಾರ್ವಜನಿಕ ನೋಟಿಸ್ ಪ್ರಕಟಿಸಿ 15 ದಿನಗಳ ಕಾಲ ಕಾಯಲಾಗುತ್ತದೆ. ಆ ಅವಧಿಯಲ್ಲೂ ಯಾರೂ ವಾಹನದ ಹಕ್ಕು ಕೇಳದಿದ್ದರೆ, ವಾಹನವನ್ನು ಸಾರ್ವಜನಿಕ ಹರಾಜು ಮೂಲಕ ಮಾರಾಟ ಮಾಡಲಾಗುತ್ತದೆ. ಹರಾಜಿನಲ್ಲಿ ಸಾರ್ವಜನಿಕರು ಭಾಗವಹಿಸಿ ವಾಹನಗಳನ್ನು ಖರೀದಿಸಲು ಅವಕಾಶ ಇರುತ್ತದೆ.
ನಗರದ ರಸ್ತೆಗಳನ್ನು ಅತಿಕ್ರಮಣ ಮುಕ್ತಗೊಳಿಸಿ, ಸಂಚಾರ ಸುಗಮಗೊಳಿಸುವ ಉದ್ದೇಶದಿಂದ ಈ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
