ಕೆಂಪೇಗೌಡ ವಿಮಾನ ನಿಲ್ದಾಣ ಸೇರಿದಂತೆ ಪ್ರಮುಖ ಮಾಲ್‌ಗಳಿಗೆ ಹುಸಿ ಬಾಂಬ್ ಬೆದರಿಕೆ..!

Untitled design 2025 12 02T194305.365

ಬೆಂಗಳೂರು, ಡಿಸೆಂಬರ್ 02: ಬೆಂಗಳೂರು ನಗರದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (KIA) ಮತ್ತು ಹಲವಾರು ಪ್ರಮುಖ ಶಾಪಿಂಗ್ ಮಾಲ್‌ಗಳ ಮೇಲೆ ಬಾಂಬ್ ಸ್ಫೋಟಿಸುವುದಾಗಿ ಬೆದರಿಕೆ ಹಾಕುವ ಸೈಬರ್ ಸಂದೇಶ ನಗರ ಪೊಲೀಸ್ ಆಯುಕ್ತರ ಇ-ಮೇಲ್‌ಗೆ ಬಂದಿದೆ. ‘ಜೈಷ್-ಇ-ಮೊಹಮ್ಮದ್’ (Jaish-e-Mohammed) ಭಯೋತ್ಪಾದಕ ಸಂಘಟನೆಯ ಹೆಸರನ್ನು ದುರುಪಯೋಗ ಪಡಿಸಿಕೊಂಡು ರವಾನಿಸಲಾದ ಈ ಹುಸಿ ಬೆದರಿಕೆಯಿಂದ ಆತಂಕ ಸೃಷ್ಟಿಸಲು ಪ್ರಯತ್ನಿಸಲಾಗಿದೆ.

ಈ ಬೆದರಿಕೆ ಇ-ಮೇಲ್ ಅನ್ನು ನವೆಂಬರ್ 30, 2025 ರಂದು ಬೆಳಿಗ್ಗೆ 11.53 ಕ್ಕೆ ಬೆಂಗಳೂರು ನಗರ ಪೊಲೀಸ್ ಆಯುಕ್ತರ (ಕಂಪೊಲ್) ಅಧಿಕೃತ ಇ-ಮೇಲ್ ವಿಳಾಸಕ್ಕೆ ಕಳುಹಿಸಲಾಗಿದೆ. ‘ಮೋಹಿತ್ ಕುಮಾರ್’ ಎಂಬ ಹೆಸರಿನ ಇ-ಮೇಲ್ ಐಡಿಯಿಂದ (mohitkumar.er989799@gmail.com) ಬಂದ ಈ ಸಂದೇಶ, ತನ್ನನ್ನು ‘ಜೈಷ್-ಇ-ಮೊಹಮ್ಮದ್ ವೈಟ್ ಕಾಲರ್ ಟೆರರ್ ಟೀಮ್’ ಎಂದು ಪರಿಚಯಿಸಿಕೊಂಡಿದೆ.

ಬೆದರಿಕೆ ಸಂದೇಶದ ವಿವರ

ಇಂಗ್ಲಿಷ್‌ನಲ್ಲಿ ಬರೆಯಲಾದ ಈ ಬೆದರಿಕೆಯಲ್ಲಿ, ಆಯ್ದ ಪ್ರಮುಖ ಸ್ಥಲಗಳಾದ ಕೆಂಪೇಗೌಡ ವಿಮಾನ ನಿಲ್ದಾಣ, ಒರಿಯನ್ ಮಾಲ್, ಲುಲು ಮಾಲ್, ಫೋರಂ ಸೌತ್ ಮಾಲ್ ಮತ್ತು ಮಂತ್ರಿ ಸ್ಕ್ವೇರ್ ಮಾಲ್‌ಗಳನ್ನು ಗುರಿಯಾಗಿಸಿ, ಸಂಜೆ 7 ಗಂಟೆಯ ನಂತರ ಬಾಂಬ್ ಸ್ಪೋಟಗೊಳ್ಳಲಿದೆ ಎಂದು ಬೆದರಿಕೆ ಹಾಕಲಾಗಿದ್ದು, ಕೊನೆಯಲ್ಲಿ ನಮ್ಮ ಅಲ್ಲಾ ಮತ್ತು ನಮ್ಮ ಮಾಸ್ಟರ್ ಮೋಹಿತ್ ಅವರಿಗೆ ಧನ್ಯವಾದಗಳು ಎಂದು ವಿಚಿತ್ರವಾಗಿ ಬೆದರಿಕೆ ಸಂದೇಶ ಕಳುಹಿಸಿದ್ದಾರೆ.

