ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಹಾಡಹಗಲೇ ನಡೆದಿದ್ದ ರಿಯಲ್ ಎಸ್ಟೇಟ್ ಉದ್ಯಮಿ ಚರಣ್ (35) ಅವರ ಬರ್ಬರ ಹತ್ಯೆ ಪ್ರಕರಣಕ್ಕೆ ಇದೀಗ ಮಹತ್ವದ ತಿರುವು ಸಿಕ್ಕಿದೆ. ಯಲಹಂಕ ನ್ಯೂ ಟೌನ್‌ನಲ್ಲಿ ನಡೆದಿದ್ದ ಈ ಭೀಕರ ಕೊಲೆಯ ಹಿಂದಿನ ಸುಪಾರಿ ರಹಸ್ಯವನ್ನು ಪೊಲೀಸರು ಬಯಲಿಗೆಳೆದಿದ್ದಾರೆ. ಉದ್ಯಮಿಯ ಹತ್ಯೆಗೆ ಬರೋಬ್ಬರಿ 30 ಲಕ್ಷ ರೂಪಾಯಿ ಸುಪಾರಿ ನೀಡಲಾಗಿತ್ತು ಎಂಬ ಆಘಾತಕಾರಿ ಸಂಗತಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಕಿರಣ್ ಸೇರಿದಂತೆ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಪಾಲುದಾರನೇ ಕೊಲೆಗೆ ಮಾಸ್ಟರ್‌ಮೈಂಡ್
ಈ ಕೊಲೆ ಪ್ರಕರಣದ ಹಿಂದೆ ಮೃತ ಚರಣ್ ಅವರೊಂದಿಗೆ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದ ಪಾಲುದಾರ ಕಿರಣ್ ಎಂಬಾತನ ಕೈವಾಡ ಇರುವುದು ಪೊಲೀಸರ ತನಿಖೆಯಿಂದ ಬಹಿರಂಗವಾಗಿದೆ. ಚರಣ್ ಮತ್ತು ಕಿರಣ್ ಇಬ್ಬರೂ ಒಟ್ಟಿಗೆ ರಿಯಲ್ ಎಸ್ಟೇಟ್ ಉದ್ಯಮ ನಡೆಸುತ್ತಿದ್ದರು. ಆದರೆ, ವ್ಯವಹಾರದ ವಿಚಾರದಲ್ಲಿ ಇಬ್ಬರ ನಡುವೆ ಭಿನ್ನಾಭಿಪ್ರಾಯ ಉಂಟಾಗಿತ್ತು. ಕೋಟ್ಯಂತರ ರೂಪಾಯಿ ಹಣವನ್ನು ಚರಣ್ ವಂಚಿಸಿದ್ದಾರೆ ಎಂಬ ಆರೋಪವನ್ನು ಕಿರಣ್ ಮಾಡಿದ್ದ ಎನ್ನಲಾಗಿದೆ.
ಇದೇ ವಿಚಾರ ಇಬ್ಬರ ನಡುವಿನ ವೈಮನಸ್ಸಿಗೆ ಕಾರಣವಾಗಿತ್ತು. ವ್ಯವಹಾರದಿಂದ ಹೊರಬಂದ ಬಳಿಕವೂ ಚರಣ್ ವಿರುದ್ಧ ಕಿರಣ್ ದ್ವೇಷ ಸಾಧಿಸುತ್ತಿದ್ದ ಎನ್ನಲಾಗಿದೆ. ಈ ದ್ವೇಷವೇ ಕೊನೆಗೆ ಕೊಲೆಯ ಸಂಚಿಗೆ ಕಾರಣವಾಗಿದೆ. ಚರಣ್ ಅವರನ್ನು ಹತ್ಯೆ ಮಾಡಿಸಲು ಕಿರಣ್ ಬರೋಬ್ಬರಿ 30 ಲಕ್ಷ ರೂಪಾಯಿ ಸುಪಾರಿ ನೀಡಿದ್ದಾನೆ ಎಂಬ ಸ್ಫೋಟಕ ಮಾಹಿತಿ ಪೊಲೀಸರ ವಿಚಾರಣೆಯಲ್ಲಿ ಹೊರಬಿದ್ದಿದೆ.
