ಬೆಂಗಳೂರು: ಸಿಲಿಕಾನ್ ಸಿಟಿ ಎಂದು ಖ್ಯಾತಿ ಗಳಿಸಿದ ಬೆಂಗಳೂರು ಇದೀಗ ಗಂಭೀರ ವಾಯುಮಾಲಿನ್ಯ ಸಂಕಷ್ಟದ ಅಂಚಿಗೆ ತಲುಪುತ್ತಿದೆ. ನಗರದಲ್ಲಿ ದಿನದಿಂದ ದಿನಕ್ಕೆ ಗಾಳಿ ಗುಣಮಟ್ಟ ಕುಸಿಯುತ್ತಿದ್ದು, ಉಸಿರಾಟದ ಸಮಸ್ಯೆಗಳು ಹೆಚ್ಚಾಗುವ ಭೀತಿ ಎದುರಾಗಿದೆ. ಗಾಳಿ ಗುಣಮಟ್ಟ ಸೂಚ್ಯಂಕ (ಎಕ್ಯೂಐ) ಆತಂಕಕಾರಿ ಮಟ್ಟ ತಲುಪಿರುವುದು ತಜ್ಞರು ಹಾಗೂ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.
ಹವಾಮಾನ ಹಾಗೂ ಮಾಲಿನ್ಯ ತಜ್ಞರ ಮಾಹಿತಿ ಪ್ರಕಾರ, ಬೆಂಗಳೂರಿನ ಗಾಳಿ ಗುಣಮಟ್ಟದಲ್ಲಿ ಇತ್ತೀಚೆಗೆ ಕಂಡುಬರುವ ತೀವ್ರ ಏರುಪೇರುಗಳು ಈ ಹಿಂದೆ ಎಂದಿಗೂ ಕಂಡಿರಲಿಲ್ಲ. ಡಿಸೆಂಬರ್ 11ರಂದು ನಗರದಲ್ಲಿನ ಎಕ್ಯೂಐ 180ರ ಮಟ್ಟ ತಲುಪಿದ್ದು, ಶುಕ್ರವಾರ ರಾತ್ರಿ 8 ಗಂಟೆಯ ಹೊತ್ತಿಗೆ ಅದು 162ಕ್ಕೆ ಇಳಿದಿದೆ. ಮಕ್ಕಳ, ವೃದ್ಧರ ಹಾಗೂ ಉಸಿರಾಟ ಸಂಬಂಧಿತ ಕಾಯಿಲೆ ಹೊಂದಿರುವವರಿಗೆ ಹೆಚ್ಚಿನ ಅಪಾಯವನ್ನುಂಟುಮಾಡುತ್ತಿದೆ.
ಇದೇ ಸ್ಥಿತಿ ಮುಂದುವರಿದರೆ ಬೆಂಗಳೂರು ಕೂಡ ದಿಲ್ಲಿಯಂತೆ ತೀವ್ರ ವಾಯುಮಾಲಿನ್ಯ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇದೆ. 35 ವರ್ಷಗಳ ಬಳಿಕ ಬೆಂಗಳೂರಿನಲ್ಲಿ ಪಿಎಂ 2.5 (ಅತಿ ಸೂಕ್ಷ್ಮ ಮಾಲಿನ್ಯ ಕಣಗಳು) ದತ್ತಾಂಶ ಇಂತಹ ಮಟ್ಟ ತಲುಪಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಪಿಎಂ 2.5 ಕಣಗಳು ನೇರವಾಗಿ ಶ್ವಾಸಕೋಶವನ್ನು ಪ್ರವೇಶಿಸಿ, ಉಸಿರಾಟ ಬಿಕ್ಕಟ್ಟು, ಆಸ್ತಮಾ, ಹೃದಯ ಸಂಬಂಧಿತ ಸಮಸ್ಯೆಗಳು ಹಾಗೂ ಆರೋಗ್ಯಕ್ಕೆ ಕಾರಣವಾಗಬಹುದು ಎಂದು ವೈದ್ಯರು ಎಚ್ಚರಿಸುತ್ತಿದ್ದಾರೆ.
