ನಮ್ಮ ಮೆಟ್ರೋದಲ್ಲಿ ಮೊದಲ ಬಾರಿಗೆ ಅಂಗಾಂಗ ರವಾನೆ

Untitled design 2025 08 02t164300.986

ಬೆಂಗಳೂರು: ಸಿಲಿಕಾನ್ ಸಿಟಿ, ತನ್ನ ಆಧುನಿಕ ಸೌಲಭ್ಯಗಳಿಂದ ಮಾತ್ರವಲ್ಲದೆ, ಇತಿಹಾಸದಲ್ಲಿ ದಾಖಲೆಯಾಗುವಂತಹ ಸಾಧನೆಗಳಿಂದಲೂ ಗುರುತಿಸಿಕೊಂಡಿದೆ. ಆಗಸ್ಟ್ 1ರಂದು ಬೆಂಗಳೂರು ಮೆಟ್ರೋ ರೈಲ್ ಕಾರ್ಪೊರೇಷನ್ ಲಿಮಿಟೆಡ್ (BMRCL) ಒಂದು ಐತಿಹಾಸಿಕ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸಿದೆ. ಇದೇ ಮೊದಲ ಬಾರಿಗೆ, ನಮ್ಮ ಮೆಟ್ರೋದಲ್ಲಿ ಮಾನವ ಅಂಗಾಂಗವಾದ ಯಕೃತ್‌ ಅನ್ನು ಒಂದು ಆಸ್ಪತ್ರೆಯಿಂದ ಮತ್ತೊಂದು ಆಸ್ಪತ್ರೆಗೆ ರವಾನಿಸಲಾಗಿದೆ. ಈ ಕಾರ್ಯವು ದೇಶದಲ್ಲಿ ಎರಡನೇ ಬಾರಿಗೆ ಮೆಟ್ರೋ ಮೂಲಕ ಅಂಗಾಂಗ ರಾವನೆ ಮಾಡಲಾಗಿದೆ.

ಯಕೃತ್ ರವಾನೆಯ ವಿವರ

ನಗರದ ವೈಟ್‌ಫೀಲ್ಡ್‌ನ ವೈದೇಹಿ ಆಸ್ಪತ್ರೆಯಿಂದ ರಾಜರಾಜೇಶ್ವರಿ ನಗರದ ಸ್ಪರ್ಶ್ ಆಸ್ಪತ್ರೆಗೆ ಯಕೃತ್ ರವಾನೆಯಾಗಿದೆ. ಆಗಸ್ಟ್ 1 ರಾತ್ರಿ 8:42ಕ್ಕೆ, ಯಕೃತ್‌ ಅನ್ನು ಆಂಬುಲೆನ್ಸ್ ಮೂಲಕ ವೈದೇಹಿ ಆಸ್ಪತ್ರೆಯಿಂದ ವೈಟ್‌ಫೀಲ್ಡ್ ಮೆಟ್ರೋ ನಿಲ್ದಾಣಕ್ಕೆ ತರಲಾಯಿತು. ಈ ಸಂದರ್ಭದಲ್ಲಿ, ಒಬ್ಬ ವೈದ್ಯರ ಜೊತೆಗೆ ಏಳು ಜನ ಸಿಬ್ಬಂದಿಗಳ ತಂಡವು ಯಕೃತ್‌ನ ಸುರಕ್ಷಿತ ಸಾಗಣೆಗಾಗಿ ಮೆಟ್ರೋದಲ್ಲಿ ಸಂಚರಿಸಲಾಯಿತು. ಮೆಟ್ರೋ ಸಿಬ್ಬಂದಿ, ಸಹಾಯಕ ಭದ್ರತಾ ಅಧಿಕಾರಿಗಳು ಸೇರಿದಂತೆ, ಸಾಗಣೆಗೆ ಮೊದಲು ಅಗತ್ಯ ಪರಿಶೀಲನೆಯನ್ನು ನಡೆಸಿ, ಸುಗಮವಾಗಿ ಸಂಚಾರಕ್ಕೆ ವ್ಯವಸ್ಥೆ ಮಾಡಿಕೊಟ್ಟರು.

ವೈಟ್‌ಫೀಲ್ಡ್ ಮೆಟ್ರೋ ನಿಲ್ದಾಣದಿಂದ ರಾತ್ರಿ 8:42ಕ್ಕೆ ಹೊರಟ ಯಕೃತ್, ರಾತ್ರಿ 9:48ಕ್ಕೆ ರಾಜರಾಜೇಶ್ವರಿ ನಗರ ಮೆಟ್ರೋ ನಿಲ್ದಾಣವನ್ನು ತಲುಪಿತ್ತು. ಈ 66 ನಿಮಿಷಗಳ ರವಾನೆಯ ಸಮಯದಲ್ಲಿ, ಯಕೃತ್ ಸುರಕ್ಷಿತವಾಗಿರುವುದನ್ನು ಖಾತರಿಪಡಿಸಲಾಯಿತು. ರಾಜರಾಜೇಶ್ವರಿ ನಗರ ಮೆಟ್ರೋ ನಿಲ್ದಾಣದಿಂದ ಆಂಬುಲೆನ್ಸ್ ಮೂಲಕ ಯಕೃತ್‌ನ್ನು ಸ್ಪರ್ಶ್ ಆಸ್ಪತ್ರೆಗೆ ರವಾನಿಸಲಾಯಿತು. ಸ್ಪರ್ಶ್ ಆಸ್ಪತ್ರೆಯ ವೈದ್ಯರ ತಂಡವು ಯಕೃತ್ ಕಸಿಯ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಿರ್ವಹಿಸಿದೆ.

ಈ ಘಟನೆಯು ಭಾರತದಲ್ಲಿ ಮೆಟ್ರೋ ಮೂಲಕ ಅಂಗಾಂಗ ರವಾನೆಯ ಎರಡನೇ ಉದಾಹರಣೆಯಾಗಿದೆ. ಈ ಹಿಂದೆ, ಹೈದರಾಬಾದ್ ಮೆಟ್ರೋದಲ್ಲಿ ಇಂತಹದ್ದೇ ಒಂದು ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸಲಾಗಿತ್ತು. ಆದರೆ, ಬೆಂಗಳೂರಿನ ಈ ಸಾಧನೆಯು ನಮ್ಮ ಮೆಟ್ರೋದ ಸಾಮರ್ಥ್ಯವನ್ನು ಮತ್ತು ತುರ್ತು ವೈದ್ಯಕೀಯ ಸೇವೆಗಳಿಗೆ ಸಾರಿಗೆ ವ್ಯವಸ್ಥೆಯ ಸಹಕಾರವನ್ನು ಒತ್ತಿಹೇಳುತ್ತದೆ.

ನಮ್ಮ ಮೆಟ್ರೋ, ಬೆಂಗಳೂರಿನ ಸಾರಿಗೆ ವ್ಯವಸ್ಥೆಯ ಒಂದು ಪ್ರಮುಖ ಭಾಗವಾಗಿದ್ದು, ಈಗ ಜೀವ ಉಳಿಸುವ ಕಾರ್ಯದಲ್ಲೂ ತನ್ನ ಕೊಡುಗೆಯನ್ನು ನೀಡಿದೆ.

Exit mobile version