ಬೆಂಗಳೂರಿಗರೇ ಎಚ್ಚರ! ಎಲ್ಲೆಂದರಲ್ಲಿ ಕಸ ಹಾಕಿದ್ರೆ ಬಿಳುತ್ತೆ ಕೇಸ್‌: ನಾಲ್ವರ ವಿರುದ್ಧ FIR

ಖರ್ಜೂರನಾ (3)

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಎಲ್ಲೆಂದರಲ್ಲಿ ಕಸ ಹಾಕುವವರಿಗೆ ಜಿಬಿಎ (BBMP) ಇನ್ನೊಂದು ಶಾಕ್ ನೀಡಿದೆ. ಇದುವರೆಗೆ ಕಸ ಎಸೆದರೆ ದಂಡ ವಿಧಿಸಲಾಗುತ್ತಿತ್ತು. ಆದರೆ ಈಗಿನಿಂದ ಸಿಕ್ಕಸಿಕ್ಕಲ್ಲಿ ಕಸ ಎಸೆದರೆ ಬರೀ ದಂಡ ಅಲ್ಲ, ಪೊಲೀಸ್ ಕೇಸ್ ಕೂಡ ಬೀಳಲಿದೆ. ಈಗಾಗಲೇ ಕಸ ತೆರವು ಮಾಡಿದ ಜಾಗದಲ್ಲಿ ಮತ್ತೆ ಕಸ ಹಾಕಿದ ನಾಲ್ಕು ಮಂದಿ ವಿರುದ್ಧ ಎಫ್‌ಐಆರ್ (FIR) ದಾಖಲಾಗಿದೆ.

ನಗರವನ್ನು ಸ್ವಚ್ಛ ಮತ್ತು ಸುಂದರವಾಗಿಡುವ ಉದ್ದೇಶದಿಂದ ಜಿಬಿಎ ವ್ಯಾಪ್ತಿಯಲ್ಲಿ ವಿಶೇಷ ಸ್ವಚ್ಛತಾ ಕಾರ್ಯಾಚರಣೆ ನಡೆಯುತ್ತಿದೆ. ಹಲವು ವರ್ಷಗಳಿಂದ ಕಸದ ರಾಶಿಯಿಂದ ಗುರುತಿಸಿಕೊಂಡಿದ್ದ ‘ಬ್ಲಾಕ್ ಸ್ಪಾಟ್’ ಪ್ರದೇಶಗಳನ್ನು ಗುರುತಿಸಿ, ಅಲ್ಲಿನ ಕಸವನ್ನು ಸಂಪೂರ್ಣವಾಗಿ ತೆರವುಗೊಳಿಸಲಾಗುತ್ತಿದೆ. ಆದರೆ ಕೆಲವರು ಇದೇ ಸ್ಥಳಗಳಲ್ಲಿ ಮತ್ತೆ ಕಸ ಎಸೆಯುತ್ತಿರುವುದು ಅಧಿಕಾರಿಗಳ ಆತಂಕಕ್ಕೆ ಕಾರಣವಾಗಿದೆ.

ಈ ಹಿನ್ನೆಲೆ ಕಸ ಎಸೆಯುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲು ಅಧಿಕಾರಿಗಳು ನಿರ್ಧರಿಸಿದ್ದಾರೆ. ಕಸ ತೆರವುಗೊಳಿಸಿದ ಬಳಿಕ ಮತ್ತೆ ಅದೇ ಸ್ಥಳದಲ್ಲಿ ಕಸ ಎಸೆದರೆ ಮೊದಲು ದಂಡ ವಿಧಿಸಲಾಗುತ್ತದೆ. ದಂಡ ಪಾವತಿಸಲು ನಿರಾಕರಿಸಿದರೆ ಅಥವಾ ನಿಯಮ ಉಲ್ಲಂಘನೆ ಗಂಭೀರವಾಗಿದ್ದರೆ, ಸಂಬಂಧಪಟ್ಟವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಎಫ್‌ಐಆರ್ ಮಾಡಲಾಗುತ್ತದೆ.