ವಾಯುಮಾಲಿನ್ಯ ಹೆಚ್ಚಾಗಲು ಹಲವು ಕಾರಣಗಳು
ಬೆಂಗಳೂರಿನ ಬಹುತೇಕ ಪ್ರದೇಶಗಳಲ್ಲಿ ನಡೆಯುತ್ತಿರುವ ರಸ್ತೆ, ಮೆಟ್ರೋ ಹಾಗೂ ಕಟ್ಟಡ ಕಾಮಗಾರಿಗಳು ಪ್ರಮುಖ ಕಾರಣವಾಗಿವೆ. ಅನೇಕ ಕಾಮಗಾರಿಗಳು ಅರೆಬರೆಯಾಗಿಯೇ ನಿಂತುಹೋಗಿದ್ದು, ಅವುಗಳಿಂದ ನಿರಂತರವಾಗಿ ಧೂಳು ಹಬ್ಬುತ್ತಿದೆ. ಧೂಳಿನ ನಿಯಂತ್ರಣಕ್ಕೆ ಅಗತ್ಯವಾದ ನೀರು ಸಿಂಪಡಣೆ ಹಾಗೂ ಸುರಕ್ಷತಾ ಕ್ರಮಗಳು ಜಾರಿಯಾಗದಿರುವುದು ಸಮಸ್ಯೆಯನ್ನು ಮತ್ತಷ್ಟು ಹೆಚ್ಚಿಸುತ್ತಿವೆ.
ಇದರ ಜೊತೆಗೆ, ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ವಾಹನ ದಟ್ಟಣೆ ಕೂಡ ವಾಯುಮಾಲಿನ್ಯದ ಮತ್ತೊಂದು ಪ್ರಮುಖ ಕಾರಣವಾಗಿದೆ. ಹಲವರು ಎಮಿಷನ್ ಟೆಸ್ಟ್ ಮಾಡಿಸದೇ ವಾಹನಗಳನ್ನು ಓಡಿಸುತ್ತಿರುವುದು, ಹಳೆಯ ವಾಹನಗಳಿಂದ ಹೊರಬರುತ್ತಿರುವ ಹೊಗೆ, ಟ್ರಾಫಿಕ್ ಜಾಮ್‌ಗಳಲ್ಲಿ ಉಂಟಾಗುವ ಇಂಧನದ ಅತಿಯಾದ ಬಳಕೆ ಸೇರಿ ಗಾಳಿಯನ್ನು ವಿಷಕಾರಕವಾನ್ನಾಗಿಸುತ್ತಿವೆ.
ಚಳಿ ವಾತಾವರಣವೂ ಗಾಳಿ ಗುಣಮಟ್ಟ ಇಳಿಕೆಗೆ ಕಾರಣವಾಗಿದೆ ಎಂದು ತಜ್ಞರು ವಿವರಿಸುತ್ತಾರೆ. ಚಳಿಗಾಲದಲ್ಲಿ ವಾತಾವರಣದಲ್ಲಿನ ಮಾಲಿನ್ಯಕಾರಕ ಕಣಗಳು ಮೇಲಕ್ಕೆ ಏರದೇ, ಕೆಳಗಡೆಯಲ್ಲೇ ಸಿಲುಕಿಕೊಂಡಿರುತ್ತವೆ. ಮಂಜು ಬೀಳುವುದರಿಂದ ಈ ಕಣಗಳು ಗಾಳಿಯೊಂದಿಗೆ ಸೇರಿ, ಉಸಿರಾಡಲು ಸಾದ್ಯವಾಗದ ವಾತಾವರಣವನ್ನು ಸೃಷ್ಟಿಸುತ್ತವೆ.
