ನವದೆಹಲಿ (ಜು.27): ದೇಶವನ್ನು ಅಲುಗಾಡಿಸಿದ್ದ ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಪ್ರತಿಭಟನೆಯು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಯೊಂದಿಗೆ ಶಮನಗೊಳ್ಳುತ್ತಿದ್ದಂತೆಯೇ, ಹೊಸ ಸವಾಲೊಂದು ಕೇಂದ್ರ ಸರ್ಕಾರದ ಮುಂದೆ ತಲೆ ಎತ್ತಿದೆ. ಪ್ರತಿಷ್ಠಿತ ರಾಜಕೀಯ ವಿಶ್ಲೇಷಕ ತೆಹ್ಸೀನ್ ಪೂನಾವಾಲಾ ಮತ್ತು ದೆಹಲಿ ಸಾರಿಗೆದಾರರ ಸಂಘದವರು ‘ಇ-20’ (ಎಥನಾಲ್ ಮಿಶ್ರಿತ ಪೆಟ್ರೋಲ್) ವಿರುದ್ಧ ಪ್ರತ್ಯೇಕ ಪ್ರತಿಭಟನಾ ಮೆರವಣಿಗೆ ನಡೆಸುವಂತೆ ಘೋಷಿಸಿದ್ದಾರೆ. ಜುಲೈ 31 ಮತ್ತು ಆಗಸ್ಟ್ 4ರಂದು ದೆಹಲಿಯಲ್ಲಿ ಸಂಸತ್‌ವರೆಗೆ ‘ಗಾಡಿ ಮಾರ್ಚ್’ ನಡೆಸುವುದಾಗಿ ತಿಳಿಸಿದ್ದಾರೆ.
ರಾಜಕೀಯ ವಿಶ್ಲೇಷಕ ತೆಹ್ಸೀನ್ ಪೂನಾವಾಲಾ ನೇತೃತ್ವದ ‘ಟೀಂ ಭಾರತ್’ ಸಂಘಟನೆ ಜುಲೈ 31ರಂದು ‘ಗಾಡಿ ಮಾರ್ಚ್’ ಆಯೋಜಿಸಲಾಗಿದೆ. ದೆಹಲಿಯ ಇಂಡಿಯಾ ಗೇಟ್‌ನಿಂದ ಆರಂಭವಾಗುವ ಮೆರವಣಿಗೆ ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಹಾಗೂ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಅವರ ನಿವಾಸಗಳ ಎದುರು ಸಾಗಿದ ಬಳಿಕ ಪಾರ್ಲಿಮೆಂಟ್ ಸ್ಟ್ರೀಟ್ ತಲುಪಲಿದೆ. ಈ ಮೂಲಕ ಸರ್ಕಾರದ ಗಮನ ಸೆಳೆಯುವ ಉದ್ದೇಶ ಹೊಂದಿರುವ ಪ್ರತಿಭಟನಾಕಾರರು, ಇ-20 ಪೆಟ್ರೋಲ್ ಕುರಿತು ಮರುಪರಿಶೀಲನೆ ನಡೆಸುವಂತೆ ಆಗ್ರಹಿಸಿದ್ದಾರೆ.
=ಏಪ್ರಿಲ್‌ನಿಂದ ಕಡ್ಡಾಯಗೊಳಿಸಿರುವ ಇ-20 ಪೆಟ್ರೋಲ್ ಬಳಕೆಯಿಂದ ಕೆಲವು ವಾಹನಗಳಲ್ಲಿ ಮೈಲೇಜ್ ಕಡಿಮೆಯಾಗುತ್ತಿದೆ ಹಾಗೂ ಎಂಜಿನ್ ಮತ್ತು ಇಂಧನ ವ್ಯವಸ್ಥೆಯ ಕೆಲವು ಭಾಗಗಳಿಗೆ ಹಾನಿಯಾಗುತ್ತಿದೆ ಎಂಬುದು ಪ್ರತಿಭಟನಾಕಾರರ ಆರೋಪವಾಗಿದೆ. 2023ಕ್ಕೂ ಮೊದಲು ತಯಾರಿಸಲಾದ ಮತ್ತು ಇ-20 ಇಂಧನ ಬಳಕೆಗೆ ಹೊಂದಿಕೆಯಾಗದ ವಾಹನಗಳ ಮಾಲೀಕರು ಹೆಚ್ಚಿನ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ಅವರು ವಾದಿಸುತ್ತಿದ್ದಾರೆ.
