ಬೆಂಗಳೂರಿನ ಹಲವೆಡೆ ಫೆ. 5-6ರಂದು ಕಾವೇರಿ ನೀರು ಪೂರೈಕೆಯಲ್ಲಿ ವ್ಯತ್ಯಯ

Untitled design (92)

ಬೆಂಗಳೂರು: ಬೆಂಗಳೂರು ನಗರದ ನಾಗರಿಕರು ಮತ್ತೊಮ್ಮೆ ನೀರಿನ ಸಮಸ್ಯೆಗೆ ಸಿದ್ಧರಾಗಬೇಕಾದ ಪರಿಸ್ಥಿತಿ ಎದುರಾಗಿದೆ. ಬೆಂಗಳೂರು ಜಲಮಂಡಳಿ (BWSSB) ಕೈಗೊಂಡಿರುವ ತುರ್ತು ನಿರ್ವಹಣಾ ಹಾಗೂ ಮೂಲಸೌಕರ್ಯ ಸುಧಾರಣಾ ಕಾಮಗಾರಿಗಳ ಹಿನ್ನೆಲೆಯಲ್ಲಿ ಫೆಬ್ರವರಿ 5 ಮತ್ತು 6ರಂದು ನಗರದ ಹಲವಾರು ಭಾಗಗಳಲ್ಲಿ ಕಾವೇರಿ ನೀರು ಸರಬರಾಜಿನಲ್ಲಿ ತೀವ್ರ ವ್ಯತ್ಯಯ ಉಂಟಾಗಲಿದೆ.

ಬೃಹತ್ ಗಾತ್ರದ ಪೈಪ್‌ಲೈನ್‌ಗಳನ್ನು ಜೋಡಿಸುವ ಕಾರ್ಯಕ್ಕಾಗಿ ಸುಮಾರು 24 ಗಂಟೆಗಳ ಕಾಲ ಸಂಪೂರ್ಣವಾಗಿ ಪಂಪಿಂಗ್ ಕಾರ್ಯವನ್ನು ಸ್ಥಗಿತಗೊಳಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ನಗರ ನಿವಾಸಿಗಳು ಮುನ್ನೆಚ್ಚರಿಕೆಯಾಗಿ ಅಗತ್ಯವಿರುವಷ್ಟು ನೀರನ್ನು ಸಂಗ್ರಹಿಸಿಟ್ಟುಕೊಳ್ಳುವಂತೆ ಜಲಮಂಡಳಿ ಮನವಿ ಮಾಡಿದೆ.

ಬೆಂಗಳೂರು ಜಲಮಂಡಳಿಯ ಅಧ್ಯಕ್ಷರಾದ ಡಾ. ವಿ. ರಾಮ್ ಪ್ರಸಾತ್ ಮನೋಹರ್ ಅವರು ನೀಡಿರುವ ಮಾಹಿತಿಯಂತೆ, ಮೂಲಸೌಕರ್ಯ ಅಭಿವೃದ್ಧಿಯ ಭಾಗವಾಗಿ 1200 ಮಿಮೀ ಹಾಗೂ 700 ಮಿಮೀ ವ್ಯಾಸದ ಬೃಹತ್ ಪೈಪ್‌ಲೈನ್‌ಗಳ ಜೋಡಣೆ ಕಾರ್ಯ ನಡೆಯಲಿದೆ. ಮುಂದಿನ ದಿನಗಳಲ್ಲಿ ನಿರಂತರ ಮತ್ತು ಸಮರ್ಪಕ ನೀರು ಪೂರೈಕೆಗೆ ಸಹಕಾರಿಯಾಗಲಿದೆ ಎಂದು ಅವರು ತಿಳಿಸಿದ್ದಾರೆ.

ಈ ಕಾಮಗಾರಿಯ ಪರಿಣಾಮವಾಗಿ ಕಾವೇರಿ ನೀರು ಸರಬರಾಜು ಯೋಜನೆಯ ಹಂತ–I ಹಾಗೂ ಹಂತ–II ರ ಪಂಪಿಂಗ್ ಕಾರ್ಯಾಚರಣೆ ಸಂಪೂರ್ಣವಾಗಿ ಬಂದ್ ಆಗಲಿದೆ. ಫೆಬ್ರವರಿ 5ರಂದು ಗುರುವಾರ ಬೆಳಿಗ್ಗೆ 6 ಗಂಟೆಯಿಂದ ಫೆಬ್ರವರಿ 6ರಂದು ಶುಕ್ರವಾರ ಬೆಳಿಗ್ಗೆ 6 ಗಂಟೆಯವರೆಗೆ, ಒಟ್ಟು 24 ಗಂಟೆಗಳ ಕಾಲ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.

