ವಿಂಡ್ ಟನಲ್ ಕೆಳಸೇತುವೆ ಕಾಮಗಾರಿಗೆ ವೇಗ ನೀಡಿ : ಕೃಷ್ಣ ಬೈರೇಗೌಡ ಸೂಚನೆ

Web Photo Editor 2026 07 10T114118.162

ಬೆಂಗಳೂರು, ಜುಲೈ: 10: ನಗರದ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಕೈಗೆತ್ತಿಕೊಳ್ಳಲಾಗಿರುವ ವಿಂಡ್ ಟನಲ್ ಜಂಕ್ಷನ್ ಕೆಳಸೇತುವೆ ಕಾಮಗಾರಿಗೆ ಇನ್ನಷ್ಟು ವೇಗ ನೀಡುವಂತೆ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಶ್ರೀ ಕೃಷ್ಣ ಬೈರೇಗೌಡ ಗುತ್ತಿಗೆದಾರರಿಗೆ ಸೂಚನೆ ನೀಡಿದ್ದಾರೆ. ಬೆಂಗಳೂರು ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯ ಹಳೆ ವಿಮಾನ ನಿಲ್ದಾಣ ರಸ್ತೆಯ ಯು.ಆರ್. ರಾವ್ ಉಪಗ್ರಹ ಕೇಂದ್ರದ ಸಮೀಪದ ವಿಂಡ್ ಟನಲ್ ಜಂಕ್ಷನ್‌ಗೆ ಇಂದು ಭೇಟಿ ನೀಡಿ ಕಾಮಗಾರಿ ಪ್ರಗತಿ ಪರಿಶೀಲಿಸಿದ ಅವರು, ಯೋಜನೆಯನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಲು ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸಿ ಕಾರ್ಯ ಚುರುಕುಗೊಳಿಸುವಂತೆ ನಿರ್ದೇಶನ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ವಿಂಡ್ ಟನಲ್ ಕೆಳಸೇತುವೆ ಕಾಮಗಾರಿಗೆ ಸಂಬಂಧಿಸಿದಂತೆ ಜಲಮಂಡಳಿಯ ಪೈಪ್‌ಲೈನ್‌, ಒಳಚರಂಡಿ ಸಂಪರ್ಕ ವ್ಯವಸ್ಥೆ, ಬೆಸ್ಕಾಂ ಕೇಬಲ್‌ಗಳು, ಓಎಫ್‌ಸಿ ಕೇಬಲ್‌ಗಳು ಸೇರಿದಂತೆ ವಿವಿಧ ಯುಟಿಲಿಟಿಗಳ ಸ್ಥಳಾಂತರ ಕಾರ್ಯ ಈಗಾಗಲೇ ಪೂರ್ಣಗೊಂಡಿದೆ ಎಂದು ತಿಳಿಸಿದರು. ಪ್ರಸ್ತುತ ತಡೆಗೋಡೆ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಅದನ್ನು ಇನ್ನಷ್ಟು ವೇಗವಾಗಿ ಪೂರ್ಣಗೊಳಿಸಿ ಮುಂದಿನ ಮೂರು ತಿಂಗಳೊಳಗೆ ಸಂಪೂರ್ಣ ಕಾಮಗಾರಿ ಮುಗಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ಈ ಕೆಳಸೇತುವೆ ನಿರ್ಮಾಣದಿಂದ ಹಳೆ ವಿಮಾನ ನಿಲ್ದಾಣ ರಸ್ತೆ ಭಾಗದ ವಾಹನ ಸಂಚಾರ ಸುಗಮವಾಗಲಿದ್ದು, ವಿಂಡ್ ಟನಲ್ ಜಂಕ್ಷನ್‌ನಲ್ಲಿ ಉಂಟಾಗುವ ಟ್ರಾಫಿಕ್ ಒತ್ತಡವನ್ನು ಕಡಿಮೆ ಮಾಡಲು ಇದು ಸಹಾಯಕವಾಗಲಿದೆ. ಕಾಮಗಾರಿ ವೇಳೆ ಸಾರ್ವಜನಿಕರಿಗೆ ಯಾವುದೇ ರೀತಿಯ ಸಂಚಾರ ತೊಂದರೆ ಉಂಟಾಗದಂತೆ ವಿಶೇಷ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಮಾತನಾಡಿ, ಕಾಮಗಾರಿ ನಡೆಯುವ ಅವಧಿಯಲ್ಲೂ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗದಂತೆ ಪರ್ಯಾಯ ವ್ಯವಸ್ಥೆಗಳನ್ನು ರೂಪಿಸಲಾಗುತ್ತಿದೆ ಎಂದು ಹೇಳಿದರು. ಜಂಕ್ಷನ್‌ನ ಎರಡೂ ಬದಿಗಳಲ್ಲಿರುವ ರಕ್ಷಣಾ ಇಲಾಖೆ, ಇಸ್ರೋ, ಎನ್‌ಎಎಲ್ ಹಾಗೂ ಖಾಸಗಿ ಜಾಗಗಳ ಸಹಕಾರದಿಂದ ತಾತ್ಕಾಲಿಕ ರಸ್ತೆಗಳನ್ನು ನಿರ್ಮಿಸಿ ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದು ಅವರು ತಿಳಿಸಿದರು.

