ಬೆಂಗಳೂರು, ಏಪ್ರಿಲ್ 30: ತೀವ್ರ ಬಿಸಿಲಿನಿಂದ ಕಾದು ಹೋಗಿದ್ದ ರಾಜ್ಯ ರಾಜಧಾನಿ ಬೆಂಗಳೂರಿಗೆ ನಿನ್ನೆ ಸುರಿದ ಭಾರಿ ಮಳೆ ತಂಪು ತಂದಿದೆ. ಈ ರಣಬೀಕರ ಮಳೆಯಿಂದ ನಗರದ ಜನಜೀವನವನ್ನು ಸಂಪೂರ್ಣವಾಗಿ ಅಸ್ತವ್ಯಸ್ತಗೊಳಿಸಿದೆ. ಗಾಳಿ, ಗುಡುಗು ಮತ್ತು ಆಲಿಕಲ್ಲು ಸಹಿತ ಸುರಿದ ಧಾರಾಕಾರ ಮಳೆಯಿಂದಾಗಿ ನಗರದ ಹಲವೆಡೆ ದೊಡ್ಡ ಮಟ್ಟದ ಅನಾಹುತಗಳು ಸಂಭವಿಸಿವೆ. ಈ ಘಟನೆಗಳಲ್ಲಿ ಒಟ್ಟು 9 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.
ಮಳೆಯ ಅಬ್ಬರಕ್ಕೆ ನಗರದಲ್ಲಿ ಹಲವಾರು ಪ್ರದೇಶಗಳು ಜಲಾವೃತಗೊಂಡಿದ್ದು, ಪ್ರಮುಖ ಅಂಡರ್‌ಪಾಸ್‌ಗಳು ನೀರಿನಿಂದ ತುಂಬಿ ಸಂಚಾರಕ್ಕೆ ಅಡ್ಡಿಯಾಗಿದೆ. ನಗರದ ಹಲವೆಡೆ ಮರಗಳು ಧರೆಗುರುಳಿದ್ದು, ಅಂಡರ್‌ಪಾಸ್‌ಗಳು ಜಲಾವೃತಗೊಂಡು ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ವಾಹನ ಸವಾರರು ಈ ರಸ್ತೆಗಳಲ್ಲಿ ಸಂಚರಿಸುವ ಮುನ್ನ ಎಚ್ಚರಿಕೆ ವಹಿಸುವಂತೆ ಬೆಂಗಳೂರು ಸಂಚಾರ ಪೊಲೀಸರು ಸೂಚಿಸಿದ್ದಾರೆ.
ಜಲಾವೃತವಾದ ಅಂಡರ್‌ಪಾಸ್‌ಗಳು
ನಿನ್ನೆಯ ಮಳೆಯ ರಭಸಕ್ಕೆ ಕೆಲವು ಅಂಡರ್‌ಪಾಸ್‌ಗಳಲ್ಲಿ ನೀರು ನಿಂತೇ ಇದೆ.
ಲೌರಿ ಅಂಡರ್‌ಪಾಸ್
ಮಳೆ ನೀರು ನಿಂತಿರುವುದರಿಂದ ಸುಗಮ ಸಂಚಾರಕ್ಕೆ ಅಡಚಣೆಯಾಗಿದ್ದು, ಮಹದೇವಪುರ ಕಡೆಗೆ ನಿಧಾನಗತಿಯಿಂದ ಸಂಚಾರ ಮಾಡುವ ಪರಿಸ್ಥಿತಿ ಎದುರಾಗಿದೆ.
ಕೆ.ಆರ್. ಸರ್ಕಲ್ ಅಂಡರ್‌ಪಾಸ್
ನಿನ್ನೆ ಸುರಿದ ಭಾರೀ ಮಳೆಗೆ ಕೆ.ಆರ್. ಸರ್ಕಲ್ ಅಂಡರ್‌ಪಾಸ್ ಸಂಪೂರ್ಣ ಜಲಾವೃತವಾಗಿದ್ದು, ಪೊಲೀಸರು ಬ್ಯಾರಿಕೇಡ್ ಹಾಕಿ ಮುಚ್ಚಿದ್ದಾರೆ.
