ಬೆಂಗಳೂರು: ಸಿಲಿಕಾನ್ ಸಿಟಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ನಡೆಸಿದ ಮಿಂಚಿನ ಕಾರ್ಯಾಚರಣೆಯಲ್ಲಿ, ವಿದೇಶದಿಂದ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಸುಮಾರು 2.97 ಕೋಟಿ ರೂಪಾಯಿ ಮೌಲ್ಯದ ಹೈಡ್ರೋಪೋನಿಕ್ ಗಾಂಜಾವನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಥೈಲ್ಯಾಂಡ್‌ನ ಪುಕೆಟ್ ಮತ್ತು ಮಲೇಶಿಯಾದಿಂದ ಬೆಂಗಳೂರಿಗೆ ಬಂದಿಳಿದಿದ್ದ ಮೂವರು ಪ್ರಯಾಣಿಕರ ಮೇಲೆ ಅಧಿಕಾರಿಗಳಿಗೆ ಅನುಮಾನ ಮೂಡಿತ್ತು. ಇಮಿಗ್ರೇಶನ್ ವಿಭಾಗದಲ್ಲಿ ಅವರ ಚಲನವಲನಗಳನ್ನು ಗಮನಿಸಿದಾಗ ಅವರು ಗಾಬರಿಗೊಂಡಿರುವುದು ಕಂಡುಬಂದಿದೆ. ತಕ್ಷಣವೇ ಕಾರ್ಯಪ್ರವೃತ್ತರಾದ ಕಸ್ಟಮ್ಸ್ ಅಧಿಕಾರಿಗಳು, ಮೂವರನ್ನು ತಡೆಹಿಡಿದು ಅವರ ಲಗೇಜ್ ಬ್ಯಾಗ್‌ಗಳನ್ನು ಕೂಲಂಕುಷವಾಗಿ ತಪಾಸಣೆ ನಡೆಸಿದರು.
ಬ್ಯಾಗ್‌ನಲ್ಲಿ ಅಡಗಿಸಿಟ್ಟಿದ್ದ 8.5 ಕೆಜಿ ಹೈಡೋ ಗಾಂಜಾ
ಆರೋಪಿಗಳು ಅತ್ಯಂತ ಚಾಣಾಕ್ಷತನದಿಂದ ಲಗೇಜ್ ಬ್ಯಾಗ್‌ಗಳ ಒಳಗೆ ಗಾಂಜಾವನ್ನು ಪ್ಯಾಕೆಟ್‌ಗಳ ರೂಪದಲ್ಲಿ ಅಡಗಿಸಿಟ್ಟಿದ್ದರು. ತಪಾಸಣೆಯ ವೇಳೆ ಒಟ್ಟು 8.5 ಕೆಜಿ ತೂಕದ ಹೈಡ್ರೋಪೋನಿಕ್ ಗಾಂಜಾ ಪತ್ತೆಯಾಗಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಈ ತಳಿಯ ಗಾಂಜಾಕ್ಕೆ ಭಾರಿ ಬೇಡಿಕೆಯಿದ್ದು, ಇದರ ಒಟ್ಟು ಮೌಲ್ಯ ಅಂದಾಜು 3 ಕೋಟಿ ರೂಪಾಯಿ ಎಂದು ಲೆಕ್ಕ ಹಾಕಲಾಗಿದೆ.
ಹೈಡ್ರೋಪೋನಿಕ್ ಗಾಂಜಾ ಎಂದರೇನು?
ಸಾಮಾನ್ಯ ಗಾಂಜಾಕ್ಕಿಂತ ಇದು ಹೆಚ್ಚು ಪ್ರಬಲ ಮತ್ತು ದುಬಾರಿ. ಮಣ್ಣಿನ ಬದಲಿಗೆ ಪೋಷಕಾಂಶಯುಕ್ತ ದ್ರಾವಣದ ನೀರಿನಲ್ಲಿ (Hydroponics) ಬೆಳೆಯಲಾಗುವ ಈ ಗಾಂಜಾವು ವಿದೇಶಗಳಲ್ಲಿ ಅತಿ ಹೆಚ್ಚು ಬೆಲೆಗೆ ಮಾರಾಟವಾಗುತ್ತದೆ. ಬೆಂಗಳೂರಿನಲ್ಲಿ ನಡೆಯುವ ಹೈ-ಪ್ರೊಫೈಲ್ ಪಾರ್ಟಿಗಳನ್ನು ಗುರಿಯಾಗಿಸಿಕೊಂಡು ಇದನ್ನು ತರಲಾಗುತ್ತಿತ್ತು ಎಂದು ಶಂಕಿಸಲಾಗಿದೆ.
ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲು
ಬಂಧಿತ ಮೂವರು ಪ್ರಯಾಣಿಕರ ವಿರುದ್ಧ ಎನ್‌ಡಿಪಿಎಸ್ (NDPS) ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಈ ಮಾದಕವಸ್ತು ಕಳ್ಳಸಾಗಣೆ ಜಾಲದ ಹಿಂದೆ ಯಾರಿದ್ದಾರೆ ? ಬೆಂಗಳೂರಿನಲ್ಲಿ ಇದನ್ನು ಸ್ವೀಕರಿಸಬೇಕಿದ್ದವರು ಯಾರು ? ಎಂಬ ಬಗ್ಗೆ ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದಾರೆ.