ವಿಂಡ್ ಟನಲ್ ಜಂಕ್ಷನ್‌ನಲ್ಲಿ ಸುಮಾರು 19 ಕೋಟಿ ರೂ. ವೆಚ್ಚದಲ್ಲಿ 300 ಮೀಟರ್ ಉದ್ದದ ಕೆಳಸೇತುವೆ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಎರಡೂ ಬದಿಗಳಲ್ಲಿ 7.5 ಮೀಟರ್ ಅಗಲದ ನಾಲ್ಕು ಪಥಗಳ ಕೆಳಸೇತುವೆ ನಿರ್ಮಿಸಲಾಗುತ್ತಿದ್ದು, ಯೋಜನೆಯ ಒಟ್ಟು ಕಾಮಗಾರಿಯಲ್ಲಿ ಈಗಾಗಲೇ ಶೇ. 75 ರಷ್ಟು ಕೆಲಸ ಪೂರ್ಣಗೊಂಡಿದೆ. ಒಂದು ಭಾಗದಲ್ಲಿ ಯುಟಿಲಿಟಿಗಳ ಸ್ಥಳಾಂತರ, ಆರ್‌ಸಿಸಿ ಗೋಡೆ ನಿರ್ಮಾಣ, ಸರ್ವೀಸ್ ರಸ್ತೆ ಕಾಮಗಾರಿ ಹಾಗೂ ಮಧ್ಯಭಾಗದಲ್ಲಿ ಅಳವಡಿಸಬೇಕಾದ ಬಾಕ್ಸ್‌ಗಳ ತಯಾರಿಕೆ ಕಾರ್ಯ ಮುಕ್ತಾಯ ಹಂತ ತಲುಪಿದೆ.

ಯೋಜನೆಯ ಮುಂದಿನ ಹಂತದಲ್ಲಿ ತಡೆಗೋಡೆ ಕಾಮಗಾರಿ ಪೂರ್ಣಗೊಂಡ ಬಳಿಕ ಮಧ್ಯಭಾಗಕ್ಕೆ ಪೂರ್ವಸಿದ್ಧಪಡಿಸಿರುವ ಬಾಕ್ಸ್‌ಗಳನ್ನು ಅಳವಡಿಸಲಾಗುತ್ತದೆ. ಅದರ ನಂತರ ಅಂತಿಮ ಹಂತವಾಗಿ ಸರ್ವೀಸ್ ರಸ್ತೆಗಳ ನಿರ್ಮಾಣ ಕೈಗೊಳ್ಳಲಾಗುತ್ತದೆ. ಈ ಮೂಲಕ ನಿಗದಿತ ಅವಧಿಯೊಳಗೆ ಕಾಮಗಾರಿ ಪೂರ್ಣಗೊಳಿಸಿ ಸಾರ್ವಜನಿಕ ಬಳಕೆಗೆ ತೆರೆಯುವ ಗುರಿ ಹೊಂದಲಾಗಿದೆ.

ಪರಿಶೀಲನಾ ವೇಳೆ ಕೇಂದ್ರ ನಗರ ಪಾಲಿಕೆ ಆಯುಕ್ತ ವೆಂಕಟಾ ಚಲಪತಿ, ಮುಖ್ಯ ಅಭಿಯಂತರ ವಿಜಯ್ ಕುಮಾರ್ ಹರಿದಾಸ್, ಹೇಮಲತಾ ಸೇರಿದಂತೆ ಹಲವು ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Exit mobile version