ಈ ಹಿನ್ನೆಲೆ ಸರ್ಕಾರದ ಮುಂದೆ ಹಲವು ಪ್ರಮುಖ ಬೇಡಿಕೆಗಳನ್ನು ಪ್ರತಿಭಟನಾಕಾರರು ಇಟ್ಟಿದ್ದಾರೆ. ಇ-20 ಜೊತೆಗೆ ಇ-10 ಪೆಟ್ರೋಲ್‌ನ ಆಯ್ಕೆಯನ್ನೂ ಗ್ರಾಹಕರಿಗೆ ನೀಡಬೇಕು. ಇ-20 ಬಳಕೆಯಿಂದ ಉಂಟಾಗುತ್ತಿರುವ ಮೈಲೇಜ್ ನಷ್ಟವನ್ನು ಪರಿಗಣಿಸಿ ಪೆಟ್ರೋಲ್ ಬೆಲೆಯನ್ನು ಕನಿಷ್ಠ 20 ಶೇಕಡಾ ಇಳಿಸಬೇಕು. ಎಥೆನಾಲ್ ಮಿಶ್ರಣ ನೀತಿಯ ಕುರಿತು ಸಂಪೂರ್ಣ ಪಾರದರ್ಶಕ ಮಾಹಿತಿ ಸಾರ್ವಜನಿಕರಿಗೆ ಲಭ್ಯವಾಗಬೇಕು. ಇ-20ಗೆ ಹೊಂದಿಕೆಯಾಗದ ಹಳೆಯ ವಾಹನಗಳಿಗೆ ಉಂಟಾಗುವ ಹಾನಿಗೆ ಸರ್ಕಾರ ಪರಿಹಾರ ಘೋಷಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಇದರ ನಡುವೆಯೇ ದೆಹಲಿ ಸಾರಿಗೆದಾರರ ಸಂಘವೂ ಆಗಸ್ಟ್ 4ರಂದು ಪ್ರತ್ಯೇಕ ಪ್ರತಿಭಟನೆ ನಡೆಸುವುದಾಗಿ ಪ್ರಕಟಿಸಿದೆ. ಈ ಮೆರವಣಿಗೆಯೂ ಸಂಸತ್‌ವರೆಗೆ ಸಾಗಲಿದ್ದು, ಸರ್ಕಾರದ ಎಥೆನಾಲ್ ಮಿಶ್ರಣ ನೀತಿಯನ್ನು ಸ್ವತಂತ್ರ ವೈಜ್ಞಾನಿಕ ಸಮಿತಿಯಿಂದ ಪರಿಶೀಲಿಸುವಂತೆ ಆಗ್ರಹಿಸಲಾಗುತ್ತದೆ. ವಾಹನ ತಯಾರಕರು, ವಾಹನ ಮಾಲೀಕರು, ಗ್ರಾಹಕರು, ಸಾರಿಗೆ ಸಂಸ್ಥೆಗಳು ಹಾಗೂ ತಾಂತ್ರಿಕ ತಜ್ಞರನ್ನು ಒಳಗೊಂಡ ಸಮಗ್ರ ಅಧ್ಯಯನ ನಡೆಸಬೇಕು ಎಂದು ಸಂಘದ ಪ್ರತಿನಿಧಿಗಳು ತಿಳಿಸಿದ್ದಾರೆ.
ಎಥೆನಾಲ್ ಮಿಶ್ರಿತ ಇಂಧನ ಬಳಕೆಯನ್ನು ಕೇಂದ್ರ ಸರ್ಕಾರ ಪರಿಸರ ಸ್ನೇಹಿ ಕ್ರಮ ಹಾಗೂ ಕಚ್ಚಾ ತೈಲ ಆಮದು ಅವಲಂಬನೆಯನ್ನು ಕಡಿಮೆ ಮಾಡುವ ಮಹತ್ವದ ಯೋಜನೆ ಎಂದು ಸಮರ್ಥಿಸಿಕೊಂಡಿದೆ. ಆದರೆ ವಾಹನಗಳ ಕಾರ್ಯಕ್ಷಮತೆ ಮತ್ತು ಗ್ರಾಹಕರ ವೆಚ್ಚದ ಬಗ್ಗೆ ಮೂಡಿರುವ ಅನುಮಾನಗಳನ್ನು ಸರ್ಕಾರ ವೈಜ್ಞಾನಿಕವಾಗಿ ಸ್ಪಷ್ಟಪಡಿಸಬೇಕು ಎಂಬ ಒತ್ತಾಯವೂ ಹೆಚ್ಚುತ್ತಿದೆ.
ಜುಲೈ 31 ಮತ್ತು ಆಗಸ್ಟ್ 4ರಂದು ನಡೆಯಲಿರುವ ಈ ಪ್ರತಿಭಟನೆಗಳು ಸರ್ಕಾರದ ಇಂಧನ ನೀತಿಯ ಬಗ್ಗೆ ಹೊಸ ಚರ್ಚೆಗೆ ವೇದಿಕೆ ಕಲ್ಪಿಸುವ ಸಾಧ್ಯತೆ ಇದೆ.
