ಲಾಡ್ಜ್‌ನಲ್ಲಿ ಪ್ರಿಯತಮೆಯನ್ನೇ ಕೊಂದ ಪ್ರಿಯಕರ: ಆರೋಪಿ ಅರೆಸ್ಟ್

Untitled design 2026 11 24T124756.947

ಬೆಂಗಳೂರು: ಪ್ರೀತಿಸಿ ಮದುವೆಯಾಗುವುದಾಗಿ ನಂಬಿಸಿ, ಕೊನೆಗೆ ಪ್ರೇಯಸಿಯನ್ನೇ ಹತ್ಯೆ ಮಾಡಿರುವ ಆಘಾತಕಾರಿ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಮದುವೆಯಾಗುವ ವಿಚಾರವಾಗಿ ಇಬ್ಬರ ನಡುವೆ ಜಗಳವಾಗಿದ್ದು, ನಂತರ ಲಾಡ್ಜ್‌ನ ಮೂರನೇ ಮಹಡಿಯಿಂದ ಪ್ರಿಯಕರನೇ ಯುವತಿಯನ್ನು ಕೆಳಕ್ಕೆ ತಳ್ಳಿ ಕೊಲೆ ಮಾಡಿದ್ದಾನೆ. ನಗರದ ಅಬ್ಬಿಗೆರೆ ವೈಮ್ಯಾಕ್ಸ್ ಸರ್ಕಲ್‌ನಲ್ಲಿರುವ ಲಾಡ್ಜ್‌ನಲ್ಲಿ ಈ ಘಟನೆ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಸಂತೋಷ್‌ನನ್ನು ಗಂಗಮ್ಮನಗುಡಿ ಪೊಲೀಸರು ಬಂಧಿಸಿದ್ದಾರೆ.

ಕೊಲೆಯಾದ ಯುವತಿಯನ್ನು ಹಾಸನ ಜಿಲ್ಲೆಯ ಮೂಲದ ಐಶ್ವರ್ಯ ಎಂದು ಗುರುತಿಸಲಾಗಿದೆ. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಐಶ್ವರ್ಯ ಮತ್ತು ಸಂತೋಷ್ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ, ಇವರ ಪ್ರೀತಿಯ ನಡುವೆ ಮದುವೆಯ ವಿಚಾರವಾಗಿ ಪದೇ ಪದೇ ಗಲಾಟೆ ನಡೆಯುತ್ತಿತ್ತು. 

ಮದುವೆಯಾಗುವುದಾಗಿ ನಂಬಿಸಿ ಮೂರು ವರ್ಷ ಕಾಯಿಸಿದ ಪ್ರಿಯಕರ!

ಐಶ್ವರ್ಯ ಮತ್ತು ಸಂತೋಷ್ ಪ್ರೀತಿಸುತ್ತಿರುವ ವಿಚಾರಕ್ಕೆ ಆರಂಭದಲ್ಲಿ ಯುವತಿಯ ಕುಟುಂಬಸ್ಥರು ವಿರೋಧ ವ್ಯಕ್ತಪಡಿಸಿದ್ದರು. ಆದರೆ, ಸಂತೋಷ್‌ನನ್ನೇ ಮದುವೆಯಾಗುವುದಾಗಿ ಐಶ್ವರ್ಯ ಪಟ್ಟು ಹಿಡಿದಿದ್ದರಿಂದ ಕೊನೆಗೆ ಎರಡೂ ಕುಟುಂಬಗಳು ಮದುವೆಗೆ ಒಪ್ಪಿಗೆ ಸೂಚಿಸಿದ್ದವು.

ಆದರೆ, ಮದುವೆಯಾಗಲು ಸಂತೋಷ್ ಮೂರು ವರ್ಷಗಳ ಕಾಲಾವಕಾಶ ಕೇಳಿದ್ದ ಎನ್ನಲಾಗಿದೆ. ಮೂರು ವರ್ಷ ಕಳೆದರೂ ಮದುವೆಯಾಗದೆ ಐಶ್ವರ್ಯಳನ್ನು ಸತಾಯಿಸುತ್ತಿದ್ದ ಎಂದು ಆರೋಪಿಸಲಾಗಿದೆ. ಈ ನಡುವೆ ಐಶ್ವರ್ಯಳ ವೈಯಕ್ತಿಕ ಫೋಟೋ ಮತ್ತು ವಿಡಿಯೋಗಳನ್ನು ತನ್ನ ಬಳಿ ಇಟ್ಟುಕೊಂಡು ಆಕೆಗೆ ಕಿರುಕುಳ ನೀಡುತ್ತಿದ್ದ ಎಂಬ ಗಂಭೀರ ಆರೋಪವೂ ಕೇಳಿಬಂದಿದೆ.

ನಂತರ ಮದುವೆಗೆ ಮನೆಯವರು ಒಪ್ಪುತ್ತಿಲ್ಲ ಎಂಬ ಕಾರಣ ನೀಡಿ ಸಂತೋಷ್ ಮದುವೆಯಾಗಲು ನಿರಾಕರಿಸಿದ್ದ ಎನ್ನಲಾಗಿದೆ. ಈ ವಿಚಾರವಾಗಿ ಎರಡು ಕುಟುಂಬಗಳ ನಡುವೆ ಮಾತುಕತೆ ನಡೆದು ರಾಜಿ ಸಂಧಾನ ಮಾಡಲಾಗಿತ್ತು. ಬಳಿಕ ಮತ್ತೆ ಮದುವೆ ಮಾಡಲು ನಿರ್ಧರಿಸಲಾಗಿತ್ತು. ಆದರೆ, ಈ ಬಾರಿಯೂ ಸಂತೋಷ್ ಆರು ತಿಂಗಳ ಕಾಲಾವಕಾಶ ಕೇಳಿದ್ದ. ನಂತರ ಮತ್ತೆ ಮದುವೆಯಾಗುವುದಿಲ್ಲ ಎಂದು ಹೇಳಿ ಗಲಾಟೆ ಮಾಡಿದ್ದ ಎನ್ನಲಾಗಿದೆ.