30 ಲಕ್ಷಕ್ಕೆ ಕೊಲೆ ಡೀಲ್ ಫಿಕ್ಸ್
ಚರಣ್ ಹತ್ಯೆಗೆ ಕಿರಣ್ ನೀಡಿದ್ದ ಸುಪಾರಿಯನ್ನು ರುದ್ರೇಶ್ ಎಂಬಾತ ಪಡೆದುಕೊಂಡಿದ್ದ ಎನ್ನಲಾಗಿದೆ. ಬಳಿಕ ರುದ್ರೇಶ್, ಲೋಕೇಶ್ ಎಂಬಾತನೊಂದಿಗೆ ಮಾತುಕತೆ ನಡೆಸಿ ಹತ್ಯೆಗೆ ಸಂಚು ರೂಪಿಸಿದ್ದ. ಈ ಕೃತ್ಯವನ್ನು ಕಾರ್ಯಗತಗೊಳಿಸಲು ಆಕಾಶ್ ಹಾಗೂ ಮತ್ತೊಬ್ಬ ಕಿರಣ್ ಸೇರಿದಂತೆ ಇತರರನ್ನು ಬಳಸಿಕೊಂಡಿರುವುದು ತನಿಖೆಯಲ್ಲಿ ತಿಳಿದುಬಂದಿದೆ.
ಚರಣ್ ಅವರ ಚಲನವಲನಗಳ ಮೇಲೆ ಆರೋಪಿಗಳು ನಿಗಾ ಇರಿಸಿದ್ದರು. ಅವರು ಯಾವಾಗ ಕಚೇರಿಗೆ ಬರುತ್ತಾರೆ, ಎಲ್ಲೆಲ್ಲಿ ಓಡಾಡುತ್ತಾರೆ ಎಂಬುದನ್ನು ಗಮನಿಸಿ ಹತ್ಯೆಗೆ ಸೂಕ್ತ ಸಮಯಕ್ಕಾಗಿ ಕಾಯುತ್ತಿದ್ದರು. ಕೊನೆಗೆ ಚರಣ್ ಕಚೇರಿಗೆ ಬರುವ ಸಮಯವನ್ನೇ ಹತ್ಯೆಗೆ ಆಯ್ಕೆ ಮಾಡಿಕೊಂಡಿದ್ದರು ಎನ್ನಲಾಗಿದೆ.
ಪತ್ನಿಯ ಕಣ್ಣೆದುರೇ ಲಾಂಗ್, ಮಚ್ಚಿನಿಂದ ದಾಳಿ
ನವೆಂಬರ್ 13ರಂದು ಬೆಳಗ್ಗೆ ಯಲಹಂಕ ನ್ಯೂ ಟೌನ್‌ನಲ್ಲಿ ಈ ಭೀಕರ ಘಟನೆ ನಡೆದಿತ್ತು. ಎಂದಿನಂತೆ ಚರಣ್ ಅವರು ತಮ್ಮ ಕಚೇರಿಗೆ ಬರುತ್ತಿದ್ದ ಸಂದರ್ಭದಲ್ಲಿ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಏಕಾಏಕಿ ಅವರ ಮೇಲೆ ದಾಳಿ ನಡೆಸಿದ್ದರು. ಪತ್ನಿಯ ಕಣ್ಣೆದುರೇ ಲಾಂಗ್ ಮತ್ತು ಮಚ್ಚುಗಳಿಂದ ಮನಬಂದಂತೆ ಹಲ್ಲೆ ನಡೆಸಿ ಸ್ಥಳದಿಂದ ಪರಾರಿಯಾಗಿದ್ದರು.
ಐವರು ಆರೋಪಿಗಳು ಅಂದರ್- ತನಿಖೆಯಲ್ಲಿ ಸ್ಫೋಟಕ ಮಾಹಿತಿ!
ಘಟನೆ ಸಂಬಂಧ ಯಲಹಂಕ ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿತ್ತು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಆರೋಪಿಗಳ ಪತ್ತೆಗೆ ತನಿಖೆ ಆರಂಭಿಸಿದ್ದರು. ಇದೀಗ ಪ್ರಮುಖ ಆರೋಪಿ ಕಿರಣ್ ಸೇರಿದಂತೆ ಐವರನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಕೊಲೆಯ ಹಿಂದಿನ ಸುಪಾರಿ ಜಾಲ ಬಯಲಾಗಿದೆ.