ಈ ಹೊಸ ನಿಯಮದಡಿ ಈಗಾಗಲೇ ನಾಲ್ವರು ಪೊಲೀಸರ ಅತಿಥಿಯಾಗಿದ್ದಾರೆ. ಬೆಂಗಳೂರಿನ ಉತ್ತರ ವಲಯದ ಸರ್ವಜ್ಞನಗರ ವಾರ್ಡ್ ಸಂಖ್ಯೆ 26ರ ಬಾಣಸವಾಡಿ ಮುಖ್ಯರಸ್ತೆಯಲ್ಲಿ ಕಸ ತೆರವುಗೊಳಿಸಲಾಗಿತ್ತು. ಈ ಪ್ರದೇಶದಲ್ಲಿ ಮತ್ತೆ ಕಸ ಸೇರುವುದನ್ನು ತಡೆಯಲು ಮಾರ್ಷಲ್‌ಗಳನ್ನು ನಿಯೋಜಿಸಿ ರಾತ್ರಿ ವೇಳೆ ಗಸ್ತು ವ್ಯವಸ್ಥೆ ಮಾಡಲಾಗಿತ್ತು.

ಗಸ್ತು ವೇಳೆ ನಾಲ್ವರು ವ್ಯಕ್ತಿಗಳು ಕಸವನ್ನು ರಸ್ತೆಯ ಬದಿಯಲ್ಲಿ ಎಸೆಯುತ್ತಿರುವುದು ಮಾರ್ಷಲ್‌ಗಳ ಗಮನಕ್ಕೆ ಬಂದಿದೆ. ಕೂಡಲೇ ಅವರನ್ನು ತಡೆದು ದಂಡ ಪಾವತಿಸುವಂತೆ ಸೂಚಿಸಲಾಯಿತು. ಆದರೆ ಅವರು ದಂಡ ಪಾವತಿಸಲು ನಿರಾಕರಿಸಿದ್ದರಿಂದ ಅಧಿಕಾರಿಗಳು ಬಾಣಸವಾಡಿ ಪೊಲೀಸ್ ಠಾಣೆಗೆ ದೂರು ನೀಡಿದರು. ಪರಿಣಾಮ ನಾಲ್ವರ ವಿರುದ್ಧ ಅಧಿಕೃತವಾಗಿ ಪ್ರಕರಣ ದಾಖಲಿಸಿ ಎಫ್‌ಐಆರ್ ದಾಖಲಿಸಲಾಗಿದೆ.

ನಗರದಲ್ಲಿ ಸ್ವಚ್ಛತೆಯನ್ನು ಕಾಪಾಡಲು ಕಳೆದ ಕೆಲವು ತಿಂಗಳುಗಳಿಂದ ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ನಿಗಮ ಹಲವು ವಿಶೇಷ ಅಭಿಯಾನಗಳನ್ನು ನಡೆಸುತ್ತಿದೆ. ಸಾರ್ವಜನಿಕರು ಕಸವನ್ನು ನಿಗದಿತ ಡಬ್ಬಿ ಅಥವಾ ಕಸದ ಸಂಗ್ರಹ ವಾಹನಗಳಿಗೆ ಮಾತ್ರ ನೀಡಬೇಕು ಎಂದು ನಿರಂತರವಾಗಿ ಜಾಗೃತಿ ಮೂಡಿಸಲಾಗುತ್ತಿದೆ. ಆದರೂ ಕೆಲವರು ರಸ್ತೆ ಬದಿ, ಖಾಲಿ ಜಾಗ ಹಾಗೂ ಸೌಂದರ್ಯೀಕರಣ ಮಾಡಿದ ಪ್ರದೇಶಗಳಲ್ಲಿ ಕಸ ಎಸೆಯುತ್ತಿರುವುದು ಅಧಿಕಾರಿಗಳ ಕಾರ್ಯಕ್ಕೆ ಅಡ್ಡಿಯಾಗುತ್ತಿದೆ.

ಇದನ್ನು ತಡೆಯುವ ಉದ್ದೇಶದಿಂದ ಬ್ಲಾಕ್ ಸ್ಪಾಟ್ ಪ್ರದೇಶಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳ ಅಳವಡಿಕೆ, ಮಾರ್ಷಲ್ ಗಸ್ತು ಹಾಗೂ ಸಾರ್ವಜನಿಕರ ಸಹಕಾರ ಪಡೆಯುವ ಕ್ರಮಗಳನ್ನೂ ಜಾರಿಗೆ ತರಲಾಗಿದೆ. ಮುಂದಿನ ದಿನಗಳಲ್ಲಿ ಇಂತಹ ಉಲ್ಲಂಘನೆಗಳ ವಿರುದ್ಧ ಇನ್ನಷ್ಟು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

Exit mobile version