ಬೆಂಗಳೂರು: ಬೆಂಗಳೂರಿನ ಬ್ರೂಕ್ ಫೀಲ್ಡ್‌ನಲ್ಲಿರುವ ಬೇಬಿ ಕೇರ್ ಸೆಂಟರ್‌ನಲ್ಲಿ ಮಕ್ಕಳ ಮೇಲೆ ದೈಹಿಕ ಹಿಂಸೆ ನಡೆಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಈ ಹಿನ್ನೆಲೆ ಹೆಚ್‌ಎಎಲ್ (HAL) ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಮೂವರು ಸಿಬ್ಬಂದಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದಾರೆ.
ಪ್ರಕರಣದ ಹಿನ್ನೆಲೆ ಏನು?
CAPGEMINI TECHNOLOGY SERVICES ಕಂಪನಿಯ ಉದ್ಯೋಗಿಗಳ ಮಕ್ಕಳ ಆರೈಕೆಗಾಗಿ ಬ್ರೂಕ್ ಫೀಲ್ಡ್‌ನಲ್ಲಿ ಬೇಬಿ ಕೇರ್ ಸೆಂಟರ್ ಅನ್ನು ತೆರೆಯಲಾಗಿತ್ತು. ಕೆಲಸ ಮಾಡುವ ಪೋಷಕರು ತಮ್ಮ ಮಕ್ಕಳನ್ನು ಇಲ್ಲಿ ಬಿಟ್ಟು ಹೋಗುತ್ತಿದ್ದು, ಕೆಲಸ ಮುಗಿದ ಬಳಿಕ ಕರೆದೊಯ್ಯುತ್ತಿದ್ದರು. ಕಂಪನಿಯು ಸ್ವತಃ ಈ ಕೇಂದ್ರಕ್ಕೆ ಸಿಬ್ಬಂದಿಯನ್ನು ನಿಯೋಜನೆ ಮಾಡಿತ್ತು.
ಆದರೆ, ಇತ್ತೀಚೆಗೆ ಈ ಬೇಬಿ ಕೇರ್ ಒಳಗಡೆ ನಡೆದ ಘಟನೆಯೊಂದು ಬೆಳಕಿಗೆ ಬಂದಿದೆ. ಕೇಂದ್ರದಲ್ಲಿ ಕೆಲಸ ಮಾಡುವ ಆಯಾಗಳು ಮಕ್ಕಳಿಗೆ ದೈಹಿಕವಾಗಿ ಹಿಂಸೆ ನೀಡಿ, ವಿಕೃತಿಯಲ್ಲಿ ತೊಡಗಿರುವ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಆಯಾಗಳು ಮಕ್ಕಳನ್ನು ಹೊಡೆಯುವುದು, ಎತ್ತಿ ಎಸೆಯುವುದು ಮತ್ತು ಕಿರುಚಾಡುವ ದೃಶ್ಯಗಳು ಕಂಡುಬಂದಿವೆ. ಇದು ಮಕ್ಕಳ ಪೋಷಕರು ಮತ್ತು ಸಾರ್ವಜನಿಕರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಪೊಲೀಸರ ಕಾರ್ಯಾಚರಣೆ
ವಿಡಿಯೋ ವೈರಲ್ ಆದ ಕೂಡಲೇ ಮಕ್ಕಳ ಸಹಾಯವಾಣಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ, ಅವರು ಹಾಲ್ (ಹೆಚ್‌ಎಎಲ್) ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಬಿಎನ್ಎಸ್ ಮತ್ತು ಬಾಲಾಪರಾಧಿ ನ್ಯಾಯ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಮಂಜುಳ, ವಿಜಯಲಕ್ಷ್ಮೀ, ಭವಾನಿ, ಸಿಂಧು ಮತ್ತು ಬಿಂದು ಎಂಬ ಐವರು ಆಯಾಗಳ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ಪ್ರಾಥಮಿಕ ತನಿಖೆಯಲ್ಲಿ ವೈರಲ್ ಆದ ವಿಡಿಯೋ ಹಳೆಯದು ಎಂದು ಪೊಲೀಸರಿಗೆ ತಿಳಿದುಬಂದಿದೆ. ಆದರೂ, ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಈ ಹಿನ್ನೆಲೆ, ವಿಡಿಯೋದಲ್ಲಿ ಕಂಡುಬಂದ ಮೂವರು ಸಿಬ್ಬಂದಿಗೆ ಹಾಲ್ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದಾರೆ.
ಇದರೊಂದಿಗೆ, ಬೇಬಿ ಕೇರ್ ಕೇಂದ್ರದ ನಿರ್ವಹಣಾ ವಿಭಾಗ ಮತ್ತು CAPGEMINI ಕಂಪನಿಯ ಆಡಳಿತ ವಿಭಾಗಕ್ಕೂ ನೋಟಿಸ್ ನೀಡಲು ಪೊಲೀಸರು ಸಿದ್ಧತೆ ಮಾಡಿಕೊಂಡಿದ್ದಾರೆ.
ಸದ್ಯ ಈ ಬೇಬಿ ಕೇರ್ ಸೆಂಟರ್‌ನಲ್ಲಿ 18 ಮಕ್ಕಳು ಇದ್ದಾರೆ. ವಿಡಿಯೋ ವೈರಲ್ ಆದ ಬಳಿಕ ಕಂಪನಿಯು ತಕ್ಷಣ ಕಾರ್ಯಪ್ರವೃತ್ತವಾಗಿ, ಅಲ್ಲಿನ ಸಿಬ್ಬಂದಿಯನ್ನು ಬದಲಾಯಿಸಿ ಹೊಸ ಆಯಾಗಳನ್ನು ನಿಯೋಜಿಸಿದೆ. ಹೊಸ ಸಿಬ್ಬಂದಿ ಇದೀಗ ಮಕ್ಕಳ ಆರೈಕೆಯಲ್ಲಿ ತೊಡಗಿದ್ದಾರೆ.