ಸಂತೋಷ್‌ನಿಂದ ದೂರವಾಗಿದ್ದ ಐಶ್ವರ್ಯಗೆ ಬ್ಲ್ಯಾಕ್‌ಮೇಲ್ ಕಿರುಕುಳ?

ಸಂತೋಷ್‌ನ ವರ್ತನೆಯಿಂದ ಬೇಸತ್ತಿದ್ದ ಐಶ್ವರ್ಯ ಆತನಿಂದ ದೂರವಾಗಲು ನಿರ್ಧರಿಸಿದ್ದಳು. ಆದರೆ, ಐಶ್ವರ್ಯಳ ವೈಯಕ್ತಿಕ ಫೋಟೋಗಳನ್ನು ಇಟ್ಟುಕೊಂಡು ಸಂತೋಷ್ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಎಂಬ ಆರೋಪ ಕೇಳಿಬಂದಿದೆ.

ಪದೇ ಪದೇ ತನ್ನನ್ನು ಭೇಟಿಯಾಗುವಂತೆ ಒತ್ತಾಯಿಸುತ್ತಿದ್ದ ಸಂತೋಷ್, ಐಶ್ವರ್ಯಳಿಗೆ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಹೀಗಿರುವಾಗ ಸಂತೋಷ್ ಐಶ್ವರ್ಯಳನ್ನು ಕರೆಸಿಕೊಂಡಿದ್ದ ಎಂದು  ತಿಳಿದುಬಂದಿದೆ.

ಲಾಡ್ಜ್‌ನಲ್ಲಿ ಗಲಾಟೆ; ಮೂರನೇ ಮಹಡಿಯಿಂದ ತಳ್ಳಿದ ಆರೋಪಿ!

ನವೆಂಬರ್ 19ರಂದು ಐಶ್ವರ್ಯ ಸಂತೋಷ್ ಜೊತೆ ಅಬ್ಬಿಗೆರೆ ವೈಮ್ಯಾಕ್ಸ್ ಸರ್ಕಲ್‌ನಲ್ಲಿರುವ ಲಾಡ್ಜ್‌ಗೆ ತೆರಳಿದ್ದಳು. ಈ ವೇಳೆ ಇಬ್ಬರ ನಡುವೆ ಮತ್ತೆ ಮದುವೆಯ ವಿಚಾರವಾಗಿ ಮಾತುಕತೆ ನಡೆದು ಗಲಾಟೆ ಆರಂಭವಾಗಿದೆ. ಮಾತಿಗೆ ಮಾತು ಬೆಳೆದು ಜಗಳ ತಾರಕಕ್ಕೇರಿದೆ ಎನ್ನಲಾಗಿದೆ.

ಈ ಸಂದರ್ಭದಲ್ಲಿ ಸಂತೋಷ್ ಲಾಡ್ಜ್‌ನ ಮೂರನೇ ಮಹಡಿಯ ಕಿಟಕಿಯಿಂದ ಐಶ್ವರ್ಯಳನ್ನು ಕೆಳಕ್ಕೆ ತಳ್ಳಿದ್ದಾನೆ. ಕೆಳಗೆ ಬೀಳುವ ವೇಳೆ ಯುವತಿ ವಿದ್ಯುತ್ ಕಂಬದ ಮೇಲೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಳು. ತಕ್ಷಣ ಆಕೆಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಐಶ್ವರ್ಯ ಮೃತಪಟ್ಟಿದ್ದಾಳೆ.

ಆತ್ಮಹತ್ಯೆ ಪ್ರಕರಣ ಕೊಲೆ ಪ್ರಕರಣವಾಗಿ ಬದಲಾವಣೆ

ಘಟನೆ ನಡೆದ ಆರಂಭದಲ್ಲಿ ಪೊಲೀಸರು ಆತ್ಮಹತ್ಯೆ ಎಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು. ಬಳಿಕ ಲಭ್ಯವಾದ ಮಾಹಿತಿ ಹಾಗೂ ಸಾಕ್ಷ್ಯಗಳನ್ನು ಪರಿಶೀಲಿಸಿದಾಗ ಸಂತೋಷ್ ಯುವತಿಯನ್ನು ತಳ್ಳಿರುವ ಆರೋಪ ಬೆಳಕಿಗೆ ಬಂದಿದೆ.

ಮೃತ ಯುವತಿಯ ತಂದೆ ನೀಡಿದ ದೂರಿನ ಆಧಾರದ ಮೇಲೆ ಗಂಗಮ್ಮನಗುಡಿ ಪೊಲೀಸರು ಪ್ರಕರಣದ ತನಿಖೆ ನಡೆಸಿ ಆರೋಪಿ ಸಂತೋಷ್‌ನನ್ನು ಬಂಧಿಸಿದ್ದಾರೆ. ಇದೀಗ ಆತನ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿದ್ದು, ಮುಂದಿನ ತನಿಖೆ ಮುಂದುವರಿದಿದೆ.

Exit mobile version