ಬೆಂಗಳೂರು: ತಮ್ಮ ಹಕ್ಕುಗಳಿಗಾಗಿ ಬೀದಿಗಿಳಿದು ಹೋರಾಡುತ್ತಿರುವ ಆಶಾ ಕಾರ್ಯಕರ್ತೆಯರ ನೋವಿಗೆ ಮಾಧ್ಯಮ ಲೋಕದಲ್ಲೇ ಮೊಟ್ಟಮೊದಲ ಬಾರಿಗೆ ಗ್ಯಾರಂಟಿ ನ್ಯೂಸ್ ಮಾನವೀಯತೆಯ ಸ್ಪರ್ಶ ನೀಡಿದೆ. ಬೆಂಗಳೂರಿನ ಫ್ರೀಡಂಪಾರ್ಕ್ನಲ್ಲಿ ಕಳೆದ ಒಂಬತ್ತು ದಿನಗಳಿಂದ ಪ್ರತಿಭಟನೆ ನಡೆಸುತ್ತಿರುವ ಆಶಾ ಕಾರ್ಯಕರ್ತೆಯರು ಚಳಿ, ಮಳೆ, ಗಾಳಿ ಎನ್ನದೆ ಹೋರಾಟ ಮುಂದುವರಿಸಿದ್ದಾರೆ. ಹಗಲು-ರಾತ್ರಿ ಎನ್ನದೆ ಧರಣಿ ನಡೆಸುತ್ತಿರುವ ಈ ತಾಯಂದಿರ ಸಂಕಷ್ಟಕ್ಕೆ ಸ್ಪಂದಿಸಿರುವ ಗ್ಯಾರಂಟಿ ನ್ಯೂಸ್, ಮಧ್ಯರಾತ್ರಿಯೇ ಪ್ರತಿಭಟನಾ ಸ್ಥಳಕ್ಕೆ ಧಾವಿಸಿ ನೆರವಿನ ಹಸ್ತ ಚಾಚಿದೆ.
ಆಶಾಗಳ ಕಷ್ಟಕ್ಕೆ ಮಿಡಿದ ಗ್ಯಾರಂಟಿ ನ್ಯೂಸ್
ತಿಂಗಳಿಗೆ 15 ಸಾವಿರ ರೂಪಾಯಿ ಗೌರವಧನ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಸಾವಿರಾರು ಆಶಾ ಕಾರ್ಯಕರ್ತೆಯರು ಬೆಂಗಳೂರಿನ ಫ್ರೀಡಂಪಾರ್ಕ್ನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.
ರಾತ್ರಿ ಹೊತ್ತಿನಲ್ಲಿ ಕೊರೆವ ಚಳಿಯನ್ನು ತಡೆದುಕೊಳ್ಳುವುದು ಕಾರ್ಯಕರ್ತೆಯರಿಗೆ ದೊಡ್ಡ ಸವಾಲಾಗಿದೆ. ಹಗಲಿನಲ್ಲಿ ಪ್ರತಿಭಟನೆ ನಡೆಸಿದರೂ ರಾತ್ರಿ ವಿಶ್ರಾಂತಿಗೆ ಸೂಕ್ತ ವ್ಯವಸ್ಥೆಯಿಲ್ಲದೆ ಅನೇಕರು ಪರದಾಡುತ್ತಿದ್ದಾರೆ. ಇಂತಹ ಸಂಕಷ್ಟದ ಪರಿಸ್ಥಿತಿಯನ್ನು ಗಮನಿಸಿದ ಗ್ಯಾರಂಟಿ ನ್ಯೂಸ್, ಕೇವಲ ಸುದ್ದಿಯನ್ನು ಪ್ರಸಾರ ಮಾಡುವುದಕ್ಕೆ ಸೀಮಿತವಾಗದೆ ನೊಂದವರ ನೆರವಿಗೆ ನಿಲ್ಲುವ ಮಾನವೀಯ ಕಾರ್ಯಕ್ಕೆ ಮುಂದಾಗಿದೆ.
