ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಒಂದು ಆಶ್ಚರ್ಯಕರ ಘಟನೆ ನಡೆದಿದೆ. ದುಬೈನಿಂದ ಬಂದಿದ್ದ ಒಬ್ಬ ವ್ಯಕ್ತಿಯು 3.5 ಕೆಜಿ ಚಿನ್ನದ ಬಿಸ್ಕೆಟ್‌ಗಳನ್ನು ಒಳಗೊಂಡ ಬ್ಯಾಗ್ ಅನ್ನು ಸಹ ಪ್ರಯಾಣಿಕರ ಟ್ರಾಲಿಯಲ್ಲಿ ಬಿಟ್ಟು ಓಡಿಹೋಗಿರುವ ಘಟನೆ ನಡೆದಿದೆ. ಕಸ್ಟಮ್ಸ್ ಅಧಿಕಾರಿಗಳ ಗಮನಕ್ಕೆ ಬಂದಿದ್ದು, ಕಸ್ಟಮ್ಸ್ ಅಧಿಕಾರಿಗಳ ಕೈಗೆ ಸಿಕ್ಕಿಬೀಳುವ ಭಯದಿಂದ ಈ ಕೃತ್ಯವನ್ನು ನಡೆಸಿದ್ದಾನೆ ಎಂದು ಶಂಕಿಸಲಾಗಿದೆ.
ಪ್ರಯಾಣಿಕರ ಟ್ರಾಲಿಯನ್ನು ತಳ್ಳಿಕೊಂಡು ಚೆಕಿಂಗ್ ವಿಭಾಗಕ್ಕೆ ಬರುತ್ತಿದ್ದಾಗ, ಚಿನ್ನದ ಬ್ಯಾಗ್ ಟ್ರಾಲಿಯಿಂದ ಹೊರಗಡೆ ಬಿದ್ದಿದೆ. ತನ್ನ ಟ್ರಾಲಿಯಲ್ಲಿ ಚಿನ್ನದ ಬ್ಯಾಗ್ ಕಂಡು ಕಂಗಾಲಾದ ಪ್ರಯಾಣಿಕ ಕೂಡಲೇ ಏರ್‌ಪೋರ್ಟ್ ಭದ್ರತಾ ಪಡೆಗೆ ಮಾಹಿತಿ ನೀಡಿದ್ದಾರೆ. ಕಸ್ಟಮ್ಸ್ ಅಧಿಕಾರಿಗಳು ಪರಿಶೀಲನೆ ನಡೆಸಿದಾಗ, ಕೋಟಿಗಟ್ಟಲೆ ಬೆಲೆಬಾಳುವ 3.5 ಕೆಜಿ ಚಿನ್ನ ಪತ್ತೆಯಾಗಿದೆ.
ಕಸ್ಟಮ್ಸ್ ಅಧಿಕಾರಿಗಳು ಈಗ ಈ ಘಟನೆಯ ಬಗ್ಗೆ ತೀವ್ರ ತನಿಖೆ ನಡೆಸುತ್ತಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದ್ದು, ಚಿನ್ನದ ಬ್ಯಾಗ್ ಇಟ್ಟವರು ಯಾರು ಮತ್ತು ಯಾವ ಪ್ರಯಾಣಿಕ ಈ ಕೃತ್ಯವನ್ನು ನಡೆಸಿದ್ದಾನೆ ಎಂಬುದರ ಬಗ್ಗೆ ತಿಳಿದುಕೊಳ್ಳಲು ಪ್ರಯತ್ನಿಸಲಾಗುತ್ತಿದೆ. ಮೇಲ್ನೋಟಕ್ಕೆ, ದುಬೈನಿಂದ ಬಂದಿದ್ದ ವ್ಯಕ್ತಿಯೇ ಚಿನ್ನವನ್ನು ಬಿಟ್ಟು ಓಡಿಹೋಗಿರುವ ಶಂಕೆ ವ್ಯಕ್ತವಾಗಿದೆ. ಈಗಾಗಲೇ 3.5 ಕೆಜಿ ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ ಮತ್ತು ತನಿಖೆಯನ್ನು ಮುಂದುವರೆಸಿದ್ದಾರೆ.