ಮದುವೆಯಾಗುವುದಾಗಿ ನಂಬಿಸಿ ಯುವತಿಗೆ ವಂಚನೆ: ದೂರು ದಾಖಲು

Untitled design 2026 04 23T165227.186

ವರದಿ: ಮೂರ್ತಿ ಬೀರಯ್ಯನಪಾಳ್ಯ, ಗ್ಯಾರಂಟಿ ನ್ಯೂಸ್, ನೆಲಮಂಗಲ

ಬೆಂಗಳೂರು: ಬೆಂಗಳೂರಿನ ಬಾಗಲಗುಂಟೆಯಲ್ಲಿ ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ ದೈಹಿಕವಾಗಿ ಬಳಸಿಕೊಂಡು, ಕೊನೆಯಲ್ಲಿ ಜಾತಿ ಹೆಸರಿನಲ್ಲಿ ತಳ್ಳಿಹಾಕಿದ ಶಾಕಿಂಗ್ ಪ್ರಕರಣ ಬೆಳಕಿಗೆ ಬಂದಿದೆ.

ಬೆಂಗಳೂರು ನಗರದಲ್ಲಿ ಪ್ರೀತಿ, ಮದುವೆ ಭರವಸೆ ಮತ್ತು ಜಾತಿ ನಿಂದನೆಗೆ ಸಂಬಂಧಿಸಿದ ಗಂಭೀರ ಆರೋಪ ಒಂದು ಬೆಳಕಿಗೆ ಬಂದಿದೆ. ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಯುವತಿಯೋರ್ವಳು ನೀಡಿದ ದೂರಿನ ಪ್ರಕಾರ, ಅನಿಲ್ ಕುಮಾರ್ ಎಂಬಾತನು ಕಳೆದ ಎರಡು ವರ್ಷಗಳಿಂದ ಪರಿಚಯ ಬೆಳೆಸಿ, ಪ್ರೀತಿಯ ಹೆಸರಿನಲ್ಲಿ ಮದುವೆಯಾಗುವುದಾಗಿ ನಂಬಿಸಿದ್ದಾನೆ.

2023ರ ಆಗಸ್ಟ್ 2ರಂದು ರಾಜಗೋಪಾಲ ನಗರದ ಮೊಬೈಲ್ ಅಂಗಡಿಯಲ್ಲಿ ಮೊದಲ ಪರಿಚಯವಾಗಿದ್ದು, ನಂತರ ಸ್ನೇಹ ಪ್ರೀತಿಯಾಗಿ ತಿರುಗಿದೆ. ಯುವತಿ ಹೇಳುವಂತೆ, ಅಕ್ಟೋಬರ್ 2023ರಲ್ಲಿ ಮೊದಲ ಬಾರಿಗೆ ಮನೆಗೆ ಭೇಟಿ ನೀಡಿದ ವೇಳೆ ಆಕೆಯ ಇಚ್ಛೆಗೆ ವಿರುದ್ಧವಾಗಿ ದೈಹಿಕ ಸಂಪರ್ಕ ಹೊಂದಿದ್ದಾನೆ ಎಂಬ ಆರೋಪವೂ ಕೇಳಿಬಂದಿದೆ. ಬಳಿಕ ನಿಯಮಿತವಾಗಿ ಇಬ್ಬರೂ ವಾರಕ್ಕೆ, ತಿಂಗಳಿಗೆ ಈ ರೀತಿ ಭೇಟಿಯಾಗುತ್ತಿದ್ದರು. ಕುಟುಂಬದವರಿಗೂ ಇವರ ಮದುವೆ ವಿಚಾರ ತಿಳಿದಿತ್ತೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಇದಾದ ಬಳಿಕ ಕಳೆದ ಕೆಲವು ತಿಂಗಳಿಂದ ಮದುವೆ ವಿಷಯ ಪ್ರಸ್ತಾಪಿಸಿದಾಗ, ಆರೋಪಿ ಸಮಯ ಕೇಳುತ್ತ ಬಂದಿದ್ದಾನೆ. ಆದರೆ ಇತ್ತೀಚೆಗೆ ಆತ ಈಗಾಗಲೇ ಮದುವೆಯಾಗಿದ್ದೇನೆ ಎಂದು ಹೇಳಿ, ಮದುವೆಗೆ ನಿರಾಕರಿಸಿದ್ದಾನೆ ಎನ್ನಲಾಗಿದೆ. ಇದೇ ವೇಳೆ, ಜಾತಿ ಆಧಾರಿತ ಅವಹೇಳನ ಮಾಡಿರುವುದಾಗಿ ಕೂಡ ಯುವತಿ ಆರೋಪಿಸಿದ್ದು, “ನೀನು ಕೆಳಜಾತಿಗೆ ಸೇರಿದವಳು, ನಾನು ಒಕ್ಕಲಿಗ ಜಾತಿಯವನು, ನಿನ್ನನ್ನು ಮದುವೆಯಾಗುವುದಿಲ್ಲ” ಎಂದು ಅವಮಾನಿಸಿದ್ದಾನೆ ಎಂದು ದೂರಿನಲ್ಲಿ ಹೇಳಲಾಗಿದೆ.

ಫೆಬ್ರವರಿ 16, 2026ರಂದು ಮತ್ತೊಮ್ಮೆ ಮನೆಗೆ ಬಂದು ದೈಹಿಕ ಸಂಪರ್ಕ ಹೊಂದಿದ್ದು, ಮಾರ್ಚ್ 2ರಂದು ಮತ್ತೆ ಮನೆಗೆ ಬಂದು ಮದುವೆಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಹಿನ್ನೆಲೆ, ಆರೋಪಿ ಅನಿಲ್ ಕುಮಾರ್ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಯುವತಿ ಪೊಲೀಸರಿಗೆ ಮನವಿ ಮಾಡಿಕೊಂಡಿದ್ದಾಳೆ. ಪ್ರಕರಣ ದಾಖಲಿಸಿಕೊಂಡಿರುವ ಬಾಗಲಗುಂಟೆ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ

 

Exit mobile version