ಸಿಲ್ಕ್ ಬೋರ್ಡ್ ಜಂಕ್ಷನ್
ಬೆಂಗಳೂರಿನಲ್ಲಿ ಸುರಿದ ಭಾರೀ ಮಳೆಗೆ ಸಿಲ್ಕ್ ಬೋರ್ಡ್ ಜಂಕ್ಷನ್ ಮಳೆ ನೀರು ಹಾಗೂ ಡ್ರೈನೇಜ್ ನೀರು ನಿಂತು ರಸ್ತೆ ಕೆರೆಯಂತಾಗಿದೆ. ಸೈಕಲ್ ಸವಾರರು ಸಹ ನೀರಿನಲ್ಲಿ ಪರದಾಡಿದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್
ಪ್ರತಿ ಬಾರಿ ಮಳೆ ಬಂದಾಗಲೂ ಜಲಾವೃತವಾಗುವ ಈ ಫ್ಲೈಓವರ್ ನಿನ್ನೆಯೂ ಕೆರೆಯಂತಾಗಿ, ಸಿಲ್ಕ್ ಬೋರ್ಡ್‌ಗೆ ಸಂಪರ್ಕ ಕಲ್ಪಿಸುವ ರಸ್ತೆ ಸಂಚಾರಕ್ಕೆ ಸಂಪೂರ್ಣ ಬಂದ್ ಆಗಿತ್ತು.
ಮರಗಳು ಧರೆಗುರುಳಿದ ಸ್ಥಳಗಳು
ಗಾಳಿಯ ತೀವ್ರತೆಗೆ ನಗರದ ವಿವಿಧೆಡೆ ಬೃಹತ್ ಮರಗಳು ಬುಡಸಮೇತ ಧರೆಗೆ ಉರುಳಿವೆ.
ಭಾಷ್ಯಂ ವೃತ್ತದಲ್ಲಿ ನಿನ್ನೆ ಸುರಿದ ಭಾರೀ ಮಳೆಗೆ ಮರ ಬಿದ್ದಿದ್ದು, ಇದರಿಂದ ಕಾವೇರಿ ಥಿಯೇಟರ್ ಜಂಕ್ಷನ್ ಕಡೆಗೆ ಹೋಗುವ ವಾಹನ ಸವಾರರು ನಿಧಾನಗತಿಯಿಂದ ಸಂಚರಿಸುವ ಸ್ಥಿತಿ ಎದುರಾಗಿದೆ. ಬಸವನಗುಡಿಯಲ್ಲಿವಿದ್ಯಾಪೀಠ ಸರ್ಕಲ್-ಬಸವನಗುಡಿ ಸಂಪರ್ಕ ರಸ್ತೆ ಅಡ್ಡಲಾಗಿ ಬೃಹತ್ ಮರ ಬಿದ್ದು ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಸ್ಥಳಕ್ಕೆ ಬಾರದ BBMP ಅಧಿಕಾರಿಗಳ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನೂ ಮಲ್ಲೇಶ್ವರಂನಲ್ಲಿ2ನೇ ಟೆಂಪಲ್ ಸ್ಟ್ರೀಟ್ ಸೇರಿದಂತೆ ಹಲವು ಕ್ರಾಸ್‌ಗಳಲ್ಲಿ ಮರಗಳು ಧರೆಗುರುಳಿ ರಸ್ತೆಗಳು ಬಂದ್ ಆಗಿವೆ. ಸಾವಿರಾರು ವಾಹನಗಳು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ರಾಜಾಜಿನಗರ ESI ಆಸ್ಪತ್ರೆ ಸುತ್ತಲೂ 20ಕ್ಕೂ ಹೆಚ್ಚು ಮರಗಳು ಬಿದ್ದು, ಎರಡು ಆಟೋಗಳು ಜಖಂಗೊಂಡಿವೆ.
ನಗರ ಸಂಚಾರ ಪೊಲೀಸರು ಜನರಿಗೆ ಎಚ್ಚರಿಕೆಯಿಂದ ಸಂಚರಿಸುವಂತೆ ಸೂಚನೆ ನೀಡಿದ್ದಾರೆ. ಅಂಡರ್‌ಪಾಸ್‌ಗಳು ಮತ್ತು ಜಲಾವೃತ ಪ್ರದೇಶಗಳನ್ನು ತಪ್ಪಿಸಿ ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಮನವಿ ಮಾಡಲಾಗಿದೆ. ಇನ್ನೂ ಕೆಲವು ಪ್ರದೇಶಗಳಲ್ಲಿ ತೆರವು ಕಾರ್ಯ ಮುಂದುವರಿದಿದ್ದು, ಪರಿಸ್ಥಿತಿ ಹಂತ ಹಂತವಾಗಿ ಸುಧಾರಿಸುತ್ತಿದೆ.