ನಗರದ ಹಲವು ಪ್ರಮುಖ ಪ್ರದೇಶಗಳಲ್ಲಿ ಈ ನೀರು ಸರಬರಾಜಿನ ವ್ಯತ್ಯಯದ ಪರಿಣಾಮ ಕಾಣಿಸಿಕೊಳ್ಳಲಿದೆ. ದಕ್ಷಿಣ ಬೆಂಗಳೂರಿನ ಮಾಗಡಿ ರಸ್ತೆ, ಕದರೇನಹಳ್ಳಿ, ಪದ್ಮನಾಭನಗರ, ಚಿಕ್ಕಲಸಂದ್ರ, ಕುಮಾರಸ್ವಾಮಿ ಲೇಔಟ್ (1 ಮತ್ತು 2ನೇ ಹಂತ), ಇಸ್ರೋ ಲೇಔಟ್, ಯಲಚೇನಹಳ್ಳಿ, ಕನಕಪುರ ಮುಖ್ಯ ರಸ್ತೆ, ಉತ್ತರಹಳ್ಳಿ, ಬನಶಂಕರಿ 5ನೇ ಹಂತ, ಸುಬ್ರಮಣ್ಯಪುರ ಹಾಗೂ ಕೆನರಾ ಬ್ಯಾಂಕ್ ಕಾಲೋನಿಯಲ್ಲಿ ನೀರು ಪೂರೈಕೆ ಕಡಿತವಾಗಲಿದೆ.

ಇದೇ ರೀತಿ ಮಧ್ಯ ಮತ್ತು ಪೂರ್ವ ಬೆಂಗಳೂರಿನ ಶಾಂತಿನಗರ, ಎಂ.ಜಿ. ರಸ್ತೆ, ರಿಚ್ಯಂಡ್ ಟೌನ್, ಆಸ್ಟಿನ್ ಟೌನ್, ವಿವೇಕ್ ನಗರ, ಎಜಿಪುರ, ಡೊಮೂರು ಲೇಔಟ್, ಕೋಡಿಹಳ್ಳಿ, ಕೇಂಬ್ರಿಡ್ಜ್ ಲೇಔಟ್ ಮತ್ತು ಕೋರಮಂಗಲದ 2, 4, 5, 6, 7 ಮತ್ತು 8ನೇ ಬ್ಲಾಕ್‌ಗಳಲ್ಲೂ ನೀರಿನ ಸಮಸ್ಯೆ ಎದುರಾಗಲಿದೆ.

ಇತರ ಭಾಗಗಳಾದ ಮಡಿವಾಳ, ಸುದ್ದಗುಂಟೆ ಪಾಳ್ಯ, ಆಡುಗೋಡಿ, ಜಯನಗರದ 4ರಿಂದ 9ನೇ ಬ್ಲಾಕ್‌ಗಳು, ಜೆ.ಪಿ. ನಗರದ 1, 2 ಮತ್ತು 3ನೇ ಹಂತಗಳು, ತಿಲಕ್ ನಗರ, ವಿಲ್ಸನ್ ಗಾರ್ಡನ್, ನಿಮ್ಹಾನ್ಸ್ ಆಸ್ಪತ್ರೆ ಸುತ್ತಮುತ್ತಲಿನ ಪ್ರದೇಶ, ಚಾಮರಾಜಪೇಟೆ, ಶ್ರೀನಗರ ಹಾಗೂ ಹೊಸಕೆರೆಹಳ್ಳಿಯಲ್ಲೂ ನೀರು ಸರಬರಾಜು ವ್ಯತ್ಯಯವಾಗಲಿದೆ ಎಂದು ಜಲಮಂಡಳಿ ಸ್ಪಷ್ಟಪಡಿಸಿದೆ.

ಕಾಮಗಾರಿ ಪೂರ್ಣಗೊಂಡ ತಕ್ಷಣವೇ ನೀರು ಸರಬರಾಜನ್ನು ಪುನರಾರಂಭಿಸಲಾಗುವುದು ಎಂದು ಜಲಮಂಡಳಿ ಭರವಸೆ ನೀಡಿದೆ. ಸಾರ್ವಜನಿಕರು ಜಲಮಂಡಳಿಯೊಂದಿಗೆ ಸಹಕರಿಸಿ, ನೀರನ್ನು ಮಿತವಾಗಿ ಬಳಸಿ ಹಾಗೂ ಮುಂಚಿತವಾಗಿಯೇ ಅಗತ್ಯ ವ್ಯವಸ್ಥೆ ಮಾಡಿಕೊಂಡುಕೊಳ್ಳುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.

Exit mobile version