ಮಧ್ಯರಾತ್ರಿಯೇ ಫ್ರೀಡಂಪಾರ್ಕ್ಗೆ ಧಾವಿಸಿದ ಗ್ಯಾರಂಟಿ ನ್ಯೂಸ್
ಚಳಿಯಲ್ಲಿ ನಡುಗುತ್ತಿದ್ದ ಆಶಾ ಕಾರ್ಯಕರ್ತೆಯರ ಪರಿಸ್ಥಿತಿಯನ್ನು ಅರಿತ ಗ್ಯಾರಂಟಿ ನ್ಯೂಸ್ ತಂಡ ರಾತ್ರೋರಾತ್ರಿ ಫ್ರೀಡಂಪಾರ್ಕ್ಗೆ ತೆರಳಿ ನೆರವು ನೀಡಿದೆ. ಪ್ರತಿಭಟನಾ ಸ್ಥಳದಲ್ಲಿದ್ದ ಕಾರ್ಯಕರ್ತೆಯರಿಗೆ 300ಕ್ಕೂ ಹೆಚ್ಚು ಬ್ಲಾಂಕೆಟ್ಗಳನ್ನು ವಿತರಿಸಲಾಗಿದೆ. ಇದರ ಜೊತೆಗೆ ಹಸಿವಿನಿಂದ ಬಳಲುತ್ತಿದ್ದವರಿಗೆ ಅನುಕೂಲವಾಗುವಂತೆ ನೂರಾರು ಪ್ಯಾಕೆಟ್ ಬಿಸ್ಕೇಟ್ಗಳನ್ನೂ ಹಂಚಲಾಗಿದೆ.
ರಾತ್ರಿ-ಹಗಲು ಎನ್ನದೆ ಜನರ ಆರೋಗ್ಯ ಮತ್ತು ಸಾರ್ವಜನಿಕ ಸೇವೆಯಲ್ಲಿ ತೊಡಗಿರುವ ಆಶಾ ಕಾರ್ಯಕರ್ತೆಯರು ತಮ್ಮ ನ್ಯಾಯಯುತ ಬೇಡಿಕೆಗಳಿಗಾಗಿ ಬೀದಿಯಲ್ಲಿ ಕುಳಿತು ಹೋರಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಸಂದರ್ಭದಲ್ಲಿ ಅವರಿಗೆ ಕನಿಷ್ಠ ಮೂಲಸೌಕರ್ಯಗಳನ್ನಾದರೂ ಒದಗಿಸಬೇಕೆಂಬ ಉದ್ದೇಶದಿಂದ ಗ್ಯಾರಂಟಿ ನ್ಯೂಸ್ ಈ ನೆರವಿನ ಕಾರ್ಯವನ್ನು ಕೈಗೊಂಡಿದೆ.
ಆಶಾ ಕಾರ್ಯಕರ್ತೆಯರು ಕೇವಲ ತಮ್ಮ ಕುಟುಂಬಕ್ಕಾಗಿ ದುಡಿಯುವವರಲ್ಲ. ಹಳ್ಳಿಹಳ್ಳಿಗಳಿಗೆ ತೆರಳಿ ಗರ್ಭಿಣಿಯರು, ಬಾಣಂತಿಯರು, ಮಕ್ಕಳು ಹಾಗೂ ಸಾರ್ವಜನಿಕರ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಾರೆ. ಸರ್ಕಾರದ ಆರೋಗ್ಯ ಯೋಜನೆಗಳನ್ನು ಜನರಿಗೆ ತಲುಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ.
ಒಂಬತ್ತು ದಿನಗಳಿಂದ ಪ್ರತಿಭಟನೆ ನಡೆಯುತ್ತಿದ್ದರೂ ಆಶಾ ಕಾರ್ಯಕರ್ತೆಯರ ಸಮಸ್ಯೆಗೆ ಇನ್ನೂ ಶಾಶ್ವತ ಪರಿಹಾರ ಸಿಕ್ಕಿಲ್ಲ.
ಅಧಿಕಾರಿಗಳು ಬೆಚ್ಚಗಿನ ಕೊಠಡಿಗಳಲ್ಲಿ ವಿಶ್ರಾಂತಿ ಪಡೆಯುತ್ತಿರುವಾಗ, ಸಾರ್ವಜನಿಕರ ಆರೋಗ್ಯಕ್ಕಾಗಿ ದುಡಿಯುವ ಆಶಾ ಕಾರ್ಯಕರ್ತೆಯರು ರಸ್ತೆಯಲ್ಲೇ ಚಳಿಯಲ್ಲಿ ನಡುಗುವ ಸ್ಥಿತಿ ಎದುರಿಸುತ್ತಿದ್ದಾರೆ. ಮನೆ, ಮಕ್ಕಳು, ಸಂಸಾರವನ್ನು ಬಿಟ್ಟು ಬಂದಿರುವ ಈ ತಾಯಂದಿರ ನೋವಿಗೆ ಸರ್ಕಾರ ತಕ್ಷಣ ಸ್ಪಂದಿಸಬೇಕಿದೆ. ಅವರ ಗೌರವಧನ ಹೆಚ್ಚಳದ ಬೇಡಿಕೆಗೆ ಸ್ಪಷ್ಟ ನಿರ್ಧಾರ ಕೈಗೊಳ್ಳುವುದರ ಜೊತೆಗೆ ಪ್ರತಿಭಟನಾ ಸ್ಥಳದಲ್ಲಿ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಬೇಕಿದೆ.
