ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ ವಾಮಾಚಾರ..! ಪೋಸ್ಟ್ ಆಫೀಸ್‌ಗೆ ಬಂದ ಸಂಶಯಾಸ್ಪದ ಪಾರ್ಸೆಲ್‌ನಲ್ಲಿ ಏನಿತ್ತು?

Untitled design 2026 03 10T120257.932

ಬೆಂಗಳೂರು: ಸಿಲಿಕಾನ್ ಸಿಟಿಯ ಹೆಮ್ಮೆಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (KIA) ಸದಾ ಹೈ ಅಲರ್ಟ್‌ನಲ್ಲಿರುತ್ತದೆ. ಈ ಹಿಂದೆ ಹಲವು ಬಾರಿ ಬಾಂಬ್ ಬೆದರಿಕೆ ಕರೆಗಳಿಂದ ಸುದ್ದಿಯಾಗಿದ್ದ ಈ ನಿಲ್ದಾಣದಲ್ಲಿ, ಇದೀಗ ಅತ್ಯಂತ ವಿಚಿತ್ರ ಘಟನೆಯೊಂದು ಬೆಳಕಿಗೆ ಬಂದಿದೆ. ವಿಮಾನ ನಿಲ್ದಾಣದ ಆವರಣದಲ್ಲಿರುವ ಪೋಸ್ಟ್ ಆಫೀಸ್‌ಗೆ ಬಂದಿರುವ ಒಂದು ನಿಗೂಢ ಪಾರ್ಸೆಲ್, ಅಲ್ಲಿನ ಸಿಬ್ಬಂದಿಯನ್ನು ಬೆಚ್ಚಿಬೀಳಿಸಿದೆ.

ಪಾರ್ಸೆಲ್ ಒಳಗಿದ್ದ ವಸ್ತುಗಳು ಕಂಡು ಸಿಬ್ಬಂದಿ ಶಾಕ್!

ಸಾಮಾನ್ಯವಾಗಿ ಪಾರ್ಸೆಲ್‌ಗಳಲ್ಲಿ ಉಡುಗೊರೆ ಅಥವಾ ದಾಖಲೆಗಳು ಇರುತ್ತವೆ. ಆದರೆ, ಸೋಮವಾರ ಬಂದ ಈ ಪಾರ್ಸೆಲ್ ತೆರೆದ ಸಿಬ್ಬಂದಿಗೆ ಎದುರಾಗಿದ್ದು ಮಾತ್ರ ಭಯಾನಕ ದೃಶ್ಯ. ಪಾರ್ಸೆಲ್ ಒಳಗಡೆ ಸ್ತ್ರೀ ಮತ್ತು ಪುರುಷರ ನಗ್ನ ಭಾವಚಿತ್ರಗಳು, ಅವುಗಳ ಮೇಲೆ ಹಾಕಲಾಗಿದ್ದ ಹೂವಿನ ಹಾರಗಳು, ಕೊಳೆತ ಟೊಮೆಟೋ, ಕಬ್ಬಿಣದ ಚೂರುಗಳು ಹಾಗೂ ಒಂದು ಟೂತ್‌ಪೇಸ್ಟ್ ಪತ್ತೆಯಾಗಿದೆ. ಈ ವಸ್ತುಗಳನ್ನು ಕಂಡ ತಕ್ಷಣ ಸಿಬ್ಬಂದಿಗೆ ಇದು ಯಾವುದೋ ‘ಮಾಟ-ಮಂತ್ರ’ ಅಥವಾ ‘ವಾಮಾಚಾರ’ದ ಪ್ರಯೋಗವಿರಬಹುದು ಎಂಬ ಶಂಕೆ ಮೂಡಿದೆ.

ಈ ವಿಚಿತ್ರ ವಸ್ತುಗಳನ್ನು ಕಂಡ ಪೋಸ್ಟ್ ಆಫೀಸ್ ಸಿಬ್ಬಂದಿ ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ಏರ್‌ಪೋರ್ಟ್‌ನಂತಹ ಕಟ್ಟುನಿಟ್ಟಿನ ಭದ್ರತೆ ಇರುವ ಜಾಗಕ್ಕೆ ಇಂತಹ ಅನಿಷ್ಟ ವಸ್ತುಗಳನ್ನು ಯಾರು ಮತ್ತು ಏಕೆ ಕಳುಹಿಸಿದ್ದಾರೆ ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ. ಕೆಲವು ಸಿಬ್ಬಂದಿಯ ಮೇಲೆ ಇದು ಕೆಟ್ಟದಾಗಿ ಪರಿಣಾಮ ಬೀರಿದೆ. ಸಿಬ್ಬಂಧಿಗಳು ಭಯದಿಂದಾಗಿ  ಕೆಲಸ ಮಾಡಲು ಹಿಂಜರಿಯುತ್ತಿದ್ದಾರೆ. ಜೊತೆಗೆ ಕಚೇರಿಯ ಒಳಗೆ ಹೋಗಲು ಮತ್ತು ಅಲ್ಲಿನ ವಸ್ತುಗಳನ್ನು ಮುಟ್ಟಲು ಭಯಪಡುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಘಟನೆಯ ಗಂಭೀರತೆಯನ್ನು ಪರಿಗಣಿಸಿರುವ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ (KIAL) ಆಡಳಿತ ಮಂಡಳಿಯು ತಕ್ಷಣವೇ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದೆ. ಈ ಅನಿಷ್ಟ ಪಾರ್ಸೆಲ್ ಅನ್ನು ಎಲ್ಲಿಂದ ಬುಕ್ ಮಾಡಲಾಗಿದೆ ? ಕಳುಹಿಸಿದ ವ್ಯಕ್ತಿ ಯಾರು ? ಮತ್ತು ಇದರ ಹಿಂದಿನ ಉದ್ದೇಶವೇನು ಎಂಬುದನ್ನು ಪತ್ತೆಹಚ್ಚಲು ಪೋಲೀಸರು ತನಿಖೆ ಆರಂಭಿಸಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳು ಹಾಗೂ ಪಾರ್ಸೆಲ್ ಮೇಲಿರುವ ವಿಳಾಸದ ಆಧಾರದ ಮೇಲೆ ಆರೋಪಿಗಳಿಗಾಗಿ ಬಲೆ ಬೀಸಲಾಗಿದೆ.

ಏರ್‌ಪೋರ್ಟ್‌ನಂತಹ ಸೂಕ್ಷ್ಮ ಪ್ರದೇಶದಲ್ಲಿ ಇಂತಹ ಘಟನೆಗಳು ಭದ್ರತಾ ಲೋಪವನ್ನು ತೋರಿಸುವುದಲ್ಲದೆ, ನೌಕರರ ಮಾನಸಿಕ ಸ್ಥೈರ್ಯದ ಮೇಲೆಯೂ ಪರಿಣಾಮ ಬೀರುತ್ತಿವೆ. ಸದ್ಯಕ್ಕೆ ಈ ಪಾರ್ಸೆಲ್ ಅನ್ನು ವಶಕ್ಕೆ ಪಡೆದಿರುವ ಅಧಿಕಾರಿಗಳು, ಸಾರ್ವಜನಿಕರು ಅಥವಾ ಸಿಬ್ಬಂದಿ ಗಾಬರಿ ಪಡಬಾರದು ಎಂದು ಮನವಿ ಮಾಡಿದ್ದಾರೆ.

Exit mobile version