ಸಂದೇಶದಲ್ಲಿ ಹಣ ಬೇಡುವ ಪ್ರಯತ್ನವೂ ಮಾಡಲಾಗಿದ್ದು, ಇದು ಸಂಭವಿಸದಿರಲು 91936 8077 ಸಂಖ್ಯೆಗೆ ಕರೆ ಮಾಡಿ, ಹಣವನ್ನು ಪಾವತಿ ಮಾಡಿ ಎಂದು ಸೂಚಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಜೊತೆಗೆ ಈ ಬದರಿಕೆ ಕೇವಲ ಹಣಕ್ಕಾಗಿ ಮಾಡಿದ್ದಾರೆ ಎಂದೂ ಹೇಳಿದ್ದಾರೆ.

ಈ ಬೆದರಿಕೆ ಸಂದೇಶ ಬಂದ ತಕ್ಷಣವೇ ಪೊಲೀಸರು ತೀವ್ರ ಕಾರ್ಯಚರಣೆ ನಡೆಸಿದ್ದಾರೆ. ವಿಮಾನ ನಿಲ್ದಾಣ ಮತ್ತು ಹೆಸರಿಸಲಾದ ಎಲ್ಲಾ ಶಾಪಿಂಗ್ ಮಾಲ್‌ಗಳ ಸುತ್ತಮುತ್ತ ತೀವ್ರ ನಿಗಾ ವಹಿಸಿ, ಭದ್ರತೆ ನೀಡಲಾಗಿದೆ. ಬಾಂಬ್ ಪತ್ತೆ ಹಚ್ಚುವ ನಿಷ್ಕ್ರಿಯ ದಳ (BDS) ಮತ್ತು ಶ್ವಾನದಳಗಳು (ಡಾಗ್ ಸ್ಕ್ವಾಡ್) ಪ್ರತಿಯೊಂದು ಸ್ಥಳವನ್ನೂ ಕೂಲಂಕಷವಾಗಿ ಪರಿಶೀಲನೆ ನಡೆಸಿದ್ದಾರೆ.

ಯಾವುದೇ ಸ್ಫೋಟಕ ವಸ್ತುಗಳು ಪತ್ತೆಯಾಗದ ಕಾರಣ, ಈ ಬೆದರಿಕೆಯನ್ನು ‘ಹುಸಿ’ ಎಂದು ಪೊಲೀಸರು ದೃಢಪಡಿಸಿದ್ದಾರೆ. ಸಾರ್ವಜನಿಕರ ಭದ್ರತೆಗೆ ಧಕ್ಕೆ ತರುವ ಈ ಘಟನೆ ಸಂಬಂಧಿ ಬೆಂಗಳೂರಿನ ಸೆಂಟ್ರಲ್ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆದರಿಕೆ ಸಂದೇಶ ಕಳುಹಿಸಲು ಬಳಸಲಾದ ಇ-ಮೇಲ್ ಐಡಿಯಲ್ಲಿನ ‘ಮೋಹಿತ್ ಕುಮಾರ್’ ಎಂಬ ಹೆಸರಿನ ವ್ಯಕ್ತಿಯೇ ನಿಜವಾದ ಆರೋಪಿಯೋ ಅಥವಾ ಅವನ ಐಡಿಯನ್ನು ಮತ್ತೊಬ್ಬರು ದುರುಪಯೋಗ ಪಡಿಸಿಕೊಂಡರೋ ಎಂಬುದನ್ನು ಪತ್ತೆಹಚ್ಚಲು ತೀವ್ರ ತನಿಖೆ ನಡೆಸಲಾಗುತ್ತಿದೆ. ಆರೋಪಿ ಭಯೋತ್ಪಾದಕ ಸಂಘಟನೆಯ ಹೆಸರನ್ನು ಗಲಬೆ ಸೃಷ್ಟಿಸಲು ಬಳಸಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.

ಸೈಬರ್ ತಂತ್ರಜ್ಞಾನದ ನೆರವಿನೊಂದಿಗೆ ಇ-ಮೇಲ್ ಮೂಲ, ಐಪಿ ವಿಳಾಸ ಮತ್ತು ಸಂಬಂಧಿತ ಫೋನ್ ಸಂಖ್ಯೆಯನ್ನು ಟ್ರ್ಯಾಕ್ ಮಾಡುವ ಪ್ರಯತ್ನ ನಡೆಸಲಾಗುತ್ತಿದೆ. ಸಾರ್ವಜನಿಕರಿಗೆ ಸ್ಥಳಗಳಲ್ಲಿ ಸಾಮಾನ್ಯ ಭದ್ರತೆ ಹೆಚ್ಚಿಸಲಾಗಿದ್ದು, ಯಾವುದೇ ಅನಾಹುತ ಸಂಭವಿಸದಂತೆ ಭದ್ರತೆ ನೀಡಲಾಗಿದೆ. 

Exit mobile version